Advertisement
ಈ ಹಿಂದೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಡಾ.ಅರವಿಂದ ಮಾಲಗತ್ತಿ ಅವರು “ಸೀಮಾತೀತ ಸಾಹಿತ್ಯ ಪರ್ಬ’ಎಂಬ ವಿಭಿನ್ನರೂಪದ ಕಾರ್ಯಕ್ರಮ ರೂಪಿಸಿದ್ದರು. ಜತೆಗೆ, ಈ ಸಾಹಿತ್ಯ ಹಬ್ಬವನ್ನು ಹಮ್ಮಿಕೊಳ್ಳಲು ಮುಂದಾಗಿದ್ದರು.
Related Articles
Advertisement
ಇದು ಭಿನ್ನವಾದ ಸಾಹಿತ್ಯ ಸಮ್ಮೇಳನ : ಸಂಶೋಧನಾ ಕ್ಷೇತ್ರಕ್ಕೆ ಭದ್ರ ಬುನಾದಿಯನ್ನು ಹಾಕುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಜತೆಗೆ, ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ರೀತಿಯಲ್ಲಿ ಭಿನ್ನವಾದ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳುವ ಉದ್ದೇಶವನ್ನು ಹೊಂದಲಾಗಿತ್ತು. ಸಂಶೋಧನಾ ಕ್ಷೇತ್ರದ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸುವ ಆಶಯ ಇದರಲ್ಲಿತ್ತು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಹೇಳಿದ್ದಾರೆ. “ಸೀಮಾತೀತ ಸಾಹಿತ್ಯ ಪರ್ಬ’ಕ್ಕಾಗಿಯೇ ಅಕಾಡೆಮಿ ವತಿಯಿಂದ ಸುಮಾರು 30 ಲಕ್ಷ ರೂ.ಅನುದಾನ ಮೀಸಲಿಡಲಾಗಿತ್ತು. ಕೇರಳ, ಮದ್ರಾಸ್, ಮುಂಬೈ, ಹೈದ್ರಾಬಾದ್ ಸೇರಿದಂತೆ ದೇಶದ ಹಲವು ಕಡೆಗಳಿಂದ ಸಂಶೋಧಕರು ಕೂಡ ಹೆಸರನ್ನು ನೋಂದಾಯಿಸಿ ಕೊಂಡಿದ್ದರು. ವಿವಿಧ ರಾಜ್ಯಗಳ ಸಾಹಿತಿಗಳು, ಸಂಶೋಧಕರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳನ್ನು ಒಂದೇ ವೇದಿಕೆಗೆ ತಂದು ಭಿನ್ನವಾದಂತಹ ಸಾಹಿತ್ಯ ಸಮ್ಮೇಳನ ನಡೆಸುವ ಆಲೋಚನೆ ನಮ್ಮದಾಗಿತ್ತು ಎಂದು ಅವರು ತಿಳಿಸಿದ್ದಾರೆ.
ತುಳುವಿನ ಪರ್ಬ ಶಬ್ಧ ಪ್ರಚಲಿತಕ್ಕೆ ಬರಬೇಕು : “ಪರ್ಬ’ಎಂಬ ಶಬ್ಧವನ್ನು ಸಮ್ಮೇಳನದ ಶೀರ್ಷಿಕೆಗೆ ಬಳಕೆ ಮಾಡಲಾಗಿದೆ. ತುಳು ಭಾಷೆಯಲ್ಲಿ “ಪರ್ಬ’ ಎಂದರೆ ಹಬ್ಬ ಎಂಬರ್ಥ ಬರುತ್ತದೆ. ನಮ್ಮ ಸಾಂಸ್ಕೃತಿಕ ಬೇರುಗಳು ಸ್ಥಳೀಯ ಭಾಷೆಯೊಂದಿಗೆ ಹೆಚ್ಚು ಸಂಬಂಧವನ್ನು ಹೊಂದಿವೆ. ನಾವು ಸ್ಥಳೀಯ ಭಾಷೆಗಳ ಜತೆಗೆ ಮೇಲೇಳಬೇಕು. ಆಗ ದೇಶಿಯತೆ ಎಂಬುವುದು ಪ್ರಬುದ್ಧತೆಗೆ ತಲುಪುತ್ತದೆ. ದೇಶಿಯ ಭಾಷೆಗಳ ಜತೆಗೆ ಒಡನಾಡಬೇಕು ಎಂಬ ಆಶಯ ಕೂಡ ಇದರಲ್ಲಿದೆ. ಇಂಗ್ಲಿಷ್, ಸಂಸ್ಕೃತ, ಹಿಂದಿ ಪದಗಳನ್ನು ಧಾರಾಳವಾಗಿ ಕನ್ನಡಕ್ಕೆ ಸ್ವೀಕರಿಸುತ್ತೇವೆ. ನಮ್ಮದೇ ಪ್ರಾದೇಶಿಕ ಭಾಷೆಗಳಿಂದ ಏಕೆ ಸ್ವೀಕರಿಸಬಾರದು ಎಂಬ ಕಾರಣಕ್ಕೆ ಈ “ಪರ್ಬ’ ಪದವನ್ನು ಬಳಸಿಕೊಳ್ಳಲಾಗಿತ್ತು ಎಂದು ಅರವಿಂದ ಮಾಲಗತ್ತಿ ತಿಳಿಸಿದರು.
ಅಕಾಡೆಮಿ ಈ ಹಿಂದೆ ರೂಪಿಸಿದ್ದ “ಸೀಮಾತೀತ ಸಾಹಿತ್ಯ ಪರ್ಬ’ ಅತ್ಯುತ್ತಮ ಕಾರ್ಯಕ್ರಮವಾಗಿದೆ. ಸಂಶೋಧನಾ ಕ್ಷೇತ್ರಕ್ಕೆ ಅನುಕೂಲವಾಗುವ ಆ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತಂತೆ ಚಿಂತನೆ ನಡೆದಿದೆ. ಈ ಬಗ್ಗೆ ಅಕಾಡೆಮಿ ಸದಸ್ಯರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. –ಡಾ.ಬಿ.ವಿ.ವಸಂತಕುಮಾರ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ.