ಸಿಂದಗಿ: ಪಟ್ಟಣದ ಅಭಿವೃದ್ಧಿ ವಿಷಯದಲ್ಲಿ ವಿವಿಧ ಯೋಜನೆಗಳು ಹಳ್ಳ ಹಿಡಿದಿವೆ. ಹೀಗಾಗಿ ಪಟ್ಟಣ ಅಭಿವೃದ್ಧಿಯಿಂದ ಹಿಂದೆ ಸರಿಯುತ್ತಿದೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರವಾದರೂ ಅಧಿಕಾರಿಗಳು ನಿರಾಸಕ್ತರಾಗಿದ್ದಾರೆ ಎಂದು ಆರೋಪಿಸಿ ಪಟ್ಟಣದ ನಗರ ಸುಧಾರಣಾ ಸಮಿತಿ ಮತ್ತು ವಿವಿಧ ಸಂಘಟನೆಗಳ ಸಹಯೋಗದಲ್ಲಿ ತಹಶೀಲ್ದಾರ್ ಬಸವರಾಜ ಕಡಕಭಾವಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಗರ ಸುಧಾರಣಾ ಸಮಿತಿ ಮುಖ್ಯಸ್ಥ ಅಶೋಕ ಅಲ್ಲಾಪುರ ಮಾತನಾಡಿ, ಪಟ್ಟಣದ ಪುರಸಭೆ ಕರ ವಸೂಲಾತಿಯಲ್ಲಿ ಪ್ರತಿಶತ 98ರಷ್ಟಾಗಿದ್ದರು ಸಹ ಸೌಲಭ್ಯಗಳಲ್ಲಿ ಸಂಪೂರ್ಣ ಹದಗೆಟ್ಟಿದೆ. ಮುಖ್ಯಾಧಿಕಾರಿ ಮತ್ತು ಅಧಿಕಾರಿ ವರ್ಗ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಪಟ್ಟಣದಲ್ಲಿ ನೀರಿನ ಹಾಹಾಕಾರ ಎದ್ದರು ಕೂಡಾ ಪುರಸಭೆ ಸಂಪೂರ್ಣ ಮೌನವಾಗಿದೆ ಎಂದು ಆರೋಪಿಸಿದರು.
ಪಟ್ಟಣದ 23 ವಾರ್ಡ್‌ಗಳಲ್ಲಿ ನೀರು, ರಸ್ತೆ, ವಿದ್ಯುತ್ ದೀಪ, ಚರಂಡಿ ವ್ಯವಸ್ಥೆ ಸೇರಿದಂತೆ ಅನೇಕ ಸಮಸ್ಯೆಗಳು ಉಲ್ಬಣವಾಗಿದ್ದರೂ ಸಹ ಸಮಸ್ಯೆಗಳಾಗಿಯೆ ಉಳಿದಿವೆ. ಇದೊಂದು ಕನಿಷ್ಠ ಪುರಸಭೆಯಾಗಿದೆ. ಪ್ರಸ್ತುತ ಪುರಸಭೆ ಉಪ ವಿಭಾಗಾಧಿಕಾರಿ ಆಡಳಿತದಲ್ಲಿದೆ. ಅಧಿಕಾರಿ ವರ್ಗ ಪುರಸಭೆಯ ಸಿಬ್ಬಂದಿಯವರ ಸಭೆ ಕರೆದು ಸೂಕ್ತ ಮಾರ್ಗದರ್ಶನ ನೀಡಿ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕು. ಇಲ್ಲದಿದ್ದಲ್ಲಿ ಪುರಸಭೆಗೆ ಬೀಗ ಜಡಿದು ಪ್ರತಿಭಟಿಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಚೇತನ ಗುತ್ತೇದಾರ ಮಾತನಾಡಿ, ಪುರಸಭೆಯಲ್ಲಿ ಆಸ್ತಿದಾರರು ಮರೆತು ಕುಳಿತರೆ 2 ತಿಂಗಳಲ್ಲಿ ಅಸ್ತಿಯೇ ಬೇರೆಯವರ ಹೆಸರಿನಲ್ಲಿ ಬದಲಾವಣೆಯಾಗುವುದು ಅಚ್ಚರಿಯಿಲ್ಲ. ಇದು ಪುರಸಭೆ ಸಿಬ್ಬಂದಿಯ ಕಾರ್ಯ ವೈಖರಿಯಾಗಿದೆ. ಪ್ರತಿಯೊಂದಕ್ಕೂ ಲಂಚ ನೀಡಿದರೆ ಮಾತ್ರ ನಮ್ಮ ದಾಖಲೆಗಳು ದೊರೆಯುತ್ತವೆ ಇಲ್ಲದಿದ್ದರೆ ಅಲೆದಾಡುವುದು ಸಹಜವಾಗಿದೆ. ಇದಕ್ಕೆ ಹೇಳುವವರು ಕೇಳುವವರು ಇಲ್ಲದಂತಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲೇ ಈ ರೀತಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದರು.
ಬಿ.ಎಸ್. ಹಣಮಶೆಟ್ಟಿ, ಶಿವಶರಣ ಹೆಗ್ಗಣದೊಡ್ಡಿ, ಎ.ಸಿ. ಜೋಷಿ, ಜೆ.ಬಿ. ಕುಲಕರ್ಣಿ, ಬಿ.ಟಿ. ಕುಲಕರ್ಣಿ, ಎಸ್.ಎಂ. ರಾಮಾಗೋಳ, ಎ.ಎಸ್. ಉಪ್ಪಾರ, ವಿ.ಜಿ. ಪೋತದಾರ, ಬಿ.ಎಸ್. ಗಾಳಿ, ಎಸ್.ಎಂ. ಯಳಮೇಲಿ, ಎಸ್.ಬಿ. ಕೋಟಿಕಾನೆ, ಶಿವಾನಂದ ತಾವರಖೇಡ, ನಾಗರಾಜ ಬಿರಾದಾರ, ಅಮೋಘಿ ಪೂಜಾರಿ, ಯಲ್ಲು ಪುರದಾಳ ಇದ್ದರು.