ಬೆಂಗಳೂರು: ನಟ ಪ್ರಕಾಶ್ ರಾಜ್ ದಾಖಲಿಸಿದ್ದ 1ರೂ. ಮಾನನಷ್ಟ ಮೊಕದ್ದಮೆಯ ವಿಚಾರಣೆಗೆ ಹಾಜರಾಗಿ ಸಂಸದ ಪ್ರತಾಪ್ ಸಿಂಹ ಸತತ 7 ಗಂಟೆ ಪೊಲೀಸ್ ವಶದಲ್ಲಿದ್ದು, ಕಾದು ಜಾಮೀನು ಪಡೆದುಕೊಂಡ ಪ್ರಸಂಗಕ್ಕೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶುಕ್ರವಾರ ಸಾಕ್ಷಿಯಾಯಿತು.
ವಿಚಾರಣೆಗೆಂದು ಸಂಸದ ಪ್ರತಾಪ್ ಸಿಂಹ ಬೆಳಗ್ಗೆ 11.30ಕ್ಕೆ ವಿಶೇಷ ನ್ಯಾಯಾಲಯಕ್ಕೆ ಹಾಜರಾದರು. ವಿಚಾರಣೆ ಆರಂಭವಾಗುತ್ತಿದ್ದಂತೆ ಪ್ರತಾಪ್ ಸಿಂಹ ಅವರನ್ನು ವಶಕ್ಕೆ ಪಡೆದುಕೊಳ್ಳುವಂತೆ ಪೊಲೀಸರಿಗೆ ಸೂಚಿಸಿದರು. ಅದರಂತೆ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಅವರನ್ನು ವಶಕ್ಕೆ ಪಡೆದುಕೊಂಡರು. ಸತತ 7 ಗಂಟೆ ನ್ಯಾಯಾಲಯದಲ್ಲೇ ಕಾಯುವಂತೆ ಮಾಡಿದ ನ್ಯಾಯಾಧೀಶರು ಸಂಜೆ 6 ಗಂಟೆ ವೇಳೆಗೆ ಜಾಮೀನು ಮಂಜೂರು ಮಾಡಿದರು.
ಪ್ರಕಾಶ್ ರಾಜ್ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯ ವಿಚಾರಣೆಗೆ ಹಾಜರಾಗುವಂತೆ ಸಂಸದ ಪ್ರತಾಪ್ ಸಿಂಹ ಅವರಿಗೆ ಕೋರ್ಟ್ ಸಮನ್ಸ್ ಜಾರಿಗೊಳಿಸಿತ್ತು. ಗೈರು ಹಾಜರಾಗಿದ್ದಕ್ಕೆ ನೋಟಿಸ್ ನೀಡಲಾಗಿತ್ತು. ಆದರೆ, ಅದಕ್ಕೆ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿರಲಿಲ್ಲ.ಹಾಗಾಗಿ, ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿತ್ತು. ಅದರಂತೆ, ಅವರು ಶುಕ್ರ ವಾರ ವಿಚಾರಣೆಗೆ ಖುದ್ದು ಹಾಜರಾಗಿದ್ದರು. ವಿಚಾರಣೆ ವೇಳೆ ಪ್ರತಾಪ್ ಸಿಂಹ ಪರ ವಕೀಲರು “ವಾರೆಂಟ್ ಹಿಂದಕ್ಕೆ ತೆಗೆದುಕೊಳ್ಳುವಂತೆ (ರಿಕಾಲ್) ನ್ಯಾಯಾಧೀಶರಿಗೆ ಮನವಿ ಮಾಡಿದರು. ಸತತ ಏಳು ಗಂಟೆ ಕಾಯಿಸಿದ ನ್ಯಾಯಾಧೀಶರು 10 ಸಾವಿರ ರೂ. ಮೊತ್ತದ ಶ್ಯೂರಿಟಿ ಪಡೆದು ಜಾಮೀನು ಮಂಜೂರುಮಾಡಿ ವಿಚಾರಣೆಯನ್ನು ಮಾ.19ಕ್ಕೆ ಮುಂದೂಡಿದರು.
ಏನಿದು ಪ್ರಕರಣ?: ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆ ವಿಚಾರವಾಗಿ ಪ್ರಕಾಶ್ ರಾಜ್ ಮತ್ತು ಪ್ರತಾಪ್ ಸಿಂಹ ನಡುವೆ ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ಸಾಕಷ್ಟು ವಾಗ್ವಾದ ನಡೆದಿತ್ತು. ಈ ವೇಳೆ ಗೌರಿ ಲಂಕೇಶ್ ಹತ್ಯೆ ಪ್ರಸ್ತಾಪಿಸಿ ಪ್ರಕಾಶ್‌ರಾಜ್ ಪ್ರಧಾನಿ ಬಗ್ಗೆ ಟೀಕಿಸಿದ್ದರು. ಮಗ ಮೃತಪಟ್ಟಿದ್ದರೂ ಡ್ಯಾನ್ಸರ್ ಹಿಂದೆ ಓಡಾಡಿದವರಿಗೆ ಪ್ರಧಾನಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ, ಎಂದು ಪ್ರತಾಪ್‌ಸಿಂಹ ತಿರುಗೇಟು ನೀಡಿ ಟ್ವಿಟ್ ಮಾಡಿದ್ದರು.
ಮಗನ ಸಾವನ್ನು ಅಣಕಿಸುವಂತೆ ಟೀಕಿಸಿರುವ ಪ್ರತಾಪ್‌ಸಿಂಹಗೆ ವಿವರಣೆ ಕೇಳಿ ಪ್ರಕಾಶ್ ರಾಜ್ ಲೀಗಲ್ ನೋಟಿಸ್ ನೀಡಿದ್ದರು. ಆದರೆ, ಇದಕ್ಕೆ ಉತ್ತರಿಸದ ಹಿನ್ನೆಲೆಯಲ್ಲಿ 2018 ಫೆ.27ರಂದು ಮೈಸೂರಿನ ನಾಲ್ಕನೇ ಜೆಎಂಎಫ್ ನ್ಯಾಯಾಲಯದಲ್ಲಿ 1 ರೂ. ಪರಿಹಾರ ನೀಡುವಂತೆ ಪ್ರತಾಪ್ ಸಿಂಹ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.