Advertisement

Sindhanur: ಐದೇ ದಿನದಲ್ಲಿ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು: ಇಬ್ಬರ ಬಂಧನ

11:57 PM Oct 08, 2023 | Team Udayavani |

ಸಿಂಧನೂರು: ತಾಲೂಕಿನ ಪಗಡದಿನ್ನಿ ಕ್ಯಾಂಪಿನ ವಿ.ವಾಸು ಎನ್ನುವವರ ಮನೆಯಲ್ಲಿ ಅ.3ರಂದು ನಡೆದಿದ್ದ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಭಾನುವಾರ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Advertisement

ಮಸ್ಕಿ ತಾಲೂಕಿನ ಬೇಡರಕಾರಲಕುಂಟಿ ಗ್ರಾಮದ ಸೋಮಣ್ಣ (20), ಪಗಡದಿನ್ನಿ ಪೈ ಕ್ಯಾಂಪಿನ ಬಸವರಾಜ ಅಂಥೋನಿ (31) ಬಂಧಿತರು.
ಮಧ್ಯಾಹ್ನ 6.30ರಿಂದ 7.30ರ ಸುಮಾರಿಗೆ ಮನೆಯ ಹಿಂಬಾಗಿಲನ್ನು ಜೋರಾಗಿ ತಳ್ಳಿ ಒಳಗಿ ನುಗ್ಗಿ ಬ್ಯುರೋದಲ್ಲಿದ್ದ ಚಿನ್ನಾಭರಣ, ನಗದು ದೋಚಿದ್ದಾರೆ ಎಂದು ಪಿ.ವಾಸು ದೂರು ಸಲ್ಲಿಸಿದ್ದರು. ಆರೋಪಿಗಳನ್ನು ಬಂಧಿಸಿರುವ ಪೊಲೀಸರು 22 ತೊಲೆ ಚಿನ್ನಾಭರಣವನ್ನು ಜಪ್ತಿ ಮಾಡಿದ್ದಾರೆ.

ಚಿನ್ನಾಭರಣ, ನಗದು ಕಳವು
ಅ.3ರಂದು ಮನೆಗೆ ನುಗ್ಗಿದ ಕಳ್ಳರು, 2 ಲಕ್ಷ ರೂ.ಮೌಲ್ಯದ 60 ಗ್ರಾಂ.ತೂಕದ 4 ಬಂಗಾರದ ಬಳೆ, 1.80 ಲಕ್ಷ ರೂ.ಬೆಲೆ ಬಾಳುವ ಬಂಗಾರದ ನೆಕ್ಲೇಸ್, 75 ಸಾವಿರ ರೂ.ಮೌಲ್ಯದ 20 ಗ್ರಾ.ಂ.ಬ್ರಾಸ್‍ಲೆಟ್, 90 ಸಾವಿರ ರೂ.ಮೌಲ್ಯದ 30 ಗ್ರಾಂ.ಕರಿಮಣಿ ಸರ, 12 ಗ್ರಾಂ.ತೂಕದ 40 ಸಾವಿರ ರೂ.ಬೆಲೆ ಬಾಳುವ ಬಂಗಾರದ ಸರ, 95 ಸಾವಿರ ರೂ.ಮೌಲ್ಯದ 30 ಗ್ರಾಂ.ಬಂಗಾರದ ಓಲೆ, 40 ಸಾವಿರ ರೂ.ಮೌಲ್ಯದ 3 ಬಂಗಾರದ ಉಂಗುರ, ನಗದು ಹಣ 35 ಸಾವಿರ ರೂ.ಸೇರಿದಂತೆ ಒಟ್ಟು 7 ಲಕ್ಷ 55 ಸಾವಿರ ರೂ.ಮೌಲ್ಯದ ಚಿನ್ನಾಭರಣ, ನಗದು ಕಳವು ಮಾಡಿದ್ದಾರೆಂಬ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು.

ಎಸ್ಪಿ ಶ್ಲಾಘನೆ
ಪ್ರಕರಣದ ತನಿಖೆಗಾಗಿ ಡಿವೈಎಸ್ಪಿ ಬಿ.ಎಸ್.ತಳವಾರ ನೇತೃತ್ವದಲ್ಲಿ ಗ್ರಾಮೀಣ ಸಿಪಿಐ ವೀರಾರೆಡ್ಡಿ.ಹೆಚ್, ಪಿಎಸ್‍ಐ ಭರತ್‍ಪ್ರಕಾಶ್ ಡಿ.ಪಿ., ಚಂದ್ರಶೇಖರ ಹಿರೇಮಠ, ಪ್ರಹ್ಲಾದ್ ನಾಯ್ಕ, ಮಲ್ಲಪ್ಪ ನಾಗರಾಳ, ಗೋಪಾಲ, ಅನಿಲಕುಮಾರ, ಶಿವಲಿಂಗಪ್ಪ, ತಿಪ್ಪಣ್ಣ, ಸಂಗನಗೌಡ, ಸಂಗಮೇಶ ಗುಡದೂರು, ಸಿಡಿಆರ್‍ಸೆಲ್‍ನ ಅಜೀಂ ತಂಡವನ್ನು ರಚಿಸಲಾಗಿತ್ತು. 5 ದಿನದಲ್ಲಿ ತಂಡವು ಕಾರ್ಯಾಚರಣೆ ನಡೆಸಿ ಕಳ್ಳರನ್ನು ಬಂಧಿಸಿ, ಕಳವಾದ ಚಿನ್ನಾಭರಣ ಮಾಡುವಲ್ಲಿ ಯಶಸ್ವಿಯಾಗಿರುವುದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್, ಹೆಚ್ಚುವರಿ ಎಸ್ಪಿ ಶಿವಕುಮಾರ್.ಆರ್.ಪ್ರಶಂಸೆ ವ್ಯಕ್ತಪಡಿಸಿ, ಬಹುಮಾನ ಘೋಷಿಸಿದ್ದಾರೆ.

ಅಡ್ಡಿಪಡಿಸಲು ಬಂದವರಿಗೆ ಬಿಸಿ
ಬಂಧಿತ ಆರೋಪಿಗಳ ಆರೋಗ್ಯ ಪರೀಕ್ಷೆಗಾಗಿ ತಾಲೂಕು ಆಸ್ಪತ್ರೆಗೆ ಕರೆತಂದ ವೇಳೆ ಯಾರೋ ಕೆಲವರು ಆಗಮಿಸಿ, ಪೊಲೀಸರಿಗೆ ಅನೇಕ ಪ್ರಶ್ನೆಯೊಡ್ಡುವ ಮೂಲಕ ಕೆಲ ಹೊತ್ತು ಗೊಂದಲ ಸೃಷ್ಟಿಸಿದರು. ದಿಢೀರ್ ಜಾಗೃತರಾದ ಪೊಲೀಸರು, ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಲು ನೀವು ಯಾರು? ಎಂದು ಗದರಿಸಿ ಪೊಲೀಸ್ ಜೀಪಿನಲ್ಲಿ ಹತ್ತಿಸಲು ಮುಂದಾಗುತ್ತಿದ್ದಂತೆ ಅಲ್ಲಿಂದ ಪರಾರಿಯಾದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next