Advertisement

ಹೆಜಮಾಡಿ, ಪಡುಬಿದ್ರಿಯಲ್ಲಿ ಮೀನು ಸುಗ್ಗಿ !

09:57 AM Sep 06, 2018 | |

ಪಡುಬಿದ್ರಿ: ಹೆಜಮಾಡಿ, ಪಡುಬಿದ್ರಿ ಪರಿಸರದಲ್ಲಿ ಬುಧವಾರ ಮೀನುಗಳ ಸುಗ್ಗಿ. ಮೀನುಗಾರರು ಕಡಲಾಳದಿಂದ ಮೀನುಗಳನ್ನು ಹಿಡಿದು ತರುವುದು ಸಾಮಾನ್ಯ. ಆದರೆ ಇಲ್ಲಿ ಮಾತ್ರ ಇದು ತದ್ವಿರುದ್ಧವಾಗಿದೆ. ಕಳೆದೆರಡು ದಿನಗಳಿಂದ ಮೀನುಗಳೇ ಗುಂಪು ಗುಂಪಾಗಿ ತೀರಕ್ಕೆ ಬಂದು ಮೀನುಗಾರರ ಬಲೆಗೆ ಬೀಳುತ್ತಿವೆ. ಬುಧವಾರವಂತೂ ಅವುಗಳ ಪ್ರಮಾಣ ದ್ವಿಗುಣವಾಗಿದೆ.

Advertisement

ಹೆಜಮಾಡಿಯಿಂದ ಸಸಿಹಿತ್ಲು ಕದಿಕೆ ವರೆಗೂ ಬುಧವಾರ ಸಿಲ್ವರ್‌ಫಿಶ್‌ ಬೇಟೆ ಹೇರಳವಾಗಿದೆ. ಪರಿಸರದ
ಮನೆಗಳಲ್ಲಿ 50 – 60 ಕೆಜಿ ಮೀನು ಸಂಗ್ರಹವಿದೆ. ಸ್ಥಳೀಯರಿಗೂ ಅಪಾರ ಪ್ರಮಾಣದಲ್ಲಿ ಮೀನು ಲಭ್ಯವಾಗಿದ್ದು, ಮಾರಾಟ ಮಾಡಿ 5,000 – 10,000 ರೂ. ವರೆಗೆ ಸಂಪಾದಿಸಿದ್ದಾರೆ. ಬೇಸಗೆಯಲ್ಲಿ 100 ರೂ.ಗೆ 30 ಬೊಳಿಂಜೀರ್‌ ಲಭ್ಯವಾಗುತ್ತಿದ್ದರೆ ಇಂದು ಕೆಜಿಗೆ 10 ರೂ.ಗಳಿಂದ 20 ರೂ.ಗಳಲ್ಲಿ ವಿಕ್ರಯವಾಗಿದೆ. ಕೆಲವು ಫಂಡ್‌ಗಳ ಸದಸ್ಯರಿಗೆ 2 ಲಕ್ಷದಿಂದ 10 ಲಕ್ಷ ರೂ. ವರೆಗೂ ಆದಾಯ ಲಭಿಸಿದೆ.

ಎಲ್ಲೆಲ್ಲೂ  ಮೀನು !
ಹೆಜಮಾಡಿ ಪರಿಸರದಲ್ಲಿ ಜನರು ಕೊಡಪಾನ, ಬಕೆಟ್‌, ಪ್ಲಾಸ್ಟಿಕ್‌ ಚೀಲ, ಗೋಣಿಗಳಲ್ಲಿ ಮೀನುಗಳನ್ನು ಶೇಖರಿಸಿ ಮನೆಗಳಿಗೆ ಒಯ್ದಿದ್ದಾರೆ. ಇದರಿಂದಾಗಿ ಹೆಜಮಾಡಿ ಪೇಟೆಯಲ್ಲಿ ಪ್ಲಾಸ್ಟಿಕ್‌ ಚೀಲಗಳಿಗೂ ಬೇಡಿಕೆ ಹೆಚ್ಚಾಯಿತು. ಮಂಜುಗಡ್ಡೆ ಸ್ಥಾವರಗಳಲ್ಲಿ ಮಂಜುಗಡ್ಡೆಗೂ ಬೇಡಿಕೆ ಬಂತು.

ನಿಯಂತ್ರಣಕ್ಕೆ ಪೊಲೀಸರು
ಹೆಜಮಾಡಿ ಕಡಲ ತೀರಕ್ಕೆ ಅಪಾರ ಸಂಖ್ಯೆಯ ವಾಹನಗಳು ಬಂದುದರಿಂದ ಅಮಾವಾಸೆ ಕರಿಯ ಪ್ರದೇಶದಲ್ಲಿ ಸಂಚಾರದೊತ್ತಡವೂ ಹೆಚ್ಚಾಯಿತು. ಕರಾವಳಿ ಕಾವಲು ಪಡೆ ಪೊಲೀಸರು ಸಂಚಾರ ನಿಯಂತ್ರಣದಲ್ಲಿ ತೊಡಗಿದ್ದರು.

ತೀರಕ್ಕೆ ಬರಲು ಕಾರಣ? 
ಕೊಬ್ಬಿನ ಅಂಶವಿರುವ ಈ ಮೀನುಗಳು ಮರಿ ಇಡುವ ಕಾಲ ಇದಾಗಿದ್ದು ಆಳಸಮುದ್ರ ಮೀನುಗಾರಿಕಾ ದೋಣಿಗಳ ಶಬ್ದ ಮಾಲಿನ್ಯಕ್ಕೆ ಹೆದರಿ ತೀರದತ್ತ ಇವು ಧಾವಿಸಿವೆ ಎನ್ನಲಾಗುತ್ತಿದೆ. ಪರಿಸರದಲ್ಲಿ ಇಂತಹ ಘಟನೆ ಇದೇ ಪ್ರಥಮ ಎಂದು ಮೊಗವೀರ ಮುಂದಾಳು, ಹೆಜಮಾಡಿ ಗ್ರಾ.ಪಂ. ಉಪಾಧ್ಯಕ್ಷ ಸುಧಾಕರ ಕರ್ಕೇರ ಹೇಳಿದ್ದಾರೆ.

Advertisement

ದಾಖಲೆ ಮೀನುಗಳ ಬೇಟೆ
ಬುಧವಾರ ಹೆಜಮಾಡಿ, ಪಡುಬಿದ್ರಿಗಳ ಕೈರಂಪಣಿ ಮೀನುಗಾರರ ಬಲೆಗೆ ಸಿಲ್ವರ್‌ ಫಿಶ್‌ಗಳು ಮಾತ್ರ ಬಿದ್ದಿರುವುದೂ ದಾಖಲೆಯೇ ಆಗಿದೆ. ಹೆಜಮಾಡಿಯ ಕೈರಂಪಣಿ ಸದಸ್ಯರಿಗೆ ಬಲೆಯನ್ನು ಮೇಲಕ್ಕೆ ಎಳೆಯಲಾಗದೆ ಸ್ಥಳೀಯರೂ ಕೈಜೋಡಿಸಬೇಕಾಗಿ ಬಂದಿತು.

Advertisement

Udayavani is now on Telegram. Click here to join our channel and stay updated with the latest news.

Next