Advertisement

Space: ಸ್ಪೇಸ್‌ನಲ್ಲಿ ರಜತೋತ್ಸವ- ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ 25 ವರ್ಷ

09:23 PM Nov 24, 2023 | Team Udayavani |

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೀಗ 25 ವರ್ಷಗಳ ಸಂಭ್ರಮ. ಭೂಮಿ ಮೇಲೆ ಸದಾ ಕಾಲು ಕೆರೆದುಕೊಂಡು ಜಗಳವಾಡುವ ಅಮೆರಿಕ ಮತ್ತು ರಷ್ಯಾದ ಸಹಭಾಗಿತ್ವದಲ್ಲಿ ಈ ನಿಲ್ದಾಣ ರೂಪಿತವಾಗಿತ್ತು ಎಂದರೆ ನೀವು ನಂಬಲೇಬೇಕು. ಹಲವಾರು ಅಡೆತಡೆಗಳ ಬಳಿಕ ಯಶಸ್ವಿಯಾಗಿ 25 ವರ್ಷ ಪೂರೈಸಿರುವ ಈ ನಿಲ್ದಾಣ, 2031ರ ಹೊತ್ತಿಗೆ ನಿವೃತ್ತಿ ಪಡೆಯಲಿದೆ. ಇದಾದ ಬಳಿಕ ಮುಂದೇನು ಎಂಬ ಬಗ್ಗೆ ಯಾರಲ್ಲಿಯೂ ಉತ್ತರಗಳಿಲ್ಲ. ಹಾಗಾದರೆ, ಏನಿದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ? ಇದರಿಂದಾಗುವ ಉಪಯೋಗಗಳ ಬಗ್ಗೆ ಒಂದು ಮಾಹಿತಿ ಇಲ್ಲಿದೆ…

Advertisement

ಅಸಾಧ್ಯ ಲೆಕ್ಕಾಚಾರ
ಆರಂಭ – 1998ರ ನ.20
ಭೂ ಸುತ್ತು – 1,40,000
ದಿನಕ್ಕೆ – 16 ಸುತ್ತು
ಐಎಸ್‌ಎಸ್‌ ನ ವೇಗ – ಪ್ರತಿ ಸೆಕೆಂಡ್‌ ಗೆ 8 ಕಿ.ಮೀ.

ಏನಿದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ?
ಬಾಹ್ಯಾಕಾಶದಲ್ಲಿನ ಸಂಶೋಧನೆಗಾಗಿ ನಿರ್ಮಿತವಾಗಿರುವ ಲ್ಯಾಬೋರೇಟರಿ ಇದು. ವಿಶೇಷವೆಂದರೆ, ರಷ್ಯಾ ಮತ್ತು ಅಮೆರಿಕ ಸೇರಿ ಇದನ್ನು ರೂಪಿಸಿದ್ದು, ಅಂದಿನಿಂದ ಇಂದಿನವರೆಗೂ ಸಹಭಾಗಿತ್ವದಲ್ಲೇ ಇದನ್ನು ನಡೆಸಿಕೊಂಡು ಹೋಗುತ್ತಿವೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ರಚನೆಯ ಮೊದಲ ಪಾದ, ರಷ್ಯಾದ್ದು. 1998ರ ನ.20ರಂದು ರಷ್ಯಾ ಝಾರ್ಯಾ ಕಂಟ್ರೋಲ್‌ ಮೋಡ್‌ ಅನ್ನು ಉಡಾವಣೆ ಮಾಡಿ, ಬಾಹ್ಯಾಕಾಶ ತಲುಪಿಸಿತ್ತು. ಇದು ಇಂಧನ ಶೇಖರಣೆ ಮತ್ತು ಬ್ಯಾಟರಿ ಪವರ್‌ ಬಗ್ಗೆ ನೋಡಿಕೊಳ್ಳುತ್ತದೆ. ಇದಾದ ಬಳಿಕ ಅದೇ ವರ್ಷದ ಡಿ.4ರಂದು ಅಮೆರಿಕ ಯೂನಿಟಿ ನೋಡ್‌ ಮಾಡೆಲ್‌ 1 ಅನ್ನು ಉಡಾವಣೆ ಮಾಡಿತು. ಬಳಿಕ ರಷ್ಯಾದ ಝಾರ್ಯಾ ಮತ್ತು ಅಮೆರಿಕದ ಯೂನಿಟಿ ನೋಡ್‌ ಮಾಡೆಲ್‌ 1 ಅನ್ನು ಸೇರಿಸಲಾಯಿತು. ಇವರೆಡರಿಂದಲೇ ಇದು ನಿರ್ಮಾಣವಾಗಲಿಲ್ಲ. ಬಳಿಕ 42 ಬಾರಿ ಅಸೆಂಬ್ಲಿ ವಾಹಕಗಳು ಭೂಮಿಯಿಂದ ಐಎಸ್‌ಎಸ್‌ ಗೆ ಓಡಾಡಿವೆ. ಈ ನಿಲ್ದಾಣದಲ್ಲಿ ಮೊದಲಿಗೆ ವಾಸ ಮಾಡಿದವರು ನಾಸಾದ ಬಿಲ್‌ ಶೆಫರ್ಡ್‌ ಮತ್ತು ರೋಸ್ಕೋಮೋಸ್‌ ನ ಯೂರಿ ಗಿಡೆjಂಕೋ ಹಾಗೂ ಸೆರ್ಗಾಯಿ ಕ್ರಿಕಾಲೇವ್‌. ಇದಾದ ಬಳಿಕ ಈ 25 ವರ್ಷಗಳೂ ಅಮೆರಿಕ, ರಷ್ಯಾ ಸೇರಿ ವಿವಿಧ ದೇಶಗಳು ಬಾಹ್ಯಾಕಾಶಯಾನಿಗಳು ಇಲ್ಲಿ ವಾಸ ಮಾಡಿದ್ದಾರೆ.

ಐಎಸ್‌ಎಸ್‌ ಎಷ್ಟು ದೊಡ್ಡದಿದೆ?
ಊಹೆ ಮಾಡಿಕೊಳ್ಳುವುದಾದರೆ ಇದು ಅಮೆರಿಕದ ಫುಟ್ಬಾಲ್‌ ಮೈದಾನದಷ್ಟು ಅಥವಾ ಒಲಿಂಪಿಕ್ಸ್‌ನ ಸ್ವಿಮ್ಮಿಂಗ್‌ ಫೂಲ್‌ ನ ಎರಡರಷ್ಟು ದೊಡ್ಡದಿದೆ. ಅಂದರೆ, ಈ ಕಡೆಯಿಂದ ಆ ಕಡೆಗೆ 109 ಮೀ. ಉದ್ದವಿದೆ. ಇದನ್ನು ಗಗನಯಾತ್ರಿಗಳು ವಾಸ ಮಾಡುವ ರೀತಿಯಲ್ಲಿ ರೂಪಿಸಲಾಗಿದೆ. ಅಂದರೆ ಕೆಲಸ ಮತ್ತು ವಾಸ ಯೋಗ್ಯವಾಗುವಂತೆ ಮಾಡಲಾಗಿದೆ. ಇದರಲ್ಲಿ ಆರು ಮಲಗುವ ಕೋಣೆ, ಎರಡು ಬಾಥ್‌ ರೂಂ, ಒಂದು ಜಿಮ್‌ ಇದೆ.

ಐಎಸ್‌ಎಸ್‌ ನಲ್ಲಿ ಗಗನಯಾತ್ರಿಗಳು ಮಾಡುವುದೇನು?
ಬಾಹ್ಯಾಕಾಶದಲ್ಲಿ ಬದುಕುವುದು ಸಾಮಾನ್ಯವಾದ ವಿಚಾರವೇನಲ್ಲ. ಇದು ಮೈಕ್ರೋ ಗ್ರಾವಿಟಿ ಸ್ಥಳವಾಗಿರುವುದರಿಂದ ತುಸು ಕಷ್ಟಕರ. ಹೀಗಾಗಿ ಅವರು ಕನಿಷ್ಠ ದಿನಕ್ಕೆ ಎರಡು ಗಂಟೆಗಳ ಕಾಲ ಟ್ರೆಡ್‌ ಮಿಲ್‌ ನಲ್ಲಿ ವ್ಯಾಯಾಮ ಮಾಡಲೇಬೇಕು. ಇನ್ನು ಅವರು ವೈಜ್ಞಾನಿಕ ಸಂಶೋಧನೆಗಳನ್ನೂ ಕೈಗೊಳ್ಳುತ್ತಾರೆ. ಅಂದರೆ, ಬಾಹ್ಯಾಕಾಶದಲ್ಲಿ ಮಾನವ ಬದುಕುವುದು ಹೇಗೆ ಎಂಬ ಬಗ್ಗೆ ಸಂಶೋಧನೆ ಮಾಡುತ್ತಾರೆ. ಉಳಿದಂತೆ ಸಾಮಾನ್ಯವಾಗಿ ಬಾಹ್ಯಾಕಾಶ ನಿಲ್ದಾಣದ ಮೇಲೆ ಸ್ಪೇಸ್‌ ವಾಕ್‌, ಹೊಸದಾಗಿ ಸೇರಿಸಬಹುದಾದ ಸಲಕರಣೆಗಳು ಮತ್ತು ನಿರ್ವಹಣಾ ಕಾರ್ಯ ಕೈಗೊಳ್ಳುತ್ತಾರೆ. ಒಂದು ವೇಳೆ ಬಾಹ್ಯಾಕಾಶ ಕಸದಿಂದಾಗಿ ಏನಾದರೂ ಸಮಸ್ಯೆಯಾಗಿದ್ದರೆ ಅದನ್ನೂ ಸರಿಪಡಿಸುತ್ತಾರೆ.

Advertisement

ಹಾಗೆಯೇ, ಮನುಷ್ಯನ ದೇಶದ ಮೇಲಾಗುವ ಇತರೆ ಪರಿಣಾಮಗಳ ಬಗ್ಗೆಯೂ ಸಂಶೋಧನೆ ನಡೆಯುತ್ತದೆ. ಅಂದರೆ ಸೋಲಾರ್‌ ರೇಡಿಯೇಶನ್‌ ನಿಂದ ಏನಾದರೂ ಆಗಬಹುದೇ ಎಂಬುದನ್ನೂ ನೋಡುತ್ತಾರೆ. ಹಾಗೆಯೇ, ಮರೆಗುಳಿ ಕಾಯಿಲೆ, ಪಾರ್ಕಿನ್ಸನ್‌, ಕ್ಯಾನ್ಸರ್‌, ಅಸ್ತಮಾ ಮತ್ತು ಹೃದಯ ಕಾಯಿಲೆಗಳಂಥವುಗಳ ಬಗ್ಗೆಯೂ ಅಧ್ಯಯನ ನಡೆಸುತ್ತಾರೆ.

ಭಾರತದಿಂದಲೂ ಬಾಹ್ಯಾಕಾಶ ನಿಲ್ದಾಣ
ಅಮೆರಿಕ, ರಷ್ಯಾ ಹೊರತುಪಡಿಸಿ ಈಗ ಚೀನಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಭಾರತ, ಜಪಾನ್‌ ಮತ್ತು ಯುಎಇ ಸೇರಿದಂತೆ ಬೇರೆ ಬೇರೆ ದೇಶಗಳು ಈ ಬಗ್ಗೆ ಆಲೋಚನೆಯಲ್ಲಿವೆ. ಭಾರತವು 2035ರ ವೇಳೆಗೆ ಭಾರತೀಯ ಅಂತರಿಕ್ಷ ನಿಲ್ದಾಣವನ್ನು ನಿರ್ಮಾಣ ಮಾಡುವತ್ತ ಚಿಂತನೆ ನಡೆಸಿದೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ತನ್ನ ನೌಕೆ ಇಳಿಸಿದ ಮೇಲೆ ಮತ್ತು ಸೂರ್ಯನ ಅಧ್ಯಯನಕ್ಕೆ ಆದಿತ್ಯ ನೌಕೆಯನ್ನು ಕಳುಹಿಸಿದ ನಂತರ ಇಂಥದ್ದೊಂದು ನಿರ್ಧಾರಕ್ಕೆ ಬಂದಿದೆ. ಇದಕ್ಕೂ ಮುನ್ನ ಭಾರತ, ತನ್ನ ಗಗನಯಾತ್ರಿಗಳನ್ನು ಅಂತರಿಕ್ಷಕ್ಕೆ ಕಳುಹಿಸಲು ತಯಾರಿ ನಡೆಸಿದೆ.

ಬಾಹ್ಯಾಕಾಶ ನಿಲ್ದಾಣದ ನಿವೃತ್ತಿ
2022ರ ಆರಂಭದಲ್ಲಿ ರಷ್ಯಾ, ಉಕ್ರೇನ್‌ ಮೇಲೆ ಯುದ್ಧ ಘೋಷಿಸಿದ ಬಳಿಕ ಐಎಸ್‌ಎಸ್‌ ನ ಭವಿಷ್ಯದ ಬಗ್ಗೆ ಅಂಧಕಾರ ಮೂಡಿತ್ತು. ರಷ್ಯಾ ತಾನು ನೀಡುತ್ತಿರುವ ಸಹಕಾರ ವಾಪಸ್‌ ಪಡೆಯುವುದಾಗಿ ಘೋಷಿಸಿತ್ತು. ಇದಾದ ಬಳಿಕ ನಾಸಾ ಜತೆ ಐರೋಪ್ಯ ಒಕ್ಕೂಟದ ಸ್ಪೇಸ್‌ ಏಜೆನ್ಸಿಗಳು ಕೈಜೋಡಿಸಿದ್ದವು.

ಇನ್ನು 2030ರ ವೇಳೆಗೆ ಈ ಐಎಸ್‌ಎಸ್‌ ತನ್ನ ಕಾರ್ಯಾಚರಣೆ ನಿಲ್ಲಿಸಲಿದೆ. ಅಂದರೆ, ನಾಸಾ ಮತ್ತು ಐರೋಪ್ಯ ಸ್ಪೇಸ್‌ ಏಜೆನ್ಸಿಗಳು ಅಲ್ಲಿವರೆಗೆ ಮಾತ್ರ ಇದನ್ನು ಮುಂದುವರಿಸುವ ಬಗ್ಗೆ ನಿಶ್ಚಯ ತಾಳಿವೆ. ಅಲ್ಲಿಂದ ಮುಂದಕ್ಕೆ ಇದನ್ನು ಮುಂದುವರಿಸ ಲು ನಾಸಾಗೆ ಯೋಚನೆ ಇಲ್ಲ. ಇದಕ್ಕೆ ಬದಲಾಗಿ ಅದು ಚಂದ್ರನ ಮೇಲೆ ಜನರ ವಾಸ ಮತ್ತು ಆರ್ಥಿಮಿಸ್‌ ಪ್ರೋಗ್ರಾಮ್‌ ಬಗ್ಗೆ ಗಮನಹರಿಸಿದೆ.
2030ರ ವೇಳೆಗೆ ಕಾರ್ಯಾಚರಣೆ ಸ್ಥಗಿತ ಮಾಡುವ ಬಗ್ಗೆ ನಾಸಾ ಘೋಷಣೆ ಮಾಡಿದ್ದರೂ, ಇದನ್ನು ಮರಳಿ ಭೂಮಿಗೆ ವಾಪಸ್‌ ತರಲು 2031 ಆಗುತ್ತದೆ. ಇದನ್ನು ಸೌತ್‌ ಫೆಸಿಫಿಕ್‌ ಸಾಗರದಲ್ಲಿ ಬೀಳಿಸಲಾಗುತ್ತದೆ. ಈ ಜಾಗಕ್ಕೆ ಪಾಯಿಂಟ್‌ ನೆಮೋ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಭೂಮಿಗೆ ಪ್ರವೇಶಿಸುವಾಗ ಐಎಸ್‌ಎಸ್‌ ನ ಬಹುತೇಕ ಭಾಗಗಳು ಸುಟ್ಟುಹೋಗುತ್ತವೆ. ಉಳಿದವುಗಳನ್ನು ಸಾಗರದಲ್ಲಿ ಬೀಳಿಸಲಾಗುತ್ತದೆ.

1 ಬಿಲಿಯನ್‌ ಡಾಲರ್‌ ವೆಚ್ಚ
ಈ ಐಎಸ್‌ಎಸ್‌ ಅನ್ನು ನಾಶ ಪಡಿಸುವ ಸಲುವಾಗಿ ನಾಸಾ 1 ಬಿಲಿಯನ್‌ ಅಮೆರಿಕನ್‌ ಡಾಲರ್‌ ವೆಚ್ಚ ಮಾಡಲಿದೆ. ಇದಕ್ಕಾಗಿಯೇ ನಾಸಾ ಒಂದು ಗಗನನೌಕೆಯನ್ನು ಕಳುಹಿಸಲಿದೆ. ಜತೆಗೆ ಇದನ್ನು ಬಾಹ್ಯಾಕಾಶದಲ್ಲಿ ಪ್ರತ್ಯೇಕಗೊಳಿಸುವುದೇ ದೊಡ್ಡ ಸವಾಲು. ಇದಕ್ಕಾಗಿಯೇ ಬಹಳಷ್ಟು ವೆಚ್ಚವಾಗಲಿದೆ.

ಐಎಸ್‌ಎಸ್‌ ನಲ್ಲಿ ಭಾರತೀಯರ ಹೆಜ್ಜೆ
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಭಾರತೀಯರ ಹೆಜ್ಜೆಯೂ ಇದೆ. ಪಂಜಾಬ್‌ ನ ಪಾಟಿಯಾಲ ಮೂಲದ ಮಿಲಿಟರಿ ಪೈಲಟ್‌ ರಾಕೇಶ್‌ ಶರ್ಮ ಅವರು ಬಾಹ್ಯಾಕಾಶ ನಿಲ್ದಾಣದಕ್ಕೆ ಕಾಲಿಟ್ಟ ಮೊಟ್ಟ ಮೊದಲ ಭಾರತೀಯ. ಇವರು ರಷ್ಯಾದ ಸೋಯೇಜ್‌ 7 ಆರ್ಬಿಟಲ್‌ ಸ್ಟೇಷನ್‌ ನಲ್ಲಿ 8 ದಿನಗಳ ಕಾಲ ಇದ್ದರು. ಸೋವಿಯತ್‌ ರಷ್ಯಾ- ಭಾರತದ ಸಹಭಾಗಿತ್ವದಲ್ಲಿ ರಾಕೇಶ್‌ ಶರ್ಮ ಹೋಗಿದ್ದರು.

ಇದನ್ನು ಬಿಟ್ಟರೆ ಭಾರತದ ಮೂಲದ ಕಲ್ಪನಾ ಚಾವ್ಲಾ, ಸುನೀತ್‌ ವಿಲಿಯಮ್ಸ, ರಾಜಾಚಾರಿ, ಶ್ರೀಶಾ ಬಂದ್ಲಾ ಅವರು ನಾಸಾದಿಂದ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿ ಬಂದಿದ್ದಾರೆ. ಕಲ್ಪನಾ ಚಾವ್ಲಾ ಬಾಹ್ಯಾಕಾಶ ನಿಲ್ದಾಣದಿಂದ ವಾಪಸ್‌ ಬರುವ ವೇಳೆ ಸಾವನ್ನಪ್ಪಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next