ವಿಜಯಪುರ : ತನ್ನ ಜಮೀನಿನಲ್ಲಿ ಬಲವಂತವಾಗಿ ದಾರಿಬಿಡಲು ಒತ್ತಾಯದ ಸಹಿ ಪಡೆದಿದ್ದಾರೆಂದು ಆರೋಪಿಸಿ ರೈತ ಮಹಿಳೆಯೊಬ್ಬರು ತಹಶೀಲ್ದಾರ್ ಕಚೇರಿ ಎದುರು ವಿಷದ ಬಾಟಲಿ ಹಿಡಿದೇ ಪ್ರತಿಭಟನೆ ನಡೆಸಿದ್ದಾರೆ.
ಸಿಂದಗಿ ತಹಶೀಲ್ದಾರ್ ಕಚೇರಿ ಎದುರು ವಿಷದ ಬಾಟಲಿ ಹಿಡಿದು ಪ್ರತಿಭಟಿಸಿದ ರೈತ ಮಹಿಳೆ ಚಾಂದಕವಟೆ ಗ್ರಾಮದ ಶಾಮಲಾಬಾಯಿ ಸುಳ್ಳೊಳ್ಳಿ. ಚಾಂದಕವಟೆ ಗ್ರಾಮದಲ್ಲಿರುವ ತನ್ನ ಜಮೀನಿನಲ್ಲಿ ಬೇರೆ ರೈಥರಿಗೆ ಹೊಲಕ್ಕೆ ಹೋಗಲು ದಾರಿ ಬಿಡಲಾಗಿದೆ ಎಂದು ಬಲವಂತದಿಂದ ಸಹಿ ಮಾಡಿಸಿಕೊಂಡಿದ್ದಾರೆ ಎಂದು ಶಾಮಲಾಬಾಯಿ ಆಕ್ರೋಶ ಹೊರ ಹಾಕಿದ್ದಾರೆ.
ಗ್ರಾಮದ ಗ್ರಾಮಲೆಕ್ಕಿಗ ಪಿ.ಕೆ.ಹುಡೇದ್ ಎಂಬಾತ ತನ್ನಿಂದ ಬಲವಂತವಾಗಿ ಸಹಿ ಪಡೆದಿದ್ದಾನೆ. ಪಕ್ಕದ ಜಮೀನಿನವರಿಗೆ ತಮ್ಮ ಹೊಲಕ್ಕೆ ಹೋಗಲು ದಾರಿ ಇದೆ. ಆದರೂ ನನ್ನ ಜಮೀನನಲ್ಲಿ ಹಾಯ್ದು ಹೋಗಲು ಅವಕಾಶ ಮಾಡಿಕೊಡಲು ನನ್ನಿಂದ ಹಾಗೂ ನನ್ನ ಮಗನಿಂದ ಬಲವಂತವಾಗಿ ಸಹಿ ಪಡೆದಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ಕುತಂತ್ರದಿಂದ ನನ್ನ ಜಮೀನಿನಲ್ಲಿ ಅನ್ಯರು ಅನಗತ್ಯವಾಗಿ ಹಾಯ್ದು ಹೋಗಲು ದಾರಿ ಮಾಡಿಕೊಡುವ ಮೂಲಕ ಜಮೀನಿಗೆ ಹಾನಿ ಮಾಡಲು ಮುಂದಾಗಿದ್ದಾರೆ ಎಂದು ದೂರುತ್ತಿದ್ದಾರೆ. ಶನಿವಾರ ವಿಷದ ಬಾಟಲಿ ಸಮೇತ ಸಿಂದಗಿ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಶಾಮಲಾಬಾಯಿ, ಕೂಡಲೇ ಗ್ರಾಮ ಲೆಕ್ಕಿಗನ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ವಿಷ ಸೇವಿಸುವುದಾಗಿ ಎಚ್ಚರಿಕೆ ನೀಡಿದಳು.
ಕೂಡಲೇ ಮಹಿಳೆಯ ಕೈಯಲ್ಲಿದ್ದ ವಿಷದ ಬಾಟಲಿಯನ್ನು ಕಿತ್ತುಕೊಂಡ ಸ್ಥಳೀಯರು ಶಾಮಲಾಬಾಯಿ ಹಾಗೂ ಆಕೆಯ ಮಗನನ್ನು ತಹಶೀಲ್ದಾರ ಪ್ರದೀಪ ಹಿರೇಮಠ ಎದುರು ಸಮಸ್ಯೆ ನಿವೇದಿಸಿಕೊಳ್ಳುವಂತೆ ಕರೆದೊಯ್ದರು. ನೊಂದ ಮಹಿಳೆಯನ್ನು ತಹಶೀಲ್ದಾರ್ ಮಾತನಾಡಿಸಿ, ಮಾಹಿತಿ ಪಡೆದರು.
ಕಚೇರಿಯಲ್ಲಿ ನೆಲದ ಮೇಲೆ ಮಹಿಳೆಯನ್ನು ಕೂಡಿಸಿ ಮಾಹಿತಿ ಪಡೆದಿದ್ದು, ದಲಿತ ಸಮುದಾಯದವಳು ಎಂಬ ಕಾರಣಕ್ಕೆ ರೈತ ಮಹಿಳೆ, ಮಗ ಬಸವರಾಜ ಇಬ್ಬರನ್ನೂ ನೆಲದ ಮೇಲೆ ಕೂಡಿಸಿ ಮಾಹಿತಿ ಪಡೆಯುವ ಮೂಲಕ ತಹಶೀಲ್ದಾರ್ ದಲಿತರಿಗೆ ಅವಮಾನ ಮಾಡಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.ಅಲ್ಲದೇ ಇಡೀ ಪ್ರಕರಣದಲ್ಲಿ ದಲಿತ ಮಹಿಳೆಗೆ ಮೋಸ ಮಾಡಿರುವ ಗ್ರಾಮ ಲೆಕ್ಕಿಗನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.