ಮುಂಡರಗಿ: ತಾಲೂಕಿನ ಶಿರೋಳ-ಬಸಾಪುರ ಕೆರೆಯ ಕಾಲುವೆಯಲ್ಲಿ ಹೂಳು ತುಂಬಿ, ಹುಲ್ಲು-ಕಂಟಿ, ಕಸ ಬೆಳೆದಿದ್ದರಿಂದ ನೀರು ಸರಾಗವಾಗಿ ಹರಿಯದೇ ಬೆಳೆಗಳಿಗೆ ನೀರಿನ ಕೊರತೆ ಎದುರಾಗಿದ್ದು, ರೈತರಲ್ಲಿ ಆತಂಕ ಮೂಡಿದೆ.
ಶಿರೋಳ-ಬಸಾಪುರ ಕೆರೆ ನೀರಿನಿಂದ ರೈತರು ಉತ್ತಮ ಬೆಳೆ ಬೆಳೆಯುವ ಹುಮ್ಮಸ್ಸಿನಲ್ಲಿದ್ದರು. ಆದರೆ ಕೆರೆ ನೀರು
ಕಾಲುವೆ ಮೂಲಕ ಸರಾಗವಾಗಿ ಹರಿಯದೇ ಇರುವುದರಿಂದ ಬೆಳೆಗಳು ನೀರಿನ ಕೊರತೆ ಎದುರಿಸುತ್ತಿವೆ. ಈಗಾಗಲೇ ಬೆಳೆದು ನಿಂತ ಗೋವಿನಜೋಳ, ಸೂರ್ಯಕಾಂತಿ, ಬಿಳಿಜೋಳ ಬೆಳೆಗಳಿಗೆ ಎರಡು ಅಥವಾ ಮೂರು ಸಲ ಕೆರೆ ನೀರು ಹಾಯಿಸಿದರೆ ಬೆಳೆಗಳಿಗೆ ಅನುಕೂಲವಾಗಲಿದೆ. ಆದರೆ ನೀರು ಬರದಿದ್ದರೆ ತೇವಾಂಶ ಕಡಿಮೆಯಾಗಿ ನಿರೀಕ್ಷಿತ ಫಲ ಕೊಡಲ್ಲ ಎನ್ನುವ ಕೊರಗು ರೈತರಲ್ಲಿದೆ.
ಕಾಲುವೆ ಕಟ್ಟಡ ಶಿಥಿಲ: ಶಿರೋಳ-ಬಸಾಪುರ ಕೆರೆಯಲ್ಲಿ ನೀರಿದ್ದರೂ ರೈತರಿಗೆ ತಲುಪದಾಗಿದೆ. ಕೆರೆಯ ನೀರು ಕಾಲುವೆ ಮೂಲಕ ಹರಿದು ಬಂದರೆ ಹೊಲಗಳಿಗೆ ತಲುಪುತ್ತದೆ. ಆದರೆ ಕೆರೆಯ ನೀರು ಕಾಲುವೆ ಮೂಲಕಹರಿಯುತ್ತಿಲ್ಲ. ಕಾಲುವೆ ಕಟ್ಟಡ ಕೆಲವೆಡೆ ಶಿಥಿಲಗೊಂಡು, ಕಿತ್ತು ಹೋಗಿದೆ. ಕಾಲುವೆ ಕಲ್ಲುಗಳು ಕಿತ್ತು ಹೋಗಿದ್ದರಿಂದ ನೀರು ಹರಿಯಲು ತೊಂದರೆಯಾಗಿದೆ ಎನ್ನುತ್ತಾರೆ ರೈತರು.
ನಷ್ಟದ ಭೀತಿಯಲ್ಲಿ ರೈತರು: ಮುಖ್ಯ ಕಾಲುವೆಯಿಂದ ರೈತರ ಹೊಲಗಳಿಗೆ ನೀರು ಹೋಗಲು ಉಪ ಕಾಲುವೆಗಳು ಸರಿಯಾಗಿಲ್ಲ. ಇದರಿಂದ ಹೊಲಗಳಿಗೆ ಕೆರೆ ನೀರು ಬಾರದೇ ಇರುವುದರಿಂದ ಬೆಳೆದ ಬೆಳೆ ಕೈಗೆಟುಕದಾಗಿವೆ. ತೇವಾಂಶ ಕೊರತೆಯಿಂದ ಬೆಳೆ ಇಳುವರಿ ಬಾರದಿದ್ದರೆ ನಷ್ಟ ಅನುಭವಿಸುವ ಚಿಂತೆ ರೈತರಲ್ಲಿ ಮನೆ ಮಾಡಿದೆ. ಕಾಲುವೆ ನೀರು ಕೆರೆಯಿಂದ ಶಿರೋಳದ ದಕ್ಷಿಣ ದಿಕ್ಕಿನಲ್ಲಿರುವಜಮೀನುಗಳಿಗೆ ಸರಾಗವಾಗಿ ಹರಿಯುತ್ತದೆ. ಆದರೆ ಶಿರೋಳದ ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿರುವ ನೂರಾರು ಎಕರೆ ಜಮೀನುಗಳಿಗೆ ನೀರು ಹರಿಯುವುದೇ ಇಲ್ಲ.
ಶಿರೋಳದ ದಕ್ಷಿಣ ದಿಕ್ಕಿಗೆ ಸಾಗುವ ಕಾಲುವೆಯಲ್ಲಿ ಹುಲ್ಲು ಬೆಳೆದು, ಹೂಳು ತುಂಬಿದೆಯಲ್ಲದೇ ಕೆಲವೆಡೆ ಕಾಲುವೆ ಕಿರಿದಾಗಿದೆ. ಇದರಿಂದ ದಕ್ಷಿಣ ದಿಕ್ಕಿನಲ್ಲಿರುವ ಜಮೀನುಗಳಿಗೆ ನೀರು ದೊರಕದಂತಾಗಿದೆ. ಜೋರಾದ ದುರಸ್ತಿ ಕೂಗು: ಶಿರೋಳದ ದಕ್ಷಿಣ ದಿಕ್ಕಿನಲ್ಲಿರುವ ಜಮೀನುಗಳಿಗೆ ನೀರು ಸರಾಗವಾಗಿ ಹರಿದು ಹೋಗಲು ಉಪ ಕಾಲುವೆಯಲ್ಲಿ ತುಂಬಿರುವ ಹೂಳು, ಕಂಟಿಗಳು, ಹುಲ್ಲನ್ನು ಜೆಸಿಬಿ ಯಂತ್ರ ಬಳಸಿ ತೆಗೆಸಬೇಕೆಂಬುದು ರೈತರ ಬಲವಾದ ಕೂಗಾಗಿದೆ.
-ಹು.ಬಾ. ವಡ್ಡಟ್ಟಿ