ಸಿಂಧನೂರು: ಜೂ.25ರಿಂದ ಜು.4ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಜತೆಗೆ ಅವರಿಗೆ ಯಾವುದೇ ತೊಂದರೆ ಆಗದಂತೆ ಪರೀಕ್ಷೆ ನಡೆಸಲು ಕ್ರಮ ವಹಿಸಬೇಕೆಂದು ಶಾಸಕ ವೆಂಕಟರಾವ್ ನಾಡಗೌಡ ಅಧಿಕಾರಿಗಳಿಗೆ ಸೂಚಿಸಿದರು
ನಗರದ ಆರ್.ಎಂ.ಎಸ್. ಶಾಲೆಯಲ್ಲಿ ಶುಕ್ರವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಸಿದ್ಧತೆ ಕುರಿತು ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು. ಕೋವಿಡ್ ಸಂಕಷ್ಟದ ಮಧ್ಯೆ ಪರೀಕ್ಷೆ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಭಯ ನಿವಾರಿಸುವ, ಅವರಲ್ಲಿ ಧೈರ್ಯ ತುಂಬುವ ಜೊತೆಗೆ ಆರೋಗ್ಯ ರಕ್ಷಣೆಗೆ ಅಗತ್ಯ ಕ್ರಮ ವಹಿಸಬೇಕು ಎಂದರು.
ತಾಲೂಕಿನಲ್ಲಿ ನಗರದಲ್ಲಿ 7 ಮತ್ತು ಗ್ರಾಮೀಣ ಭಾಗದಲ್ಲಿ 7ಸೇರಿ 14 ಪರೀಕ್ಷಾ ಕೇಂದ್ರಗಳಿದ್ದು, ಒಟ್ಟು 5,488 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಒಂದು ಕೊಠಡಿಯಲ್ಲಿ 20 ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ. ಇನ್ನು ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಮತ್ತು ಸಮರ್ಪಕ ಬಸ್ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಸ್ಯಾನಿಟೈಜರ್, ವಿದ್ಯಾರ್ಥಿಗಳಿಗೆ ಮಾಸ್ಕ್ ವ್ಯವಸ್ಥೆ, ಸಾಮಾಜಿಕ ಅಂತರ ಪಾಲನೆ ಸೇರಿ ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು ಕ್ವಾರಂಟೈನ್ ಕೇಂದ್ರ ಸ್ಥಳಾಂತರಿಸಿ: ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರ ಇರುವ ಕಡೆಗಳಲ್ಲಿನ ಕ್ವಾರಂಟೈನ್ ಕೇಂದ್ರಗಳನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದರು.
ತಹಶೀಲ್ದಾರ್ ಮಂಜುನಾಥ ಭೋಗಾವತಿ, ಬಿಇಒ ಅಮರಪ್ಪ ಭೋವಿ, ನಗರಸಭೆ ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ, ಟಿಎಚ್‌ಒ ನಾಗಾರಾಜ ಪಾಟೀಲ, ಸಿಪಿಐ ಬಾಲಚಂದ್ರ ಲಕ್ಕಂ, ಘಟಕ ವ್ಯವಸ್ಥಾಪಕ ಶಂಕರ ನಾಯಕ್, ಆರ್‌ಎಂಎಸ್ ಶಾಲೆ ಮುಖ್ಯ ಗುರು ಬಸಲಿಂಗಪ್ಪ ಇತರರು ಇದ್ದರು.