ಕುಂದಗೋಳ: ಗುಡಗೇರಿಯ ಗ್ರಾಮದೇವಿ ದ್ಯಾಮವ್ವ ದೇವಿಯ ನವರಾತ್ರಿ ಉತ್ಸವ ಈ ಬಾರಿ ಅತ್ಯಂತ ಸರಳವಾಗಿ ನಡೆಯುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಆಚರಣೆಗಷ್ಟೇ ಉತ್ಸವ ಸೀಮಿತವಾಗಿದೆ. ಅ. 17ರಂದು ಘಟಸ್ಥಾಪನೆಯೊಂದಿಗೆ ಉತ್ಸವ ಆರಂಭವಾಗಲಿದೆ.
ಗುಡಿಗೆ ದೀಪಾಲಂಕಾರ ಮಾಡಿದ್ದು, ಸೋಂಕು ಹರಡದಂತೆಮುಂಜಾಗ್ರತಾ ಕ್ರಮಗಳೊಂದಿಗೆ ಭಕ್ತರಿಗೆ ದೇವಿಯ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಯಾವುದೇ ರೀತಿ ಪ್ರಸಾದಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ.ಭಕ್ತರು ದೇವಿ ದರ್ಶನ ಪಡೆದು ತಕ್ಷಣವೇ ಹಿಂದಿರುಗಬೇಕಿದೆ.ಯಾವುದೇ ಮೆರವಣಿಗೆ ಕೈಗೊಳ್ಳದೆ ಈ ಬಾರಿ ಸರಳವಾಗಿ ಒಂಭತ್ತು ದಿನಗಳ ಕಾಲ ದೇವಿಗೆ ವಿಶಿಷ್ಟ ರೀತಿಯಿಂದ ಧಾರ್ಮಿಕಕೈಂಕರ್ಯಗಳನ್ನು ಕೈಗೊಳ್ಳಲಾಗುತ್ತದೆ ಎಂದು ಕಮಿಟಿಯವರು ತಿಳಿಸಿದ್ದಾರೆ.
ಗ್ವಾನಾಳ ಮೂಲ : ದೇವಿಯು ಹಾವೇರಿ ಜಿಲ್ಲೆಯ ಸವಣೂರ ತಾಲೂಕಿನ ಗ್ವಾನಾಳ ಗ್ರಾಮದಿಂದ ಗೌಡಗೇರಿ ಗ್ರಾಮಕ್ಕೆ ಆಗಮಿಸಿ ತದನಂತರ ಗುಡಗೇರಿ ಗ್ರಾಮದಲ್ಲಿ ನೆಲೆಸಿದ್ದಾಳೆ ಎಂಬ ಪ್ರತೀತಿಯಿದೆ. ಮೊದಲು ಇಲ್ಲಿ ದೊಡ್ಡ ಪ್ರಮಾಣದ ಜಾತ್ರಾ ಮಹೋತ್ಸವ ಜರುಗುತ್ತಿತ್ತು. ಆದರೆ ಈ ಸಂಪ್ರದಾಯ ಈಗ ಕಣ್ಮರೆಯಾಗಿದೆ. ಇದಕ್ಕೆ ಕಾರಣವೂ ಇದುವರೆಗೆ ತಿಳಿದು ಬಂದಿಲ್ಲ.
ಕುಟುವುದಿಲ್ಲ, ಬೀಸುವುದಿಲ : ನವರಾತ್ರಿ ಉತ್ಸವದಲ್ಲಿ ಗ್ರಾಮದ ಜನತೆ ಮನೆ ಸ್ವತ್ಛಗೊಳಿಸಿ 9ದಿನಗಳ ಕಾಲ ಉಪವಾಸ ಮಾಡುತ್ತಾರೆ. ನಿತ್ಯ ರಾತ್ರಿ ದ್ಯಾಮವ್ವ ದೇವಿಯ ಪಲ್ಲಕ್ಕಿ ದುರ್ಗಾದೇವಿ ದೇವಸ್ಥಾನದ ವರೆಗೆ ತೆರಳಿ ಪುನಃ ಗುಡಿಗೆ ಬಂದ ನಂತರ ದೇವಿಗೆ ನಮಿಸಿ ಅಂದಿನ ಉಪವಾಸಮುಕ್ತಾಯ ಮಾಡುತ್ತಾರೆ. ಒಂಭತ್ತು ದಿನಗಳ ಕಾಲ ಗ್ರಾಮದ ಜನತೆ ಕುಟ್ಟುವುದು, ಬೀಸುವುದು, ರೊಟ್ಟಿ ಸುಡುವುದು ಮಾಡುವುದಿಲ್ಲ.
ಮೂಗುತಿ ಪವಾಡ : ಕಳಸದ ಗುರು ಗೋವಿಂದ ಭಟ್ಟರು ಒಂದು ದಿನ ಶಿಷ್ಯ ಸಂತ ಶಿಶುನಾಳ ಶರೀಫರ ಜೊತೆಗೆ ರಾತ್ರಿ ಗುಡಿಯಲ್ಲೇ ತಂಗಿದ್ದರು. ಶಂಕರಿ (ಸರಾಯಿ)ಸೇವನೆ ಮಾಡಬೇಕೆಂಬ ಬಯಕೆಯಾಗುತ್ತದೆ. ಇಬ್ಬರ ಬಳಿಯೂ ಕಾಸಿರುವುದಿಲ್ಲ. ಗುರು ಆಣತಿಯಂತೆ ಶರೀಫರು ದೇವಿಯನ್ನು ಸ್ತುತಿಸುತ್ತಾರೆ. ದೇವಿ ಪ್ರತ್ಯಕ್ಷಳಾಗಿ ತನ್ನ ಮೂಗುತಿ ನೀಡುತ್ತಾಳೆ. ಅದನ್ನು ಗ್ರಾಮದ ಕಲಾಲರ ಮನೆಯಲ್ಲಿ ಅಡವಿಟ್ಟುಬಯಕೆ ಪೂರೈಸಿಕೊಳ್ಳುತ್ತಾರೆ.
ಮರುದಿನ ಪೂಜಾರಿ ಪೂಜೆ ಸಲ್ಲಿಸಲು ಬಂದಾಗ ದೇವಿ ಮೂಗುತಿ ಕಾಣೆಯಾಗಿರುವುದು ಕಂಡು ಶಾನಭೋಗ ಹಾಗೂ ಊರಿನ ಗೌಡರಿಗೆ ವಿಷಯ ತಿಳಿಸುತ್ತಾರೆ. ಹಿಂದಿನ ರಾತ್ರಿ ಗುಡಿಯಲ್ಲಿ ತಂಗಿದ್ದ ಗುರು-ಶಿಷ್ಯರನ್ನುಕರೆಯಿಸಿ ವಿಚಾರಣೆ ಮಾಡಿದಾಗ ದೇವಿಯೇಮೂಗುತಿ ದಯಪಾಲಿಸದಳು ಎನ್ನುತ್ತಾರೆ. ಎಲ್ಲರೂಅಪಹಾಸ್ಯ ಮಾಡಲಾರಂಭಿಸುತ್ತಾರೆ. ಶರೀಫರು ದೇವಿಯನ್ನು ಸ್ತುತಿಸಲು ಆರಂಭಿಸುತ್ತಾರೆ. ಆಗ ದೇವಿಯ ಮೂರ್ತಿಯ ಮೂಗಿನಲ್ಲಿ ಮೂಗುತಿ ಪ್ರತ್ಯಕ್ಷವಾಗುತ್ತದೆ. ಇದನ್ನು ಕಂಡ ಜನರು ಗುರು-ಶಿಷ್ಯರ ಪವಾಡ ಕೊಂಡಾಡುತ್ತಾರೆ. ಬೇಡಿ ಬಂದ ಭಕ್ತರ ಇಷ್ಟಾರ್ಥ ಈಡೇರಿಸುವ ದೇವಿಯಾಗಿ ದ್ಯಾಮವ್ವ ನೆಲೆ ನಿಂತಿದ್ದಾಳೆ.
-ಶೀತಲ್ ಮುರಗಿ