Advertisement

ಸರ್ಕಾರಿ ಕಾಲೇಜಿಗೆ ಬೇಕಿದೆ ಕಾಯಕಲ್ಪ

03:23 PM Jan 29, 2020 | Naveen |

ಸಿಂಧನೂರು: ಜಿಲ್ಲೆಯಲ್ಲೆ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ದೊಡ್ಡ ಕಾಲೇಜು ಎಂದೇ ಖ್ಯಾತಿಯನ್ನು ಪಡೆದಿರುವ ನಗರದ ಕುಷ್ಟಗಿ ರಸ್ತೆಯಲ್ಲಿರುವ ಸರಕಾರಿ ಪದವಿ ಮಹಾವಿದ್ಯಾಲಯ ಹಲವು ಸಮಸ್ಯೆ, ಸೌಲಭ್ಯಗಳ ಕೊರತೆ ನಡುವೆ ನಲುಗುತ್ತಿದೆ.

Advertisement

ಸಿಂಧನೂರು ಸರ್ಕಾರಿ ಪದವಿ ಮಹಾವಿದ್ಯಾಲಯ ಕಟ್ಟಡವನ್ನು 1981ರಲ್ಲಿ ನಿರ್ಮಿಸಿದ್ದು, ಸುಮಾರು 40 ವರ್ಷವಾಗುತ್ತಿದೆ. ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಪ್ರಸಕ್ತ ವರ್ಷ ಕಾಲೇಜಿನಲ್ಲಿ 733 ವಿದ್ಯಾರ್ಥಿನಿಯರು, 1747 ವಿದ್ಯಾರ್ಥಿಗಳು ಸೇರಿ 2,480 ವಿದ್ಯಾರ್ಥಿಗಳಿದ್ದಾರೆ. ಕಾಲೇಜಿನಲ್ಲಿ ಕುಡಿವ ನೀರು, ಶೌಚಾಲಯ, ಗ್ರಂಥಾಲಯ ಸಮಸ್ಯೆ, ಉಪನ್ಯಾಸಕರು, ಸಿಬ್ಬಂದಿ ಕೊರತೆ ಇದೆ. ಕಟ್ಟಡದ ಮೇಲ್ಛಾವಣಿ ಸಿಮೆಂಟ್‌ ಉದುರಿ ಬೀಳುತ್ತಿದೆ. ವಿದ್ಯಾರ್ಥಿಗಳು ಕೊಠಡಿಯೊಳಗೆ ಆತಂಕದಲ್ಲಿ ಪಾಠ ಕೇಳುವಂತಾಗಿದೆ.

ಸೌಲಭ್ಯ ಕೊರತೆ: ಕಾಲೇಜು ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. ಕಾಲೇಜಿನಲ್ಲಿ ಒಂದೇ ಶೌಚಾಲಯವಿದ್ದು, ನಿರ್ವಹಣೆ ಕೊರತೆಯಿಂದ ದುರ್ವಾಸನೆ ಬೀರುತ್ತಿದೆ. ಇದರಿಂದ ವಿದ್ಯಾರ್ಥಿಗಳು ಕೊಠಡಿಯಲ್ಲಿ ಕುಳಿತು ಪಾಠ ಕೇಳಲು ಸಹ ಆಗುತ್ತಿಲ್ಲ. ಕಾಲೇಜಿನ ಆವರಣದಲ್ಲಿ ಕುಡಿಯುವ ನೀರಿನ ಟ್ಯಾಂಕ್‌ ಇದ್ದು, ಆದರೆ ನೀರು ಬರುತ್ತಿಲ್ಲ. ಕಾಲೇಜಿಗೆ ಬರುವ ಗ್ರಾಮೀಣ ವಿದ್ಯಾರ್ಥಿಗಳು ಮಧ್ಯಾಹ್ನ ಊಟ ಮಾಡಿ ನೀರಿಗಾಗಿ ಪರದಾಡುವಂತಾಗುತ್ತದೆ.

ಕೆಲವರು ಮನೆಯಿಂದಲೇ ನೀರು ತುಂಬಿಕೊಂಡು ಬರಬೇಕಿದೆ. ಇನ್ನು ಕಾಲೇಜಿನಲ್ಲಿ ಗ್ರಂಥಾಲಯ ಸೌಲಭ್ಯವಿಲ್ಲ. ಬಸ್‌ ಸೌಲಭ್ಯವಿಲ್ಲ: ಸರ್ಕಾರಿ ಪದವಿ ಕಾಲೇಜು ಸಿಂಧನೂರು ನಗರದಿಂದ 1.5 ಕಿ.ಮೀ. ಅಂತರದಲ್ಲಿದೆ. ಇಲ್ಲಿಗೆ ಸಿಂಧನೂರು ಬಸ್‌ ನಿಲ್ದಾಣದಿಂದ ಸರಿಯಾಗಿ ಬಸ್‌ ಸೌಲಭ್ಯವಿಲ್ಲ. ನಗರ ಸಂಚಾರ ಬಸ್‌ ಇದ್ದರೂ ಇಲ್ಲದಂತಾಗಿದೆ. ಹೀಗಾಗಿ ಕೆಲ ವಿದ್ಯಾರ್ಥಿ, ವಿದ್ಯಾರ್ಥಿನಿಯರು ನಡೆದುಕೊಂಡೇ ಕಾಲೇಜಿಗೆ ಹೋದರೆ ಮತ್ತೆ ಕೆಲವರು ಹಣ ಕೊಟ್ಟು ಖಾಸಗಿ ವಾಹನದಲ್ಲಿ ಸಂಚರಿಸುತ್ತಾರೆ. ಬಸ್‌ ಸೌಲಭ್ಯ ಕಲ್ಪಿಸುವಂತೆ ಹಲವು ಬಾರಿ ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಉಪನ್ಯಾಸಕರ ಕೊರತೆ: ಕಾಲೇಜು ನ್ಯಾಕ್‌ ಕಮಿಟಿಯಿಂದ ಬಿ ಗ್ರೇಡ್‌ ಮಾನ್ಯತೆ ಹೊಂದಿದೆ. ಆದರೆ ವಿವಿಧ ವಿಷಯಗಳ ಉಪನ್ಯಾಸಕರ ಕೊರತೆ ಇದೆ. ಹೀಗಾಗಿ ವಿದ್ಯಾರ್ಥಿಗಳ ಕಲಿಕೆಗೆ ಹಿನ್ನಡೆ ಆಗುತ್ತಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಕಾಲೇಜಿಗೆ ಕಾಯಕಲ್ಪ ನೀಡುವ ಜೊತೆಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಉಪನ್ಯಾಸಕರನ್ನು ನೇಮಿಸಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

Advertisement

ಪದವಿ ಕಾಲೇಜಿನಲ್ಲಿ ಶೌಚಾಲಯ, ಕುಡಿಯುವ ನೀರು ಸೇರಿ ಇತರೆ ಸಮಸ್ಯೆಗಳಿವೆ. ಈಗಾಗಲೇ ಕಾಲೇಜು ಅಭಿವೃದ್ಧಿ ಸಮಿತಿಯಿಂದ ಶೌಚಾಲಯ ನಿರ್ಮಿಸಲು ತೀರ್ಮಾನಿಸಲಾಗಿದೆ. ಶಾಸಕರು ಸಹ ಇದರ ಬಗ್ಗೆ ಚರ್ಚಿಸಿದ್ದಾರೆ. ಶೀಘ್ರದಲ್ಲೆ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆ.
ಹನುಮಂತಪ್ಪ ಎಸ್‌.
ಪ್ರಭಾರಿ ಪ್ರಾಂಶುಪಾಲರು ಸರಕಾರಿ
ಪದವಿ ಮಹಾವಿದ್ಯಾಲಯ ಸಿಂಧನೂರು

ಶೌಚಾಲಯ, ಕುಡಿಯುವ ನೀರು, ಗ್ರಂಥಾಲಯ ಇಲ್ಲದೇ ಸಮಸ್ಯೆ ಎದುರಿಸುತ್ತಿದ್ದೇವೆ. ಓದುವ ಆಸಕ್ತಿ ನಮ್ಮಲ್ಲೂ ಇದೆ. ಆದರೆ ಕಾಲೇಜಿನಲ್ಲಿ ಸೌಲಭ್ಯ ಕೊರತೆಯಿಂದಾಗಿ ಕಲಿಕೆಗೆ ಹಿನ್ನಡೆ ಆಗುತ್ತಿದೆ. ಈ ಕುರಿತು ಸಂಬಂಧ ಪಟ್ಟವರಿಗೂ ತಿಳಿಸಿದರೂ ಪ್ರಯೋಜನವಾಗಿಲ್ಲ.
ಹೆಸರು ಹೇಳಲು
ಇಚ್ಛಿಸದ ಕಾಲೇಜಿನ ವಿದ್ಯಾರ್ಥಿ

ಚಂದ್ರಶೇಖರ ಯರದಿಹಾಳ

Advertisement

Udayavani is now on Telegram. Click here to join our channel and stay updated with the latest news.

Next