Advertisement

“ಸಿಲ್ವರ್‌ ಸಿಂಧು’ಕರೆಸಿಕೊಳ್ಳಲು ಇಷ್ಟವಿರಲಿಲ್ಲ : ಪಿ.ವಿ. ಸಿಂಧು

12:01 AM Apr 27, 2020 | Sriram |

ಹೈದರಾಬಾದ್‌: ಕಳೆದ ವರ್ಷ ನಡೆದ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಕಾರಣವೇನೆಂಬುದನ್ನು ಪಿ.ವಿ. ಸಿಂಧು ಬಹಿರಂಗಪಡಿಸಿದ್ದಾರೆ. ಜನರಿಂದ “ಸಿಲ್ವರ್‌ ಸಿಂಧು’ ಎಂದು ಕರೆಸಿಕೊಳ್ಳಲು ನನಗೆ ಇಷ್ಟವಿರಲಿಲ್ಲ ಮತ್ತು ಫೈನಲ್‌ ಫೋಬಿಯಾದಿಂದ ನಾನು ಹೊರಬರಬೇಕಿತ್ತು. ಈ ದೃಷ್ಟಿಯಿಂದ ಚಿನ್ನ ಗೆಲ್ಲುವ ಏಕೈಕ ಉದ್ದೇಶದಿಂದ ಹೋರಾಡಿದೆ ಎಂದು ಸಿಂಧು ತಿಳಿಸಿದ್ದಾರೆ.

Advertisement

ಕಳೆದ ವರ್ಷದ ಆಗಸ್ಟ್‌ನಲ್ಲಿ ಬಾಸೆಲ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸಿಂಧು ಅವರು ತನ್ನ ಪ್ರತಿಸ್ಪರ್ಧಿ ನವೋಮಿ ಒಕುಹಾರಾ ಅವರನ್ನು 21-7, 21-7 ನೇರ ಸೆಟ್‌ಗಳಿಂದ ಕೆಡಹಿ ಚೊಚ್ಚಲ ಬಾರಿ ಚಿನ್ನದ ಪದಕ ಗೆದ್ದಿದ್ದರು. ಈ ಸಾಧನೆಗೈದ ಭಾರತದ ಮೊದಲ ವನಿತೆಯಾಗಿ ಇತಿಹಾಸ ನಿರ್ಮಿಸಿದ್ದರು. ಕೇವಲ 28 ನಿಮಿಷಗಳಲ್ಲಿ ಸಿಂಧು ಜಯಭೇರಿ ಬಾರಿಸಿದ್ದರು.

2016ರ ಒಲಿಂಪಿಕ್ಸ್‌ ಬಳಿಕ ನಾನು ಆರರಿಂದ ಏಳು ಬೆಳ್ಳಿಯ ಪದಕಗಳನ್ನು ಗೆದ್ದಿದ್ದೇನೆ. ನಿಮಗೆ ಫೈನಲ್‌ ಪಂದ್ಯವೆಂದರೆ ಭಯವಿದೆ ಎಂದು ಜನರು ಆಡಿಕೊಳ್ಳಲು ಆರಂಭಿಸಿದರು. ಇದು ನನಗೆ ತುಂಬಾ ನೋವು ತಂದಿತ್ತು ಎಂದು ಸಿಂಧು ಅವರು ಹೇಳಿದರು.

ಬಾಸೆಲ್‌ನಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲೂ ನಾನು ಮತ್ತೆ ಫೈನಲ್‌ ಹಂತಕ್ಕೇರಿದ್ದೆ. ನಾನು ಈಗಾಗಲೆ ತಲಾ ಎರಡು ಬಾರಿ ಕಂಚು ಮತ್ತು ಬೆಳ್ಳಿ ಪದಕ ಜಯಿಸಿದ್ದೆ. ಹಾಗಾಗಿ ಈ ಬಾರಿಯಾದರೂ ಪ್ರಶಸ್ತಿ ಗೆಲ್ಲಲೇಬೇಕೆಂದು ಮನಸ್ಸಿನಲ್ಲಿ ನಿರ್ಧರಿಸಿದೆ ಎಂದು ಸಿಂಧು ವಿವರಿಸಿದರು.

ಫೈನಲ್‌ ಸ್ಪರ್ಧೆಯಲ್ಲಿ ಶೇಕಡಾ ನೂರರಷ್ಟು ನಿರ್ವಹಣೆ ನೀಡಲು ಬಯಸಿದೆ. ಅಭಿಮಾನಿಗಳು ನನ್ನನ್ನು “ಸಿಲ್ವರ್‌ ಸಿಂಧು’ ಎಂದು ಕರೆಯುವುದು ನನಗಿಷ್ಟವಿರಲಿಲ್ಲ. ಹಾಗಾಗಿ ಪ್ರಶಸ್ತಿ ಗೆಲ್ಲುವ ದೃಢ ವಿಶ್ವಾಸದಿಂದಲೇ ಹೋರಾಡಿ ನನ್ನ ಮನಸ್ಸಿನ ಇಚ್ಛೆಯನ್ನು ಈಡೇರಿಸಿಕೊಂಡೆ ಎಂದು ಸಿಂಧು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next