Advertisement

ಸ್ವರ್ಣದಿಂದ ದೂರವಾದ ಸಿಂಧು

06:00 AM Aug 06, 2018 | Team Udayavani |

ನಾಂಜಿಂಗ್‌ (ಚೀನ): ಪಿ.ವಿ. ಸಿಂಧು ಅವರ ವಿಶ್ವ ಬ್ಯಾಡ್ಮಿಂಟನ್‌ ಅಭಿಯಾನ ಮತ್ತೂಮ್ಮೆ ನಿರಾಸೆಯೊಂದಿಗೆ ಕೊನೆಗೊಂಡಿದೆ. ಸತತ ಎರಡನೇ ವರ್ಷವೂ ಭಾರತದ ತಾರಾ ಆಟಗಾರ್ತಿಗೆ ಚಿನ್ನದ ಪದಕ ಕೈಕೊಟ್ಟಿದೆ; ಬೆಳ್ಳಿ ಪದಕವೇ ಕೊರಳನ್ನು ಅಲಂಕರಿಸಿದೆ.

Advertisement

ರವಿವಾರ ನಡೆದ ವನಿತಾ ಸಿಂಗಲ್ಸ್‌ ಫೈನಲ್‌ನಲ್ಲಿ ಸಿಂಧು ಸ್ಪೇನಿನ ಕ್ಯಾರೊಲಿನಾ ಮರಿನ್‌ ಅವರ ಆಕ್ರಮಣಕಾರಿ ಆಟಕ್ಕೆ ತತ್ತರಿಸಿದರು. ಮೊದಲ ಗೇಮ್‌ ವೇಳೆ ಸಿಂಧು ಸಮಬಲದ ಸ್ಪರ್ಧೆಯೊಡ್ಡಿದರೂ ದ್ವಿತೀಯ ಗೇಮ್‌ನಲ್ಲಿ ಸ್ಪೇನ್‌ ಆಟ ಗಾರ್ತಿಯ ಅಬ್ಬರಕ್ಕೆ ಯಾವ ರೀತಿಯಲ್ಲೂ ಸಾಟಿಯಾಗಲಿಲ್ಲ. 

ಅಂತಿಮವಾಗಿ ಮರಿನ್‌ 21-19, 21-10 ಅಂತರದಿಂದ ಜಯಭೇರಿ ಮೊಳಗಿಸಿದರು. ಸಿಂಧು ಜತೆಗೆ ಭಾರತೀಯ ಕ್ರೀಡಾಪ್ರಿಯರ ಬಂಗಾರದ ಕನಸು ಕೂಡ ಕೊಚ್ಚಿಹೋಯಿತು.ಕಳೆದ ವರ್ಷ ಗ್ಲಾಸೊYದಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ ಪ್ರಶಸ್ತಿ ಸಮರದಲ್ಲೂ ಸಿಂಧು ಎಡವಿದ್ದರು. ಅಂದು ಜಪಾನಿನ ನೊಜೊಮಿ ಒಕುಹರಾ ಭಾರತೀಯಳ ಓಟಕ್ಕೆ ಬ್ರೇಕ್‌ ಹಾಕಿದ್ದರು. ಈ ಬಾರಿ ಒಕುಹರಾ ಅವರನ್ನು ಕ್ವಾರ್ಟರ್‌ ಫೈನಲ್‌ನಲ್ಲಿ ಕೆಡವಿ ಸೇಡು ತೀರಿಸಿಕೊಂಡರೂ “ಬೆಳ್ಳಿ ಗಡಿ’ ದಾಟಿ ಮುಂದಡಿ ಇಡಲು ಸಿಂಧುಗೆ ಸಾಧ್ಯವಾಗಲಿಲ್ಲ.

ರಿಯೋದಲ್ಲಿ ಮಣಿಸಿದ್ದ ಮರಿನ್‌
ಸಿಂಧು ಅವರನ್ನೇ ಮಣಿಸಿ ರಿಯೋ ಒಲಿಂಪಿಕ್‌ ಚಾಂಪಿಯನ್‌ ಆಗಿರುವ ಕ್ಯಾರೊಲಿನಾ ಮರಿನ್‌ ನಿಧಾನವಾಗಿಯೇ ಆಟ ಆರಂಭಿಸಿದ್ದರು. ಹಂತ ಹಂತವಾಗಿ  ಪಂದ್ಯದ ಮೇಲೆ ಹಿಡಿತ ಸಾಧಿಸುತ್ತ ಹೋದರು. ಒಮ್ಮೆ ಮುಂದಡಿ ಇರಿಸಿದ ಬಳಿಕ ಮತ್ತೆ ಹಿಂತಿರುಗಿ ನೋಡಲಿಲ್ಲ. 

ಮೊದಲ ಗೇಮ್‌ ವೇಳೆ ಸಿಂಧು 14-9 ಅಂತರದ ಮುನ್ನಡೆಯಲ್ಲಿದ್ದು, ಭರವಸೆ ಮೂಡಿಸಿದ್ದರು. ಈ ಹಂತದಲ್ಲಿ ಅಂಕಗಳನ್ನು ಬಾಚಿಕೊಳ್ಳತೊಡಗಿದ ಮರಿನ್‌, 15-15ರ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು. ಬಳಿಕ 17-17, 18-18ರಲ್ಲೂ ಜತೆ ಜತೆಯಾಗಿಯೇ ಕಾಣಿಸಿಕೊಂಡರು. ಅದ್ಭುತ ಕ್ರಾಸ್‌-ಕೋರ್ಟ್‌ ಶಾಟ್‌ ಮೂಲಕ 19-18ರ ಮುನ್ನಡೆ ಒಲಿಸಿಕೊಂಡರು. ಅನಂತರ ಸಿಂಧುಗೆ ಅಂಕ ಮರೀಚಿಕೆಯೇ ಆಗುಳಿಯಿತು.

Advertisement

ದ್ವಿತೀಯ ಗೇಮ್‌ ನೀರಸ
ದ್ವಿತೀಯ ಗೇಮ್‌ನಲ್ಲಿ ಮರಿನ್‌ ಅತ್ಯಂತ ಆಕ್ರಮಣಕಾರಿಯಾಗಿ ಗೋಚ ರಿಸಿ ಇಡೀ ಅಂಕಣವನ್ನು ಆಕ್ರಮಿಸಿ ಕೊಂಡರು. ಸ್ಪೇನ್‌ ಆಟಗಾರ್ತಿಯ ಭರ್ಜರಿ ಹೊಡೆತಗಳಿಗೆ ಸಿಂಧು ಕಕ್ಕಾಬಿಕ್ಕಿ ಯಾದರು. ಮರಿನ್‌ ಒಂದೇ ಸಮನೆ ಅಂಕಗಳನ್ನು ಬಾಚಿಕೊಳ್ಳುತ್ತ 5-0 ಮುನ್ನಡೆ ಸಾಧಿಸಿದರು. ಬ್ರೇಕ್‌ ವೇಳೆ ಮರಿನ್‌ 11-2 ಅಂತರದ ಭಾರೀ ಲೀಡ್‌ನ‌ಲ್ಲಿದ್ದರು. ಸಿಂಧು ಆಗಲೇ ಶರಣಾಗತಿ ಸಾರಿಯಾಗಿತ್ತು. ಇದು ಕ್ಯಾರೊಲಿನಾ ಮರಿನ್‌ ಗೆದ್ದ 3ನೇ ವಿಶ್ವ ಸ್ವರ್ಣ. ಇದೊಂದು ದಾಖಲೆಯೂ ಹೌದು. ಇದಕ್ಕೂ ಮುನ್ನ ಅವರು 2014 ಮತ್ತು 2015ರಲ್ಲಿ ಬಂಗಾರದಿಂದ ಸಿಂಗಾರಗೊಂಡಿದ್ದರು.

ಸಿಂಧು: ಫೈನಲ್‌ ಕಂಟಕ
ಫೈನಲ್‌ ತನಕ ಅಮೋಘ ಪ್ರದರ್ಶನ ನೀಡುವ ಪಿ.ವಿ. ಸಿಂಧು, ಪ್ರಶಸ್ತಿ ಸುತ್ತಿನಲ್ಲಿ ಎಡವುತ್ತಿರುವುದು ನಿಜಕ್ಕೂ ಚಿಂತೆಯ ಸಂಗತಿ. 2016ರ ಬಳಿಕ ಅವರು ವಿಶ್ವ ಮಟ್ಟದ 8 ಫೈನಲ್‌ಗ‌ಳಲ್ಲಿ ಸೋಲನುಭವಿಸಿದ್ದಾರೆ. ರಿಯೋ ಒಲಿಂಪಿಕ್ಸ್‌, ಹಾಂಕಾಂಗ್‌ ಓಪನ್‌ (2017, 2018), ಸೂಪರ್‌ ಸೀರಿಸ್‌ ಫೈನಲ್‌ (2017), ಇಂಡಿಯಾ ಓಪನ್‌ (2018), ಥಾಯ್ಲೆಂಡ್‌ ಓಪನ್‌ (2018), ವಿಶ್ವ ಬ್ಯಾಡ್ಮಿಂಟನ್‌ (2017 ಮತ್ತು 2018). ಈ ಸಲವಾದರೂ ಸಿಂಧು ಫೈನಲ್‌ ಕಂಟಕದಿಂದ ಮುಕ್ತರಾಗಬಹುದೆಂಬ ನಿರೀಕ್ಷೆ ಹುಸಿಯಾಗಿದೆ.ಆದರೆ ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಅತ್ಯಧಿಕ 4 ಪದಕ ಗೆದ್ದ ಭಾರತೀಯ ಆಟಗಾರ್ತಿ ಎಂಬ ದಾಖಲೆ ಸಿಂಧು ಹೆಸರಲ್ಲಿರುವುದನ್ನು ಮರೆಯುವಂತಿಲ್ಲ (2 ಬೆಳ್ಳಿ, 2 ಕಂಚು).

ಆಘಾತಕಾರಿ ಸೋಲು
“ನಿಜಕ್ಕೂ ಇದು ಅತ್ಯಂತ ಆಘಾತಕಾರಿ ಸೋಲು. ಸತತ 2ನೇ ವರ್ಷವೂ ಚಿನ್ನ ಕೈಜಾರಿದೆ. ಬಹಳ ದುಃಖವಾಗುತ್ತಿದೆ. ಕೆಲವೊಮ್ಮೆ ನಮ್ಮ ದಿನ ಆಗಿರುವುದಿಲ್ಲ. ಏರಿಳಿತ, ಸೋಲು-ಗೆಲುವು ಸಹಜ. ಮುಂದಿನ ಕೂಟಕ್ಕೆ ಅತ್ಯಂತ ಬಲಿಷ್ಠವಾಗಿ ಮರ ಳುವುದೊಂದೇ ದಾರಿ…’
– ಪಿ.ವಿ. ಸಿಂಧು

Advertisement

Udayavani is now on Telegram. Click here to join our channel and stay updated with the latest news.

Next