ಕಲಬುರಗಿ: ಪ್ರಸಕ್ತ ವರ್ಷ ಕೋವಿಡ್ ಮತ್ತು ಪ್ರವಾಹ ಭೀತಿ ನಡುವೆ ಜಿಲ್ಲಾದ್ಯಂತ ದಸರಾ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು. ರವಿವಾರ ಆಯುಧ ಪೂಜೆ ಮತ್ತುಸೋಮವಾರ ವಿಜಯದಶಮಿ ಅಂಗವಾಗಿ ವಿವಿಧೆಡೆ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.
ಆಯುಧ ಪೂಜೆ ನಿಮಿತ್ತ ಕಚೇರಿಗಳು, ವಾಹನಗಳು ಶುಚಿಗೊಳಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸೋಮವಾರ ಹಲವು ದೇವಸ್ಥಾನಗಳಿಗೆ ತೆರಳಿದ ಭಕ್ತರು ಸಾಲಿನಲ್ಲಿ ನಿಂತು ದರ್ಶನ ಪಡೆದರು. ನಗರದ ಯಲ್ಲಮ್ಮ ದೇವಸ್ಥಾನ, ತುಳಜಾಭವಾನಿ ದೇವಸ್ಥಾನ, ಜಗದಂಬಾ ದೇವಸ್ಥಾನ, ಅಂಬಾಭವಾನಿ, ಭವಾನಿ ಮಂದಿರ ಹಾಗೂ ವೈಷ್ಣೋದೇವಿ ದೇವಸ್ಥಾನಗಳಲ್ಲಿ ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.
ಕೋವಿಡ್ ಸೋಂಕು ಭಯದಿಂದ ಈ ಬಾರಿ ಎಲ್ಲ ಪೂಜಾ ಕಾರ್ಯಗಳನ್ನುಸಂಪ್ರದಾಯಕ್ಕೆ ಸೀಮಿತಗೊಳಿಸಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಕೆಲವೆಡೆ ಪಲ್ಲಕ್ಕಿಉತ್ಸವ, ಸಾಂಸ್ಕೃತಿಕ, ಭಜನೆ ಕಾರ್ಯಕ್ರಮಕೈಬಿಡಲಾಗಿತ್ತು. ಆದರೂ, ದೇವರ ದರ್ಶನ ಪಡೆಯಲು ಅಪಾರ ಭಕ್ತರು ದೇವಸ್ಥಾನಗಳಿಗೆ ಆಗಮಿಸಿದ್ದರು. ದೇವಸ್ಥಾನಗಳಲ್ಲಿ ತೀರ್ಥ, ಪ್ರಸಾದ ನೀಡದೇ ಕೇವಲ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ದಸರಾ ಹಬ್ಬದ ಅಂಗವಾಗಿ ಹಿರಿಯರು, ಆತ್ಮೀಯರು, ಆಪ್ತರಿಗೆ “ಬನ್ನಿ’ ಕೊಟ್ಟು ಶುಭಾಶಯ ಕೋರಲಾಯಿತು.
ದಸರಾ ಉತ್ಸವ ವೈಭವ :
ಸೇಡಂ: ಪಟ್ಟಣದ ಕೋಲಿವಾಡಾ ಬಡಾವಣೆಯಲ್ಲಿ ಶಿವಸೇನಾ ಸಮಿತಿ ವತಿಯಿಂದ ಐದು ದಿನಗಳ ಕಾಲ ಪ್ರತಿಷ್ಠಾಪಿಸಲಾಗಿದ್ದ ಭವಾನಿ ಮಾತೆಯನ್ನು ದಸರಾ ಹಬ್ಬದ ಪ್ರಯುಕ್ತ ಸೋಮವಾರ ಮೆರವಣಿಗೆ ಮಾಡಲಾಯಿತು.
ಕೋವಿಡ್ ಹಿನ್ನೆಲೆಯಲ್ಲಿ ಸಂಕ್ಷಿಪ್ತವಾಗಿ ತಾಯಿ ಭವಾನಿ ಮೂರ್ತಿಯ ಮೆರವಣಿಗೆ ಮಾಡಿ, ಕೊತ್ತಲ ಬಸವೇಶ್ವರದೇವಾಲಯದಲ್ಲಿ ಬನ್ನಿ ಮುಡಿಯುವ ಮೂಲಕ ಸಂಪನ್ನಗೊಂಡಿತು. ಸಮಿತಿ ಅಧ್ಯಕ್ಷ ದೇವಿಂದ್ರ ಸುಣಗಾರ,ಕೋಶಾಧ್ಯಕ್ಷ ಶಿವಕುಮಾರ ಬಾಗೋಡಿ,ಭೀಮಾಶಂಕರ ಕೊಳ್ಳಿ, ಪುರಸಭೆ ಸದಸ್ಯಸಂತೋಷ ತಳವಾರ, ಲಕ್ಷ್ಮಣ ಭೋವಿ, ಮಾರುತಿ ಭೋವಿ, ಶಂಕರ ಠಗರೆ, ಸುರೇಶ ಊಡಗಿ, ದೀಪಕ ಭಾಗೋಡಿ ಇದ್ದರು.