ಯಾಕೆಂದರೆ ಕೋವಿಡ್ ಸೋಂಕನ್ನು ಎದುರಿಸುವಂಥ ವ್ಯಾಪಕ ವ್ಯವಸ್ಥೆಯನ್ನೂ ನಾವು ಈಗ ಹೊಂದಿದ್ದೇವೆ. ಅದು ಕೋವಿಡ್ ಪರೀಕ್ಷೆ ಇರಬಹುದು, ಚಿಕಿತ್ಸೆ ಇರಬಹುದು, ತುರ್ತು ನಿಗಾ ವ್ಯವಸ್ಥೆ ಇರಬಹುದು, ಲಸಿಕೆ ಇರಬಹುದು.. ಹೀಗೆ ಎಲ್ಲ ಅಂಶಗಳನ್ನು ನೋಡುತ್ತಾ ಬಂದರೆ ಇವತ್ತು ಗಾಬರಿಯ ಪರಿಸ್ಥಿತಿಯಂತೂ ಇಲ್ಲ. ನಮಗಿರುವ ಅನುಭವದ ಮೇಲೆಯೇ ನಾವು ಕಾರ್ಯನಿರ್ವಹಿಸಬೇಕಾಗಿದೆ.
Advertisement
ಹಾಗಂತ ನಾವು ಬೇಕಾಬಿಟ್ಟಿ ಓಡಾಡಿಕೊಂಡು ಸೋಂಕನ್ನು ಮೈಮೇಲೆ ಎಳೆದುಕೊಳ್ಳಬಹುದೇ? ಇಲ್ಲ, ಅದು ನಿಜಕ್ಕೂ ತಪ್ಪಾಗುತ್ತದೆ. ನಾಗರಿಕರಾಗಿ ನಾವು ನಮ್ಮ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳುವುದು ದೊಡ್ಡ ಜವಾಬ್ದಾರಿ ಮಾತ್ರವಷ್ಟೇ ಅಲ್ಲ, ನಮ್ಮಂತೆಯೇ ಇತರರು ಆರೋಗ್ಯವಾಗಿರಬೇಕು ಎಂಬ ಸಾಮಾನ್ಯ ಪ್ರಜ್ಞೆ ಇದ್ದರೆ ಸಾಕು, ಅದೆಂಥ ವೈರಸ್ ಅನ್ನಾದರೂ ತಡೆಯಬಹುದು. ಇಂಥ ಮನೋಭಾವನೆಯನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕು. ಇದು ನನ್ನ ಕಳಕಳಿಯ ಮನವಿ.
Related Articles
Advertisement
ನನ್ನ ಪ್ರಕಾರ ಈ ಮೂರು ಅಂಶಗಳು ಕೋವಿಡ್ ಸರಪಳಿಯನ್ನು ಪರಿಣಾಮಕಾರಿಯಾಗಿ ತುಂಡರಿಸಬಲ್ಲವು. 1.ರೋಗ ಲಕ್ಷಣ ಕಾಣಿಸಿಕೊಂಡ ತತ್‌ಕ್ಷಣ ಪರೀಕ್ಷೆ ಮಾಡಿಸಿಕೊಳ್ಳುವುದು. 2.ಕ್ಷಿಪ್ರವಾಗಿ ಪರೀಕ್ಷೆಯ ಫಲಿತಾಂಶ ನೀಡುವುದು. 3. ಫಲಿತಾಂಶ ಪಾಸಿಟಿವ್ ಬಂದರೆ ಕೂಡಲೇ ಚಿಕಿತ್ಸೆ ಆರಂಭಿಸುವುದು. ಸೋಂಕು ಕಂಡುಬಂದ ತತ್‌ಕ್ಷಣವೇ ಚಿಕಿತ್ಸೆ ನೀಡಿದರೆ ರೋಗವು ಉಲ್ಬಣ ಸ್ಥಿತಿಗೆ ಹೋಗುವುದಿಲ್ಲ. ಆಗ ಆಸ್ಪತ್ರೆ, ಐಸಿಯು, ಆಕ್ಸಿಜನ್ ಮುಂತಾದವು ಬೇಕಾಗುವುದಿಲ್ಲ.
ಲಸಿಕೆ ಪಡೆಯುವುದು ಒಂದು ಕರ್ತವ್ಯ: ಬಹಳಷ್ಟು ಜನ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವುದು ನಿಜಕ್ಕೂ ನೋವಿನ ವಿಚಾರ. ನನ್ನ ಪ್ರಕಾರ ಲಸಿಕೆ ಪಡೆಯುವುದು ಒಂದು ಮುಖ್ಯ ಕರ್ತವ್ಯ. ಕಾರಣವಿಷ್ಟೇ, ಕೋವಿಡ್ ಬಂದಾಗಿನಿಂದ ಈ ದಿನದವರೆಗೆ ನಾವೆಲ್ಲ ಎದುರಿಸಿದ ಎಲ್ಲ ಕ್ಷಣಗಳನ್ನು ಒಮ್ಮೆ ಕಣ್ಣಮುಂದೆ ತಂದುಕೊಂಡರೆ ಲಸಿಕೆ ಪಡೆಯುವುದು ಎಷ್ಟು ಮುಖ್ಯ ಎಂಬುದು ಅರ್ಥವಾಗುತ್ತದೆ.
ನಾನು ಕೂಡ ಸೋಂಕಿತನಾಗಿದ್ದೆ: ಸಾರ್ವಜನಿಕ ಸೇವೆಯಲ್ಲಿರುವ ನಾನೂ ಕೋವಿಡ್ ಸೋಂಕಿಗೆ ಒಳಗಾಗಿದ್ದೆ. ಕೆಲವು ದಿನ ಮನೆಯಲ್ಲೇ ಕ್ವಾರಂಟೈನ್ ಆಗಿದ್ದೆ. ವೈದ್ಯರು ಹೇಳಿದ ಚಿಕಿತ್ಸೆಯನ್ನು ಪಡೆದು, ಅವರು ಕೊಟ್ಟ ಸಲಹೆ- ಸೂಚನೆಗಳನ್ನು ಚಾಚೂ ತಪ್ಪದೇ ಪಾಲಿಸಿದೆ. ಅದು ನನ್ನನ್ನು ತೀವ್ರ ತೊಂದರೆಗೀಡು ಮಾಡಿತ್ತು. ಆದರೂ ನಾನು ಭಯಗೊಳ್ಳದೆ ಪರಿಸ್ಥಿತಿ ಯನ್ನು ಎದುರಿಸಿದೆ. ಹಾಗೆ ನೋಡಿದರೆ ನಾನು ಎರಡು ಸಲ ಕ್ವಾರಂಟೈನ್ ನಲ್ಲಿದ್ದೆ. ಅದೊಂದು ವಿಕ್ಷಿಪ್ತ ಅನುಭವ. ಎದುರಿಸಲೇಬೇಕು. ನನ್ನ ಅನುಭವ ದಿಂದಲೇ ಹೇಳುವುದಾದರೆ ಯಾರಿಗೂ ಅಂಥ ನೋವು ಆಗಬಾರದು. ಕೊನೆಯಲ್ಲಿ ನಾನು ಹೇಳುವುದು ಇಷ್ಟೇ. ಕೋವಿಡ್ ಎನ್ನುವ ಮಹಾಮಾರಿ ಇಡೀ ಜಗತ್ತಿನ ಸಮೀಕರಣಗಳನ್ನೇ ಬದಲಾಯಿಸಿ ಬಿಟ್ಟಿದೆ. ಬಲಿಷ್ಠ ದೇಶ ಗಳನ್ನೇ ಅಲುಗಾಡಿಸಿಬಿಟ್ಟಿದೆ. ಹಾಗೆಯೇ ಹೊಸ ಹೊಸ ಸಾಧ್ಯತೆಗಳನ್ನೂ ತೆರೆ ದಿಟ್ಟಿದೆ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು.
– ಡಾ|ಸಿ.ಎನ್. ಅಶ್ವತ್ಥನಾರಾಯಣ, ಶಾಸಕ, ಮಲ್ಲೇಶ್ವರ ಉಪ ಮುಖ್ಯಮಂತ್ರಿ