ಬಿಜೈ: ನಗರದ ಪ್ರಮುಖ ಜಂಕ್ಷನ್ಗಳಲ್ಲಿ ಒಂದಾದ ಬಿಜೈ ಕೆಎಸ್ಸಾರ್ಟಿಸಿ ಜಂಕ್ಷನ್ನಲ್ಲಿ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ.
ಈ ಜಂಕ್ಷನ್ನಲ್ಲಿ ಈ ಹಿಂದೆ ಟ್ರಾಫಿಕ್ ಸಿಗ್ನಲ್ ಕಂಬಗಳು ಇದ್ದರೂ ಅದನ್ನು ಕಾರ್ಯಾಚರಣೆ ಮಾಡುತ್ತಿರಲಿಲ್ಲ. ಕೆಲವು ತಿಂಗಳುಗಳಿಂದ ನಗರದ ಹಲವು ಕಡೆಗಳಲ್ಲಿ ಟ್ರಾಫಿಕ್ ಸಿಗ್ನಲ್ಗಳಲ್ಲಿ ಅಳವಡಿಸಲಾಗುತ್ತಿದೆ. ಅದರಂತೆ ಬಿಜೈಯಲ್ಲಿಯೂ ಅಳವಡಿಸಿ ಸದ್ಯ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಸಾರ್ವಜನಿಕರ ಪ್ರಕಾರ ಬಿಜೈ ಕೆಎಸ್ಸಾರ್ಟಿಸಿ ಜಂಕ್ಷನ್ನಲ್ಲಿ ಸಿಗ್ನಲ್ ವ್ಯವಸ್ಥೆ ಅಗತ್ಯವಿತ್ತು. ಈ ಭಾಗದಲ್ಲಿ ಕೆಎಸ್ಸಾರ್ಟಿಸಿ, ಸಿಟಿ, ಸರ್ವಿಸ್ ಬಸ್ಗಳು ಹಗಲು, ರಾತ್ರಿ ಅತ್ತಿಂದಿತ್ತ ಸಂಚರಿಸುತ್ತದೆ. ರಾತ್ರಿ ವೇಳೆ ದೂರದ ಊರುಗಳಿಗೆ ತೆರಳುವ ಬಸ್ಗಳು ಅಲ್ಲೇ ನಿಲ್ಲುತ್ತದೆ. ಈ ಭಾಗದಲ್ಲಿ ಬಸ್ ನಿಲ್ದಾಣಕ್ಕೆ ತಿರುವು ಪಡೆಯುವ ಪ್ರದೇಶವೂ ಅವೈಜ್ಞಾನಿಕವಾಗಿದೆ. ಬಸ್ ನಿಲ್ದಾಣದಿಂದ ಹೊರಬರುವ ಬಸ್ಗಳು ಕೂಡ ಏರು ವೃತ್ತದಲ್ಲಿ ಬಂದು, ಎಡಕ್ಕೆ ತಿರುಗಿಗುತ್ತದೆ. ಈ ಪ್ರದೇಶವೂ ಎತ್ತರ-ತಗ್ಗಿನಿಂದ ಕೂಡಿದ್ದು, ಇದ್ದು, ಅವೈಜ್ಞಾನಿಕ ಮಾದರಿಯಲ್ಲಿದೆ ಎಂಬ ದೂರುಗಳು ಇವೆ. ಈ ಹಿನ್ನೆಲೆಯಲ್ಲಿ ಜಂಕ್ಷನ್ನಲ್ಲಿ ಸಿಗ್ನಲ್ ವ್ಯವಸ್ಥೆ ಬೇಕಿತ್ತು.
ಲೇಡಿಹಿಲ್ನ ನಾರಾಯಣಗುರು ವೃತ್ತಕ್ಕೆ ಸ್ಮಾರ್ಟ್ಸಿಟಿಯ ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ (ಐಟಿಎಂಎಸ್)ನಡಿ ಟ್ರಾಫಿಕ್ ಸಿಗ್ನಲ್ ಅನ್ನು ಇತ್ತೀಚೆಗೆ ಅಳವಡಿಸಲಾಗಿದೆ. ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ಪ್ರಮುಖ ಪ್ರಾಜೆಕ್ಟ್ಗಳಲ್ಲಿ ಒಂದಾಗಿರುವ ಕಮಾಂಡ್ ಕಂಟ್ರೋಲ್ ಸೆಂಟ್ರಲ್ (ಸಿಸಿಸಿ)ನಡಿ ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ ಮೂಲಕ ನಗರದ ವಾಹನ ಸಂಚಾರ ವ್ಯವಸ್ಥೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ವಿವಿಧ ಕಾಮಗಾರಿಗಳು ಈಗಾಗಲೇ ನಡೆಯುತ್ತಿದೆ. ಬಲ್ಲಾಳ್ಬಾಗ್, ಎಂಪಾಯರ್ ಮಾಲ್ ಮತ್ತು ಬೆಸೆಂಟ್ ಜಂಕ್ಷನ್ ಮುಂತಾದ ಕಡೆಗಳಲ್ಲಿ ಮುಂದಿನ ದಿನಗಳಲ್ಲಿ ಸಿಗ್ನಲ್ ವ್ಯವಸ್ಥೆ ಬರಲಿದೆ.
ಪ್ರಮುಖ ಜಂಕ್ಷನ್
ಬಿಜೈ ಕೆಎಸ್ಸಾರ್ಟಿಸಿ ಪ್ರದೇಶದ ರಸ್ತೆ ಕಿರಿದಾಗಿರುವ ಕಾರಣ ಸಿಗ್ನಲ್ ವ್ಯವಸ್ಥೆ ಇರಲಿಲ್ಲ. ಈ ಜಂಕ್ಷನ್ನಿಂದ ಕಾಪಿಕಾಡ್, ನಂತೂರು, ಲಾಲ್ಬಾಗ್, ಕೆಎಸ್ಸಾರ್ಟಿಸಿಗೆ ರಸ್ತೆ ಕವಲೊಡೆಯುತ್ತದೆ. ಇಲ್ಲಿ ವ್ಯವಸ್ಥಿತ ಸಿಗ್ನಲ್, ಪಾದಚಾರಿ ಮಾರ್ಗ ಇರದ ಪರಿಣಾಮ ವಿವಿಧ ಕಡೆಯಿಂದ ಬರುವ ವಾಹನ ತಿರುವು ಪಡೆಯಬೇಕಾದರೆ ತುಸು ಕಷ್ಟವಾಗುತ್ತಿತ್ತು.