Advertisement

ಸರಳವಾಗಿ ಕೆಪಿಸಿಸಿ ಪದಗ್ರಹಣ: ಸತೀಶ ಜಾರಕಿಹೊಳಿ

06:18 AM May 29, 2020 | Suhan S |

‌ಗದಗ: ಬೆಂಗಳೂರಿನಲ್ಲಿ ಜೂ.7ರಂದು ನಡೆಯಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ತಮ್ಮನ್ನೊಳಗೊಂಡಂತೆ ಮೂವರು ಕಾರ್ಯಾಧ್ಯಕ್ಷರ ಪದಗ್ರಹಣ ಸಮಾರಂಭವನ್ನು ಕೋವಿಡ್‌-19 ಸೋಂಕು ತಡೆಯುವ ಉದ್ದೇಶದಿಂದ ಸರಳವಾಗಿ ನೆರವೇರಿಸಲಾಗುತ್ತದೆ ಎಂದು ಕೆಪಿಸಿಸಿ ನಿಯೋಜಿತ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶವನ್ನೊಳಗೊಂಡಂತೆ ಸುಮಾರು ಎಂಟು ಸಾವಿರ ಸ್ಥಳಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ನೇರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುತ್ತದೆ. ಪ್ರತಿಯೊಂದು ಸ್ಥಳದಲ್ಲಿ ಸಾಮಾಜಿಕ ಅಂತರದಲ್ಲಿ 50 ಜನರಿಗೆ ಅವಕಾಶ ಕಲ್ಪಿಸಲಿದ್ದು, ಸುಮಾರು ನಾಲ್ಕು ಲಕ್ಷ ಜನರು ಸಮಾರಂಭ ವೀಕ್ಷಣೆ ಮಾಡುವರು ಎಂದು ತಿಳಿಸಿದರು.

ಈ ಸಮಾರಂಭ ಕುರಿತಂತೆ ಜಿಲ್ಲಾವಾರು ಪೂರ್ವಭಾವಿ ಸಭೆ ನಡೆಸಲಾಗುತ್ತಿದೆ. ಮುಂಬೈ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಈಗಾಗಲೇ ಬಾಗಲಕೋಟೆ, ಬೆಳಗಾವಿ, ಗದಗ ಜಿಲ್ಲೆಗಳಲ್ಲಿ ಪ್ರವಾಸ ಪೂರ್ಣಗೊಳಿಸಲಾಗಿದೆ. ಪಕ್ಷದ ಪ್ರಮುಖರು, ಕಾರ್ಯಕರ್ತರು ಪದಗ್ರಹಣ ಸಮಾರಂಭದಲ್ಲಿ ಪ್ರತ್ಯಕ್ಷವಲ್ಲದಿದ್ದರೂ, ಪರೋಕ್ಷವಾಗಿಯಾದರೂ ಪಾಲ್ಗೊಳ್ಳಬೇಕೆಂಬುದು ನಮ್ಮ ಉದ್ದೇಶ ಎಂದರು.

ಸರಕಾರದ ವಿರುದ್ಧ ವಾಗ್ಧಾಳಿ: ಕೋವಿಡ್‌-19 ನಿಯಂತ್ರಣಕ್ಕೆ ಕೇಂದ್ರ ಸರಕಾರ ತರಾತುರಿಯಲ್ಲಿ ಲಾಕ್‌ಡೌನ್‌ ಜಾರಿಗೊಳಿಸಿದ್ದರಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದರು. ಸಾರಿಗೆ ಬಸ್‌ ಹಾಗೂ ವಾಹನಗಳ ಓಡಾಟವಿಲ್ಲದೇ ಕೋಟ್ಯಂತರ ಜನರು ಸಾವಿರಾರು ಮೈಲು ದೂರದ ತಮ್ಮ ಊರುಗಳಿಗೆ ಕಾಲ್ನಡಿಗೆಯಲ್ಲೇ ತಲುಪಿದರು. ಕೇಂದ್ರ ಸರಕಾರ ಘೋಷಿಸಿರುವ 20 ಲಕ್ಷ ಕೋಟಿ ರೂ. ಪ್ಯಾಕೇಜ್‌ನಲ್ಲಿ ಅಲ್ಪಸ್ವಲ್ಪ ಹಣ ಎನ್‌ಆರ್‌ಇಜಿಗಳ ಮೂಲಕ ಜನರಿಗೆ ತಲುಪಲಿದ್ದು, ಇನ್ನುಳಿದದ್ದು ಸರಕಾರಿ ದಾಖಲೆಗಳಿಗೆ ಸೀಮಿತವಾಗಲಿದೆ. ರಾಜ್ಯ ಸರಕಾರ ವಿವಿಧ ಸಮುದಾಯಗಳಿಗೆ ಘೋಷಿಸಿರುವ ಪ್ಯಾಕೇಜ್‌ಗಳಿಗೆ ಮಾನದಂಡವೇ ಪ್ರಕಟವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಶಾಸಕ ಡಿ.ಆರ್‌. ಪಾಟೀಲ ಮಾತನಾಡಿ, ಕೋವಿಡ್‌-19 ಲಾಕ್‌ಡೌನ್‌ ಅವ ಧಿಯನ್ನು ಸರಕಾರಗಳು ಜನವಿರೋಧಿ  ಕೆಲಸಗಳಿಗೆ ಸಮರ್ಪಕವಾಗಿ ಬಳಸಿಕೊಳ್ಳುತ್ತಿವೆ. ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಪ್ಪತ್ತಗುಡ್ಡಕ್ಕೆ ಕೈಹಾಕಿರುವುದು ಸರಿಯಲ್ಲ. ಮುಂದೆ ಅದರ ಪ್ರತಿಫಲ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಿ.ಎಸ್‌. ಪಾಟೀಲ ಮಾತನಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next