ಕಲಬುರಗಿ: “ರಾಷ್ಟ್ರದಲ್ಲಿ ಏಕಕಾಲಕ್ಕೆ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ನಡೆಸುವ ಕುರಿತು ಕೇಂದ್ರ ಸರ್ಕಾರ ಮತ್ತೆ ಚರ್ಚೆ ನಡೆಸುತ್ತಿರುವುದು ಸಮಂಜಸವಲ್ಲ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅದ್ಹೇಗೆ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಸಲು ಸಾಧ್ಯ? ಏಕಕಾಲಕ್ಕೆ ಚುನಾವಣೆ ನಡೆಸುವುದು ಅಸಾಧ್ಯ ಎಂದರು.
ಪ್ರಜಾಪ್ರಭುತ್ವದಲ್ಲಿ ವಿಶ್ವಾಸವಿಟ್ಟಿರುವ ಎಲ್ಲ ರಾಷ್ಟ್ರಗಳು ಮತದಾನಕ್ಕಾಗಿ ಬ್ಯಾಲೆಟ್ ಪೇಪರ್ (ಮತಪತ್ರ) ಅನ್ನೇ ಬಳಸುತ್ತಾರೆ. ಇದುವೇ ಅತ್ಯಂತ ಸುರಕ್ಷಿತ ಮತ್ತು ಸಂವಿಧಾನವಾಗಿ ಒಪ್ಪಿರುವ ಚುನಾವಣಾ ಪದ್ಧತಿ. ಇದನ್ನು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರೇ ಹೇಳುತ್ತಿದ್ದಾರೆ. ದೇಶದ ಜನರು ಸಹ ಇದನ್ನೇ ಬಯಸುತ್ತಾರೆ ಎಂದು ತಿಳಿಸಿದರು.
ವಿದ್ಯುನ್ಮಾನ ಮತಯಂತ್ರಗಳಿಗೆ ಬಳಸುವ ಚಿಪ್ ಉತ್ಪಾದಿಸುವ ಜಪಾನ್ ದೇಶದಲ್ಲೇ ಅದನ್ನು ಬಳಸುವುದಿಲ್ಲ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು. ಅಲ್ಲಿ ಬಳಸದಿರುವುದನ್ನು ನಾವಿಲ್ಲಿ ಬಳಸುತ್ತಿದ್ದೇವೆ. ವಿಶ್ವದ ಯಾವ ರಾಷ್ಟ್ರದಲ್ಲಿಯೂ ಇವಿಎಂ ಬಳಸುತ್ತಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮರು ಯೋಚನೆ ಮಾಡಬೇಕು ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯಲಿದೆ ಎಂಬ ಮಾಜಿ ಪ್ರಧಾನಿ ದೇವೇಗೌಡ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಖರ್ಗೆ, ಮಧ್ಯಂತರ ಚುನಾವಣೆ ಮತ್ತಿನ್ನಿತರ ಯಾವುದೇ ವಿಷಯದ ಕುರಿತು ಪಕ್ಷದ ವರಿಷ್ಠರು ನಿರ್ಧರಿಸಲಿದ್ದಾರೆ ಎಂದು ತಿಳಿಸಿದರು.