ಬ್ರಹ್ಮರ್ಷಿಗಳು ಹುಬ್ಬೇರಿಸಿ ವಾಲ್ಮೀಕಿಯ ಕಡೆ ನೋಡಿದರು. ವಾಲ್ಮೀಕಿಗಳು, “ಸಾಕು ನಿನ್ನ ತಲೆಹರಟೆ’ ಎಂದು ಗದರಿದರು. ಬ್ರಹ್ಮರ್ಷಿಗಳು ಬೊಚ್ಚುಬಾಯಿ ಅಗಲಿಸಿ ನಕ್ಕು, “”ಹಾಡಲಿ ಬಿಡು! ಅಷ್ಟೊಂದು ನಾಚಿಕೆಯೇಕೆ? ನಾನೂ ಕೇಳಬಯಸುತ್ತೇನೆ ನಿನ್ನ ಕಾವ್ಯಾತ್ಮಕ ಬೈಗುಳವನ್ನು” ಅಂದರು. “”ಗುರುಗಳೇ…!” ರಾಗ ಎಳೆದ ಭಾರದ್ವಾಜ. ವಾಲ್ಮೀಕಿಗಳು ಹೂಂ ಅನ್ನಲಿಲ್ಲ ಉಹೂಂ ಅನ್ನಲಿಲ್ಲ. ಗುರುಗಳ ಮೌನವನ್ನೇ ಸಮ್ಮತಿಯ ಲಕ್ಷಣವೆಂದು ತಿಳಿದ ಭಾರದ್ವಾಜ ಹಾಡಲು ಅನುವಾದನು. ನಿಂತಲ್ಲೆ ಕುಳಿತು, ಗಂಟಲು ಸರಿಪಡಿಸಿಕೊಳ್ಳತೊಡಗಿದನು.
Advertisement
ಬ್ರಹ್ಮರ್ಷಿಗಳು ಬಂದರೆಂದರೆ ಕೇಳಬೇಕೆ! ಆಶ್ರಮವಾಸಿಗಳೆಲ್ಲ ಯಜ್ಞಶಾಲೆಗೆ ಬಂದು ನೆರೆದಿದ್ದರು ಆ ವೇಳೆಗೆ. ಅವರುಗಳ ನಡುವೆ ಇಬ್ಬರು ಮಕ್ಕಳು ಇದ್ದವು. ಪಿಳಿಪಿಳಿ ಕಣ್ಣು ಬಿಡುತ್ತ, ಸಂಭ್ರಮದಿಂದ ಸುತ್ತಲೂ ನೋಡುತ್ತ, ಒಳಬಂದವು ಅವು. ಅವಳಿಮಕ್ಕಳು. ಹೆಸರು ಲವಕುಶರೆಂದು.ಭಾರದ್ವಾಜ ಹಾಡಿದ. ಅದೊಂದು ಸಣ್ಣ ವಚನ. ಆದರೆ ವಿಸ್ತರಿಸಿ ಹಾಡಿದ. ವಿಸ್ತರಿಸುವ ತಂತ್ರಗಾರಿಕೆ ತಿಳಿದಿತ್ತು ಅವನಿಗೆ. ವಿಸ್ತರಿಸುತ್ತ ಹೋದಂತೆ ಹಾಡಿನ ವಿವಿಧ ಆಯಾಮಗಳು ಗೋಚರಿಸತೊಡಗಿದವು ಅವನಿಗೆ. ಒಳತಿನ ಆಕಾಂಕ್ಷೆ ಕೆಡುಕಿನ ಆತಂಕ ಕರುಣೆಯ ಮಹತ್ವ ಎಲ್ಲವೂ ಗ್ರಹಿಕೆಗೆ ಬಂದವು. ರೋಮಾಂಚನಗೊಂಡ. ಕಡೆಗೊಮ್ಮೆ ಹಾಡು ಮುಗಿಸಿ, ಕೇಳುಗರನ್ನು ವಾಸ್ತವಕ್ಕಿಳಿಸಿ, ಮಹಾನದಿಯೊಂದನ್ನು ದಾಟಿಸಿದ ಅಂಬಿಗ ತಾನು ಎಂಬ ವಿನೀತಭಾವದಿಂದ ಶ್ರೋತೃಗಳತ್ತ ನೋಡಿದನು.
“”ಕಾವ್ಯ ರಚಿಸು ನೀನು”
“”ಯಾರು! ನಾನೆ?”
“”ನೀನೇ!… ನಿನಗೆ ಕಾವ್ಯ ದಕ್ಕಿದೆ! ರಾಮಕತೆ ರಚಿಸು”
ಲವಕುಶರು, ಮೆಲ್ಲಗೆ ಮುಂದೆ ಬಂದು, ವಾಲ್ಮೀಕಿ ಮುನಿಗಳ ತೊಡೆಯೇರಿ ಕುಳಿತರು. ಅವರಿಗೆ, ಇಂದು ಏನೋ ಮಹತ್ತರವಾದದ್ದು ಘಟಿಸಲಿದೆ ಎಂದು ಅನ್ನಿಸಿಬಿಟ್ಟಿತ್ತು. ವಾಲ್ಮೀಕಿಗಳು ನಿಡುಸುಯ್ದರು. ಬ್ರಹ್ಮರ್ಷಿಗಳು ಸುಮ್ಮನೆ ಬಿಡಲಿಲ್ಲ. “”ಏಕೆ? ತಿಳಿಯದೇನು ರಾಮಕತೆ ನಿನಗೆ?”
“”ತಿಳಿಯದೆ ಏನು! ಇವು ರಾಮನ ಮಕ್ಕಳೇ ಹೌದು!”
“”ಹಾಗಿದ್ದ ಮೇಲೆ ರಚಿಸು”
ವಾಲ್ಮೀಕಿಗಳು ವಿಷಾದದಿಂದ ನಕ್ಕರು. ಸೀತೆ, ರಾಮನಿಂದ ಪರಿತ್ಯಕ್ತಳಾದಾಗ, ತುಂಬು ಗರ್ಭಿಣಿ ! ಗಂಗೆಗೆ ಹಾರಿಕೊಂಡಳು. ಅಲ್ಲಿ, ನೀರಲ್ಲಿ ಜನಿಸಿದವು ಇವು. ಗಂಗೆ, ಸೀತೆಯ ತಾಯಿ ತಾನೆ, ಸಾಯಿಸಲಿಲ್ಲ ಸಲಹಿದಳು. ತಾನು ಸಲಹಬಲ್ಲ ತನ್ನ ಮಗಳನ್ನು ಬಳಿಯೇ ಇಟ್ಟುಕೊಂಡು, ತಾನು ಸಲಹಲಾರದ ಮಾನವ ಶಿಶುಗಳನ್ನು ಕರೆತಂದು ಇಲ್ಲಿಬಿಟ್ಟಳು.
Related Articles
ಮಕ್ಕಳು ಆಶ್ಚರ್ಯ ನಟಿಸುತ್ತ ಕಣ್ಣರಳಿಸಿ ಮುನಿಗಳತ್ತ ನೋಡಿದವು. ಅವರಿಗೆ ಗಂಗೆಯ ಸಂಗತಿ ತಿಳಿಯದು, ತಾಯಿ ಸೀತೆಯ ಸಂಗತಿ ತಿಳಿಯದು, ತಂದೆ ರಾಮನ ಸಂಗತಿ ತಿಳಿಯದು, ತಾವು ರಾಜಕುವರರು ಎಂಬ ಸಂಗತಿ ತಿಳಿಯದು. ಅವರ ಮಟ್ಟಿಗೆ, ಆಶ್ರಮದ ಸನ್ಯಾಸಿನಿ ಶಾಂತಜ್ಜಿಯೇ ಅಜ್ಜಿ-ಅಮ್ಮ ಎಲ್ಲವೂ ಆಗಿದ್ದಳು. ಶಾಂತಜ್ಜಿ ಮುಖಕ್ಕೆ ಸೆರಗು ಮುಚ್ಚಿಕೊಂಡು, ಸೊರಬರ ಸದ್ದು ಮಾಡುತ್ತ, ಮೂಲೆಯಲ್ಲಿ ಕುಳಿತಿತ್ತು.
Advertisement
“”ಸಿಟ್ಟೇನು ನಿನಗೆ ಶ್ರೀರಾಮಚಂದ್ರನಲ್ಲಿ?”“”ಪಾಪ! ಸಿಟ್ಟು ಮಾಡಲಿ ಹೇಗೆ, ಒಳ್ಳೆಯ ಮನುಷ್ಯ”
“”ಮತ್ತೆ?”
“”ದುಡುಕಿನ ಸ್ವಭಾವ ಅಷ್ಟೆ”
“”ನಿನ್ನ ಹಾಗೆ”
ಭಾರದ್ವಾಜರು ನಕ್ಕು ನುಡಿದರು. “”ಲೋಕ ಏನನ್ನುವುದೋ ಎಂಬ ಆತಂಕ ಅವನಿಗೆ, ವಿಪರೀತ”
“”ಮಾನವ ತಾನೆ”
“”ದೇವರೂ ಹೌದು!”
“”ನೋಡಿದೆಯಾ! ನಿನಗೆ ತಿಳಿದಿದೆ ದುರ್ಬಲ ಮಾನವತೆಯೊಳಗೆ ಅಡಗಿರುವ ಸಬಲ ದೈವತ್ವವನ್ನು ಗುರುತಿಸುವ ಬಗೆ. ಸುಲಭವಲ್ಲ ಅದು. ವಿಷಮ ಪ್ರಸಂಗಗಳು ಎದುರಾದಾಗ ಒಳ್ಳೆಯವರೂ ಕೆಟ್ಟವರಾಗಿ ಕಂಡುಬಿಡುತ್ತಾರೆ. ಕೆಟ್ಟವರು ಒಳ್ಳೆಯವರಾಗಿ ಕಂಡುಬಿಡುತ್ತಾರೆ. ಇರಲಿ. ರಾಮಕತೆ ರಚಿಸು ನೀನು. ರಾಮಾಯಣ ಎಂದು ಹೆಸರಿಡು ನಿನ್ನ ಕಾವ್ಯಕ್ಕೆ. ಒಳ್ಳೆಯದಾಗುತ್ತದೆ”
“”ರಚಿಸಿ ಗುರುಗಳೇ, ರಚಿಸಿ!”
ಸುತ್ತಲಿಂದ ನಾಲ್ಕಾರು ದನಿಗಳು ಮೇಲೆದ್ದು ಬಂದವು. ವಿಷಯವೇನೆಂದು ತಿಳಿಯದೇ ಹೋದರೂ ಮಕ್ಕಳು, “”ಹೌದು, ಹೌದು” ಅಂದವು. “”ನಾವು ಬಾಯಿಪಾಠ ಮಾಡುತ್ತೇವೆ ಗುರುಗಳೇ! ಅಗತ್ಯ ಬಿದ್ದರೆ, ತಾಳೆಗರಿಗಳ ಮೇಲೆ ನಾವೇ ಬರೆದಿಡುತ್ತೇವೆ ಬಾಯಿಪಾಠ ಮಾಡಿದ್ದನ್ನು! ಕಾವ್ಯ ರಚಿಸಿ ಗುರುಗಳೇ!”
“”ಆಯ್ತು ರಚಿಸುತ್ತೇನೆ”.
“”ಕತೆ ಪೂರ್ತಿ ತಿಳಿದಿದೆಯೇನು?” ಬ್ರಹ್ಮರ್ಷಿಗಳು ಕೇಳಿದರು.
“”ತಿಳಿಯದೆ ಏನು! ಕತೆ ನಡೆದದ್ದು, ಹೆಚ್ಚಾ ಕಡಿಮೆ, ಕಾಡಿನಲ್ಲಿಯೆ ತಾನೆ?”
“”ರಾಜ್ಯಗಳ ಕತೆ? ರಾಕ್ಷಸರ ಕತೆ! ರಾಗದ್ವೇಷಗಳ ಕತೆ!”
“”ಅದೂ ತಿಳಿದಿದೆ, ಅಷ್ಟಿಷ್ಟು”
“”ತಿಳಿಯದ್ದನ್ನು ತಿಳಿದುಕೊ… ಆದರೆ ಮೂಲಆಶಯಕ್ಕೆ ಬದ್ಧವಾಗಿರು”
“”ಪ್ರಯತ್ನಿಸುತ್ತೇನೆ”
“”ನಿನ್ನ ಕಾವ್ಯಾತ್ಮಕ ಬೈಗುಳದಲ್ಲಿಯೇ ಅಡಕವಾಗಿದೆ ಮೂಲಆಶಯ! ಬ್ರಹ್ಮಾಂಡವೇ ಅಡಕವಾಗಿದೆ ಅದರಲ್ಲಿ! ವಿಸ್ತರಿಸಿದರಾಯಿತು! ಕೊಲ್ಲುವುದೂ ತಿಳಿದಿದೆ ನಿನಗೆ, ಕೊಲ್ಲದೆ ಉಳಿಯುವುದೂ ತಿಳಿದಿದೆ! ಬೇಡರವನು ತಾನೆ ನೀನು! ಮಾಡಬಲ್ಲೆ ಮಾಡು!” ಮಾತು ಮುಗಿಸಿ ಸಭೆ ಮುಗಿಯಿತು ಎಂಬಂತೆ ಸುತ್ತಲೂ ನೋಡಿ ನುಡಿದರು,
“”ಏನು! ಈ ಮುದುಕನನ್ನು ಉಪವಾಸ ಕೆಡವಬೇಕೆಂದಿದ್ದೀರೋ ಹೇಗೆ?” ಸುಳ್ಳೆ ಗುಡುಗಿದರು. ಇಡೀ ಆಶ್ರಮ, ಗಡಬಡಿಸಿ, ನಗುನಗುತ್ತ, ಎದ್ದು ನಿಂತಿತು. ಗದ್ದಲ. ಮಾತುಕತೆ. ಲವಕುಶರು ಈಗ ಬ್ರಹ್ಮರ್ಷಿಗಳತ್ತ ನುಸುಳಿದರು. ಅವರ ಎರಡೂ ಬದಿಗೆ ನಿಂತು, ಅವರ ಕೈಬೆರಳುಗಳಲ್ಲಿ ತಮ್ಮದನ್ನೂ ಸೇರಿಸಿಕೊಂಡು, ಲೋಕಸಂಚಾರ ಹೊರಟವರಂತೆ ಮುಖ ಮಾಡಿದರು. “”ಬರ್ತಿರಾ, ನನ್ನ ಜೊತೆ?” ಬಗ್ಗಿ, ಹಸನ್ಮುಖರಾಗಿ ಕೇಳಿದರು ಬ್ರಹ್ಮರ್ಷಿಗಳು.
“”ಓಹೋ!”
ಮಕ್ಕಳಿಗೆ ಸಂಭ್ರಮವೋ ಸಂಭ್ರಮ! ಭಾರದ್ವಾಜ ಮುಂದೆ ಬಂದು, ಮುದ್ದುಮಾಡಿ, ಮಕ್ಕಳನ್ನು ಊಟ ಮಾಡಿಸಲಿಕ್ಕೆಂದು ಕರೆದೊಯ್ದನು. ಎಲೆ ಹಾಕುವ ಗಡಿಬಿಡಿ, ಮಾತಿನ ಗಡಿಬಿಡಿ, ಗಡಿಬಿಡಿಯೋ ಗಡಿಬಿಡಿ!
.
.
ಈಗ ಸಂಜೆಯಾಗಿದೆ. ಗಡಿಬಿಡಿ ಕಳೆದಿದೆ. ಸೆಗಣಿಸಾರಿಸಿ ಧೂಳು ಮೇಲೇಳದಂತೆ ಸಿದ್ಧಗೊಳಿಸಲಾಗಿರುವ ಆಶ್ರಮದ ವಿಶಾಲ ಅಂಗಳದಲ್ಲಿ ಹುಲ್ಲಿನ ಚಾಪೆ ಹಾಸಲಾಗಿದೆ. ಬ್ರಹ್ಮರ್ಷಿಗಳು ಹಾಗೂ ವಾಲ್ಮೀಕಿಗಳು ಪದ್ಮಾಸನ ಹಾಕಿಕೊಂಡು ಎದಿರಾಬದಿರು ಕುಳಿತಿದ್ದಾರೆ. ಬ್ರಹ್ಮರ್ಷಿಗಳು, ತಮ್ಮ ಎರಡೂ ಕೈಗಳನ್ನು ಹಿಂದಕ್ಕೆ ಚಾಚಿ ನೆಲವನ್ನು ಒತ್ತಿ ಹಿಡಿದು, ಹಿಂದಕ್ಕೆ ಬಾಗಿ ಕುಳಿತಿದ್ದಾರೆ. ವಾಲ್ಮೀಕಿಗಳು ಮುಂದಕ್ಕೆ ಬಾಗಿ ಕುಳಿತಿದ್ದಾರೆ.
“”ರಾಮರಾಜ್ಯದ ಬಗ್ಗೆ ಹೇಳುತ್ತಿದ್ದೀರಿ” ವಾಲ್ಮೀಕಿಗಳು ನೆನಪಿಸಿದರು. “”ಹೌದು… ಅಯೋಧ್ಯೆಗೆ ಹೋಗಿದ್ದೆ ನಾನು. ಚೆನ್ನಾಗಿಯೇ ನಿಭಾಯಿಸುತ್ತಿದ್ದಾನೆ ರಾಮ, ತನ್ನ ರಾಜ್ಯವನ್ನು. ಜನ ಸಂತೋಷದಿಂದಿದ್ದಾರೆ. ರಾಜ್ಯ ಸುಭಿಕ್ಷವಾಗಿದೆ. ಅಣ್ಣತಮ್ಮಂದಿರುಗಳಲ್ಲಿ ಅನ್ಯೋನ್ಯತೆಯಿದೆ. ಲೋಕ ಕೊಂಡಾಡತೊಡಗಿದೆ, ರಾಮ ರೂಪಿಸುತ್ತಿರುವ ರಾಜ್ಯಾಡಳಿತದ ಮಾದರಿಯನ್ನು”
“”ಕೊಂಚ ವಿವರವಾಗಿ ಹೇಳಿ ಬ್ರಹ್ಮರ್ಷಿಗಳೇ”
“”ಹೊಸ ಸಭ್ಯತೆಗೊಂದು ಹೊಸ ಮಾದರಿ ಅದು. ಒಂದು ಆದರ್ಶ”
“”ಕೈಗೂಡಿದೆಯೆ ಆದರ್ಶ”
“”ಪೂರ್ತಿ ಯಾವತ್ತೂ ಕೈಗೂಡುವುದಿಲ್ಲ ಆದರ್ಶಗಳು”. “”ರಾಮರಾಜ್ಯಕ್ಕೆ ಮಾದರಿ ಯಾವುದು ಅಂತೀರಿ?”
“”ಮಾದರಿಯೊಂದು ಇರುವುದೇ ಆದರೆ, ಆಶ್ರಮಗಳೇ ಮಾದರಿ” “”ಅದು ಹೇಗೆ?”
“”ಅಲ್ಲಿಯೇ ತಾನೆ, ಹದಿನಾಲ್ಕು ವರ್ಷದ ವನವಾಸದಲ್ಲಿ ತರಬೇತಿ ಪಡೆದದ್ದು ಅವನು? ಆದರೆ, ಅಲ್ಲಿ ಕಂಡದ್ದನ್ನು ನೇರವಾಗಿ ಇಲ್ಲಿ ಅಳವಡಿಸಲು ಬರುವುದಿಲ್ಲ. ಅಯೋಧ್ಯೆ ಒಂದು ನಗರ, ಒಂದು ಸಾಮ್ರಾಜ್ಯ. ದುಡ್ಡು ಓಡಾಡುತ್ತಿರುತ್ತದೆ ಅಲ್ಲಿ. ಅಧಿಕಾರ ಓಡಾಡುತ್ತಿರುತ್ತದೆ. ಆಶ್ರಮಗಳ ನೈತಿಕಶಿಸ್ತನ್ನು ಅಯೋಧ್ಯೆಯಲ್ಲಿ ಜಾರಿಗೆ ತರುವುದು ಸುಲಭವಲ್ಲ. ಆದರೂ ವ್ಯತ್ಯಾಸ ಕಾಣತೊಡಗಿದೆ. ಈಗಲೂ ಅವನು ಹುಲ್ಲು ಚಾಪೆಯ ಮೇಲೆಯೇ ಮಲಗುತ್ತಾನೆ, ಸರಳವಾಗಿಯೇ ಬದುಕುತ್ತಾನೆ. ಇತರೆ ಅಧಿಕಾರಿಗಳೂ ತನ್ನ ಮಾದರಿ ಅನುಸರಿಸಬೇಕೆಂದು ಬಯಸುತ್ತಾನೆ”
“”ಛಲವಾದಿ!”
“”ಖಂಡಿತ!”
ವಾಲ್ಮೀಕಿಗಳು ನಿಡುಸುಯ್ದರು. “”ಆದರೇನು? ರಾಮ ಒಂಟಿ, ಸೀತೆ ಒಂಟಿ, ಮಕ್ಕಳು ತಬ್ಬಲಿ! ತನಗೆ ಮಕ್ಕಳಿರುವ ಬಗ್ಗೆ ತಿಳಿದೂ ಇಲ್ಲ ಅವನಿಗೆ. ಒಳಗೇ ನವೆಯುತ್ತ, ಒಳಗೇ ನೋವುಣ್ಣುತ್ತ, ಸೀತೆಯನ್ನು ನೋಯಿಸಿದ್ದಕ್ಕಾಗಿ ಪಾಪಪ್ರಜ್ಞೆಯಿಂದ ಬಳಲುತ್ತ, ಅವಡುಗಚ್ಚಿಕೊಂಡು ರಾಜ್ಯಭಾರ ಮಾಡಿದರೆ, ಅದು ಆದರ್ಶವಾದೀತೇ ಬ್ರಹ್ಮರ್ಷಿಗಳೇ?”
“”ಆದರ್ಶವೆಂದರೆ ಸುಲಿದ ಬಾಳೆಯಹಣ್ಣು ಎಂದು ತಿಳಿದೆಯೇನು ನೀನು?”
“”ರಾಮಸೀತೆಯರು ಒಂದಾಗಲಾರರೇನು?”
ಬ್ರಹ್ಮರ್ಷಿಗಳು ನಿಡುಸುಯ್ದರು. “”ಆದಾರು! ಆಗುವುದು ಆಗದೆ ಇರುವುದು ಅವರ ವೈಯಕ್ತಿಕ ನಿರ್ಧಾರವಲ್ಲ. ಸಮಾಜ ಸ್ವೀಕರಿಸಬೇಕು, ಸೀತೆ ಪರಿಶುದ್ಧಳೆಂದು!”
“”ಸಮಾಜ ಸ್ವೀಕರಿಸಿದೆ! ಅಷ್ಟು ಮೂರ್ಖರೇನಲ್ಲ ಪ್ರಜೆಗಳು! ಆದರೂ ಆಗಾಗ ಸಣ್ಣಮಾತುಗಳು ಮೇಲೆದ್ದು ಬರುತ್ತವೆ. ತಮ್ಮದೇ ಸಣ್ಣತನದ ಮಾತುಗಳು”
“”ಅದು ಹಾಗೆಯೇ!”
ಬ್ರಹ್ಮರ್ಷಿಗಳೇ ಮಾತು ಮುಂದುವರೆಸಿದರು. “”ಅರಿವು ಮೂಡಲಿಕ್ಕೆ ಸಮಯ ಹಿಡಿಯುತ್ತದೆ”
“”ದೇವರೆ!”
ಬ್ರಹ್ಮರ್ಷಿಗಳು ನಕ್ಕರು. “”ಪ್ರಕೃತಿ ಹಾಗೂ ಪುರುಷ ಸಹಬಾಳ್ವೆ ನಡೆಸಲಿ ಎಂದು ಬಯಸುತ್ತೀಯ ನೀನು. ಅದೊಂದು ಅದರ್ಶ. ರಾಮಸೀತೆಯರು ಆದರ್ಶ ದಂಪತಿಗಳು. ಅದೇ ಅವರ ಸಮಸ್ಯೆ. ಆದರ್ಶಗಳು ನಿಜವಾದ ದಿನ ನಿಜದಲ್ಲಿ ದಾಂಪತ್ಯ ನಡೆಸಬಲ್ಲರು ಅಲ್ಲಿಯವರೆಗೆ, ಇದು ಹೀಗೆಯೇ ಸರಿ” ವಾಲ್ಮೀಕಿಗಳು ದೀರ್ಘ ನಿಟ್ಟುಸಿರುಬಿಟ್ಟರು.
“”ಇರಲಿ! ಎಲ್ಲ ತಿಳಿದವನು ನೀನು. ತಿಳಿಯದವನಂತಾಡು. ಮುಗ್ಧªರಾಮ ಮುಗ್ಧಸೀತೆಯರಿಂದ ಆರಂಭಿಸು ನಿನ್ನ ಕಥನವನ್ನು. ಕೊನೆಗೊಂದುದಿನ ನಿನಗೂ ತಿಳಿದೀತು, ಲೋಕಕ್ಕೂ ತಿಳಿದೀತು, ರಾಮರಾಜ್ಯವೆಂಬುದು ಅದೆಂತಹ ಕಠಿಣ ವ್ರತವೆಂದು” ಶಾಂತಜ್ಜಿ ದೀಪ ತಂದಿರಿಸಿ ಹೋಯಿತು. ಕತ್ತಲು ಕವಿದಿದೆಯೆಂದು, ಆಗ ಅರಿವಾಯಿತು ದೀಪದ ಧ್ಯಾನ ಮಾಡಲಾರಂಭಿಸಿದರು. ದೀಪವು, ನಾಲ್ಕು ಗೋಡೆಗಳ ನಡುವೆ ಉರಿದಂತೆ ನೆಟ್ಟಗೆ ಉರಿಯುತ್ತಿತ್ತು. ಇದ್ದಕ್ಕಿದ್ದಂತೆ, ಕತ್ತಲೆಯಗರ್ಭ ಸೀಳಿಕೊಂಡು, ಹುಳುವೊಂದು ಹಾರಿಬಂದು ದೀಪಕ್ಕೆರಗಿ ರೆಕ್ಕೆ ಸುಟ್ಟಿಕೊಂಡು ನೆಲಕ್ಕೊರಗಿತು.
“”ಒಳಗೇ ಕುಳಿತುಕೊಳ್ಳೋಣ ಬನ್ನಿ. ದೀಪದಾಕರ್ಷಣೆಗೆ ಬಿದ್ದು ಸಾಯುವ ಹುಳುಗಳನ್ನು ನೋಡಲಾರೆ ನಾನು” ಎಂದು ಗೊಣಗುತ್ತ ವಾಲ್ಮೀಕಿಗಳು ಮೇಲೆದ್ದರು. ಎದ್ದು, ದೀಪ ಕೈಗೆತ್ತಿಕೊಂಡು, ಮತ್ತೂಂದು ಕೈಯನ್ನು ಬ್ರಹ್ಮರ್ಷಿಗಳತ್ತ ಚಾಚಿದರು, ಮೇಲೇಳಲಿ ಎಂದು. ಪ್ರಸನ್ನ ಹೆಗ್ಗೋಡು