ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯನ್ನು ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಸರಳತೆಯಿಂದ ಆಚರಿಸಲಾಗುತ್ತಿದೆ. ಆದರೆ ಶ್ರೀಅಭಿನವ ಗವಿಶ್ರೀಗಳು ಮೂರು ದಿನದ ಧಾರ್ಮಿಕ ಕಾರ್ಯಕ್ರಮಗಳ ಬದಲಿಗೆ, ಮೂರು ಸಮಾಜ ಮುಖೀ ಸೇವೆಗೆ ಸಂಕಲ್ಪ ಮಾಡಿದ್ದಾರೆ.
ಹೌದು.. ಗವಿಸಿದ್ದೇಶ್ವರ ಸ್ವಾಮಿಗಳ ಯೋಚನಾ ಲಹರಿಯೇ ವಿಭಿನ್ನ ಹಾಗೂ ವೈಶಿಷ್ಠತೆಯಿಂದ ಕೂಡಿದೆ. ಕೋವಿಡ್ ಹಿನ್ನೆಲೆಯಲ್ಲಿ ನಾಡಿನ ದೊಡ್ಡ ದೊಡ್ಡ ಧಾರ್ಮಿಕ ಕ್ಷೇತ್ರಗಳ ಜಾತ್ರೆಗಳೇ ರದ್ದಾಗಿವೆ. ಆದರೆ ಸೋಂಕಿನಲ್ಲೂ ಶ್ರೀಗಳು ಜಾತ್ರೆಯನ್ನು ಸರಳತೆಯಿಂದ ನೆರವೇರಿಸಿ, ಸಮಾಜಮುಖೀ ಸೇವೆಗೆ ಸಿದ್ಧವಾಗಿದ್ದಾರೆ. 24ಗಿ7 ಗ್ರಂಥಾಲಯ: ಕಳೆದ ವರ್ಷದ ಶ್ರೀಗಳ ಸಂಕಲ್ಪದಂತೆ ಗವಿಮಠದಲ್ಲಿ ಉತ್ತಮ ಗ್ರಂಥಾಲಯ ನಿರ್ಮಾಣಗೊಂಡಿದೆ. 2020ರಲ್ಲಿ ಯುಪಿಎಸ್‌ಸಿ ತೇರ್ಗಡೆಯಾದಗಂಗಾವತಿಯ ವಿನೋದ್ ಪಾಟೀಲ್ ಗ್ರಂಥಾಲಯ ಲೋಕಾರ್ಪಣೆ ಮಾಡಲಿದ್ದಾರೆ.
ಈ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಲು ವಿದ್ಯಾರ್ಥಿಗಳನ್ನು ಸನ್ನದ್ಧ ಮಾಡುವ ಸಂಕಲ್ಪದೊಂದಿಗೆ ಗ್ರಂಥಾಲಯ ರೂಪಗೊಂಡಿದೆ. ಇದು ದಿನದ 24 ಗಂಟೆ ತೆರೆದಿರಲಿದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅರ್ಹರಾದ ಎಲ್ಲ ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಮುಕ್ತ ಅವಕಾಶ ಸಿಗಲಿದೆ. ವಿದ್ಯಾರ್ಥಿಗಳ ಅನೂಕೂಲಕ್ಕಾಗಿ ಇದು ಸಂಪೂರ್ಣ ಉಚಿತ ಗ್ರಂಥಾಲಯವಾಗಿದೆ. ಅಭ್ಯಾಸವಲ್ಲದೇ ಬೋಧನಾ ತರಬೇತಿ, ತಜ್ಞರ ತರಗತಿ, ಉನ್ನತ ಹುದ್ದೆಯಲ್ಲಿರುವವರಿಂದ ಉಪನ್ಯಾಸವೂ ದೊರೆಯಲಿದೆ. ಇಲ್ಲಿ ನೋಂದಾಯಿತ ವಿದ್ಯಾರ್ಥಿಗಳಿಗೆ ವಾಟ್ಸ್‌ಆ್ಯಪ್, ಟೆಲಿಗ್ರಾಮ್ ಮೂಲಕ ಸಂದೇಶ ರವಾನೆಯಾಗಲಿದೆ. ಈ ಭಾಗದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚೆಚ್ಚು ಯಶಸ್ಸು ಸಾಧಿಸಲಿ ಎನ್ನುವುದು ಗವಿಮಠದ ಸಮಾಜಮುಖೀ ಆಶಯವಾಗಿದೆ.
ಅಡವಿಹಳ್ಳಿ ದತ್ತು ಪಡೆದ ಮಠ: ಗವಿಸಿದ್ದೇಶ್ವರ ಸ್ವಾಮಿಗಳು ಕುಕನೂರು ತಾಲೂಕಿನ ಕಟ್ಟಕಡೆಯ ಅಡವಿಹಳ್ಳಿಯನ್ನು ದತ್ತು ಪಡೆದಿದ್ದಾರೆ. ಅಲ್ಲಿನ ಮೂಲ ಸೌಕರ್ಯ, ಶಿಕ್ಷಣ, ಆರೋಗ್ಯ, ಕೃಷಿ, ಸ್ವಾವಲಂಬಿ ಬದುಕು ಕಟ್ಟಿಕೊಡುವುದು. ಸ್ಮಾರ್ಟ್ ಸಿಟಿಗಿಂತ ಸುಂದರ ಹಳ್ಳಿ(ಸ್ಮಾರ್ಟ್ ವಿಲೇಜ್) ಮಾಡುವ ಸಂಕಲ್ಪದೊಂದಿಗೆ ಶ್ರೀ ಸರ್ವೋದಯ ಸಂಸ್ಥೆ, ಶ್ರೀ ಮುಕುಂದ ಸ್ಟೀಲ್ಸ್ ಸಹಯೋಗದಲ್ಲಿ ಈ ಹಳ್ಳಿಯಲ್ಲಿ ಒಂದು ವರ್ಷದವರೆಗೂ ನೀಲನಕ್ಷೆ ತಯಾರಿಸಿ ಕೆಲಸ ಮಾಡುವುದು ಶ್ರೀಗಳ ಸಮಾಜಮುಖೀ ಸೇವೆಯ ಮತ್ತೂಂದು ಪರಿಕಲ್ಪನೆಯಾಗಿದೆ. ಈ ಕಾರ್ಯಕ್ಕೆ ಫೆ. 2 ಅಥವಾ 3ನೇ ವಾರದಲ್ಲಿ ಚಾಲನೆ ದೊರೆಯಲಿದೆ.
ಗಿಣಗೇರಿ ಕೆರೆ ಅಭಿವೃದ್ಧಿ: “ನಮ್ಮ ನಡೆ ಕೆರೆಯ ಹೂಳೆತ್ತುವ ಕಡೆ, ನಮ್ಮ ಅಭಿವೃದ್ಧಿ-ನಮ್ಮ ಕೆರೆಯಿಂದ’ ಎಂಬ ಸಂಕಲ್ಪದೊಂದಿಗೆ ಶ್ರೀಗಳು 3ನೇ ಸಮಾಜಮುಖೀ ಕಾರ್ಯಕ್ಕೆ ಸನ್ನದ್ಧರಾಗಿದ್ದಾರೆ. ಈಗಾಗಲೇ ಹಿರೇಹಳ್ಳವನ್ನು ಸ್ವತ್ಛಗೊಳಿಸುವ ಮೂಲಕ ದೇಶದ ಗಮನ ಸೆಳೆದಿರುವ ಶ್ರೀಗಳು, ಜಲಮೂಲ ಉಳಿವಿಗಾಗಿ ಈ ಮಹಾನ್ ಕಾರ್ಯ ನಡೆದಿದೆ. ಕಳೆದ ವರ್ಷದಲ್ಲಿ ಹಿರೇಹಳ್ಳ, ನೀಡಶೇಸಿ, ಕಲ್ಲಭಾವಿ, ತಾವರಕೇರೆ, ಇಂದರಗಿ ಹಲಗೇರಿ, ಗಂಗಾವತಿ ಹೀಗೆ ಜಿಲ್ಲೆಯ ಹಲವು ಕೆರೆಗಳಲ್ಲಿ ಜಲ ಸಂರಕ್ಷಣಾ ಕಾರ್ಯವೂ ನಡೆದಿದೆ. ಅದರ ಮುಂದುವರಿದ ಭಾಗವಾಗಿ ಈ ವರ್ಷದಲ್ಲಿ “ಸರಳ ಜಾತ್ರೆಯ ಆಚರಣೆ, ಸಮಾಜಮಖೀ ಸೇವೆಗೆ ಅರ್ಪಣೆ’ ಈ ನಿಟ್ಟಿನಲ್ಲಿ ಸುಮಾರು 300 ಎಕರೆಯಷ್ಟು ವಿಸ್ತಾರದ ಗಿಣಿಗೇರ ಕೆರೆಯ ಸ್ವತ್ಛತೆ, ಸಂರಕ್ಷಣೆ, ಅಭಿವೃದ್ಧಿ ಪಡಿಸುವ ಕಾರ್ಯಕ್ಕೆ ಶ್ರೀಗಳು ನಿರ್ಧರಿಸಿದ್ದಾರೆ. ಶ್ರೀಗಳ ಈ ಕಾರ್ಯಕ್ಕೆ ಹಿರಿಯರು, ಯುವಕರು, ಜಿಲ್ಲೆಯ ಜನಪ್ರತಿನಿಧಿ ಗಳು, ಕಾರ್ಖಾನೆಗಳು ಸಹ ತಮ್ಮ ಸಹಾಯ ಹಸ್ತ ನೀಡಲು ಮುಂದೆ ಬಂದಿದ್ದಾರೆ.
ಒಟ್ಟಿನಲ್ಲಿ ಈ ಬಾರಿ ಸರಳತೆಯ ಜಾತ್ರೋತ್ಸವ ಸಮಾಜಮುಖೀ ಸೇವೆಗೆ ಅರ್ಪಣೆ ಎನ್ನುವ ಉದ್ದೇಶದಿಂದ ಶ್ರೀಗಳು ಆರಂಭಿಸಿರುವ ಮೂರು ಮಹತ್ವದ ಸಮಾಜಮುಖೀ ಕಾರ್ಯಗಳು ನಾಡಿನ ಗಮನ ಸೆಳೆದಿವೆ. ಶ್ರೀಗಳ ಸಾಮಾಜಿಕ ಕಳಕಳಿಗೆ ಭಕ್ತ ಸಮೂಹ ತಲೆ ಬಾಗಿದೆ.
ದತ್ತು ಕಮ್ಮಾರ