ಜಗ್ಗೇಶ್ ಅಭಿನಯದ “ತೋತಾಪುರಿ’ ಚಿತ್ರದ ಮೇಲೆ ಈಗಲೇ ನಿರೀಕ್ಷೆ ಆರಂಭವಾಗಿದೆ. ಅದಕ್ಕೆ ಕಾರಣ ಹಲವು. ಮೊದಲನೇಯದಾಗಿ “ನೀರ್ದೋಸೆ’ಯಂತಹ ಹಿಟ್ ಚಿತ್ರ ಕೊಟ್ಟ ನಿರ್ದೇಶಕ ವಿಜಯ ಪ್ರಸಾದ್ ಹಾಗೂ ಜಗ್ಗೇಶ್ ಒಂದಾಗಿರೋದು ಒಂದು ಕಾರಣವಾದರೆ, ಚಿತ್ರದಲ್ಲಿನ ಜಗ್ಗೇಶ್ ಹಾಗೂ ಇತರ ಕಲಾವಿದರ ಗೆಟಪ್. ಹೀಗೆ ವಿವಿಧ ಕಾರಣಗಳಿಂದಾಗಿ ನಿರೀಕ್ಷೆಗೆ ಕಾರಣವಾಗಿರುವ ಈ ಚಿತ್ರ ಈಗ ಮತ್ತೊಂದು ದಾಖಲೆಗೆ ಸಾಕ್ಷಿಯಾಗುತ್ತಿದೆ.
ಅದು ಏಕಕಾಲದಲ್ಲಿ ಎರಡು ಚಾಪ್ಟರ್ಗಳನ್ನು ಚಿತ್ರೀಕರಿಸುವ ಮೂಲಕ. ಹೌದು, ನಿಮಗೆ ಗೊತ್ತಿರುವಂತೆ “ತೋತಾಪುರಿ’ ಚಿತ್ರ ಎರಡು ಭಾಗಗಳಲ್ಲಿ ಬರುತ್ತಿದೆ. ಎರಡು ಭಾಗಗಳಲ್ಲಿ ಸಿನಿಮಾಗಳು ಬರೋದು ವಿಶೇಷವಲ್ಲ. ಈಗಾಗಲೇ ಅನೇಕ ಸಿನಿಮಾಗಳು ಬಂದಿವೆ. ಆದರೆ, ಎರಡು ಭಾಗಕ್ಕಾಗುವಷ್ಟು ದೃಶ್ಯಗಳನ್ನು ಏಕಕಾಲಕ್ಕೆ ಚಿತ್ರೀಕರಿಸಿರುವ ಉದಾಹರಣೆ ಕಡಿಮೆ. ಮೊದಲೇ ಪ್ಲ್ಯಾನ್ ಮಾಡಿ, ಎರಡು ಭಾಗವನ್ನು “ತೋತಾಪುರಿ’ ತಂಡ ಚಿತ್ರೀಕರಣ ಮಾಡುತ್ತಿದೆ.
ನಿರ್ಮಾಪಕ ಕೆ.ಎ.ಸುರೇಶ್ ಹೇಳುವಂತೆ, ಭಾರತದಲ್ಲೇ ಏಕಕಾಲದಲ್ಲಿ ಎರಡು ಭಾಗ ಮೊದಲೇ ಚಿತ್ರೀಕರಣವಾಗಿ ಆ ನಂತರ ಬಿಡುಗಡೆಯಾಗುತ್ತಿರುವ ಸಿನಿಮಾವಿದು. ಈಗಾಗಲೇ ಮೊದಲ ಭಾಗ ಬಿಡುಗಡೆಯಾಗಿ ಆ ನಂತರ ಎರಡನೇ ಭಾಗ ಚಿತ್ರೀಕರಣವಾದ ಅಥವಾ ಎಡಿಟಿಂಗ್ ಟೇಬಲ್ನಲ್ಲಿ ದೃಶ್ಯಗಳು ಹೆಚ್ಚಾಗಿದ್ದನ್ನು ಕಂಡು, ಅದನ್ನು ಜೋಡಿಸಿ, ಇನ್ನೊಂದಿಷ್ಟು ಚಿತ್ರೀಕರಿಸಿ ಸೀಕ್ವೆಲ್ ಮಾಡಿದ ಉದಾಹರಣೆ ಇದೆ.
ಆದರೆ, ಚಾಪ್ಟರ್ 1 ಹಾಗೂ ಚಾಪ್ಟರ್ 2 ಸಿನಿಮಾವನ್ನು ಏಕಕಾಲದಲ್ಲಿ ಚಿತ್ರೀಕರಿಸಿದ ಉದಾಹರಣೆ ಭಾರತದಲ್ಲೇ ಇಲ್ಲ. ಈಗ ಆ ದಾಖಲೆಗೆ “ತೋತಾಪುರಿ’ ಪಾತ್ರವಾಗುತ್ತಿದೆ ಎನ್ನುವುದು ನಿರ್ಮಾಪಕ ಸುರೇಶ್ ಅವರ ಮಾತು. ಈಗಾಗಲೇ ಚಾಪ್ಟರ್-1 ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದ್ದು, ಚಿತ್ರತಂಡ ಚಾಪ್ಟರ್ -2ಗೆ ಸಿದ್ಧವಾಗುತ್ತಿದೆ. ಚಿತ್ರದಲ್ಲಿ ಜಗ್ಗೇಶ್, ಅದಿತಿ, ಧನಂಜಯ್, ಸುಮನ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಈಗಾಗಲೇ ಹೊರಬಂದಿರುವ ಚಿತ್ರದ ಕಲಾವಿದರ ಗೆಟಪ್ಗ್ಳು ಕುತೂಹಲ ಹುಟ್ಟಿಸಿವೆ.