Advertisement

ಪದವೀಧರ-ಇಂಜಿನಿಯರ್‌ ಕೈಹಿಡಿದ ರೇಷ್ಮೆ

04:57 PM Dec 20, 2019 | Suhan S |

ನರೇಗಲ್ಲ:  ಕೃಷಿ ಪ್ರಧಾನ ದೇಶ ನಮ್ಮದು. ಆದರೆ ಇತ್ತೀಚಿನ ದಿನಗಳಲ್ಲಿ ಅತಂತ್ರ ಮಳೆಗಾಲ, ಹವಾಮಾನ ವೈಪರೀತ್ಯದಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗುತ್ತಿದ್ದು, ಹೊಟ್ಟೆಗೆ ಹಿಟ್ಟು ಇಲ್ಲದಿರುವ ಪರಿಸ್ಥಿತಿಗಳೂ ಕಣ್ಮುಂದೆ ಇವೆ. ಹೀಗಾಗಿ ಬಹುತೇಕರು ಸರ್ಕಾರಿ ಇಲ್ಲವೇ ಖಾಸಗಿ ನೌಕರಿಯತ್ತ ಮುಖ ಮಾಡುತ್ತಿರುವುದು ಸಾಮಾನ್ಯವಾಗಿದೆ.

Advertisement

ಆದರೆ ಇದಕ್ಕೆ ಸಮೀಪದ ಕೋಚಲಾಪುರ ಗ್ರಾಮದ ಸಹೋದರರು ತದ್ವಿರುದ್ಧವಾಗಿದ್ದಾರೆ. ಸ್ನಾತಕೋತ್ತರ ಪದವೀಧರನಾದ ಪ್ರಶಾಂತ ಹಾಗೂ ಇಂಜಿನಿಯರ್‌ ಮುಗಿಸಿದ ಪ್ರಕಾಶ ತಮ್ಮ ದಾರಿ ಬಿಟ್ಟು ಕೃಷಿ ಕ್ಷೇತ್ರ ಆಯ್ಕೆ ಮಾಡಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.

ಪ್ರಶಾಂತ ಎಂಬುವರು ಮಾನಸ ಗಂಗೋತ್ರಿ ಯುನಿವರ್ಸಿಟಿಯಲ್ಲಿ ಎಂ.ಎ. ಪದವಿ ಪಡೆದಿದ್ದರು. ಅತಿಥಿ ಉಪನ್ಯಾಸಕರಾಗಿ ರೋಣ ತಾಲೂಕಿನ ಹೊಳೆಆಲೂರ ಗ್ರಾಮದ ಆಲೂರು ವೆಂಕಟರಾಯರು ಐಟಿಐ ತರಬೇತಿ ಕಾಲೇಜಿನಲ್ಲಿ 4 ವರ್ಷ ಸೇವೆ ಸಲ್ಲಿಸಿದ್ದಾರೆ. ಆದರೆ ಸಂಬಳ ಹಾಗೂ ಓಡಾಟ ಸಮಸ್ಯೆಯಿಂದ ವೃತ್ತಿ ತ್ಯಜಿಸಿದರು.

ನಂತರ ದಿನದಲ್ಲಿ ಸಹೋದರ ಪ್ರಕಾಶ ಕೂಡ ಡಿಪ್ಲೋಮಾ ಫಿಟ್ಟರ್‌ ಮುಗಿಸಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡುವ ಸಂದರ್ಭದಲ್ಲಿ ತಾವು ಇದ್ದ ಬಾಡಿಗೆ ಮನೆ ಮಾಲೀಕ ವೆಂಕಟಪ್ಪ ಎಂಬುವರು ಇವರಿಗೆ ರೇಷ್ಮೆ ಕೃಷಿ ಬಗ್ಗೆ ಮಾಹಿತಿ ನೀಡಿ ಪ್ರೇರಣೆ ನೀಡಿದ್ದರು. ನಂತರ ಗ್ರಾಮಕ್ಕೆ ಮರಳಿದ ಪ್ರಶಾಂತ ಅಯ್ಯನಗೌಡ್ರ ವಾಣಿಜ್ಯ ಬೆಳೆಗಳಾದ ಮೆಕ್ಕೆಜೋಳ, ಹತ್ತಿ, ನೀರಾವರಿ ಶೇಂಗಾ ಬೆಳೆಯುತ್ತಿದ್ದರು. ಆದರೆ, ಈ ಬೆಳೆಗಳಲ್ಲಿ ನಿರೀಕ್ಷಿತ ಲಾಭ ಕಾಣದೇ ರೇಷ್ಮೆ ಕೃಷಿ ಅರಸಿದರು.

ರೇಷ್ಮೆಯೊಂದಿಗೆ ತರಕಾರಿ ಬೆಳೆ: ಕೃಷಿ ಮಾಡಲು ಹಿಂದೇಟು ಹಾಕುವ ಇಂದಿನ ಯುವಕರು ಮುಜಗರ ಪಡುವ ಸ್ಥಿತಿಯಲ್ಲಿ ಸಮೀಪದ ಕೋಚಲಾಪುರ ಗ್ರಾಮದ ಪ್ರಶಾಂತ ಹಾಗೂ ಪ್ರಕಾಶ ಅಯ್ಯನಗೌಡ್ರ ಕೃಷಿಯಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ಲಾಭದಾಯಕ ಬೆಳೆಯಾದ ರೇಷ್ಮೆ ಕೃಷಿ ಸೇರಿದಂತೆ ತರಕಾರಿ ಬೆಳೆ ಬೆಳೆದು ಕುಟುಂಬ ನಿರ್ವಹಣೆಗೆ ಮುಂದಾಗಿದ್ದಾರೆ.

Advertisement

ನೀರಾವರಿ ಪದ್ಧತಿ: ಸದ್ಯ ಎರಡು ಎಕರೆ ಜಮೀನಿನಲ್ಲಿ ಒಂದು ಕೊಳವೆ ಬಾವಿ ಇದೆ. ಅದರಿಂದ ನಿತ್ಯ ರೇಷ್ಮೆ ಬೆಳೆಗೆ ಹನಿ ನೀರಾವರಿ ಮೂಲಕ ನೀರು ಹಾಯಿಸುತ್ತಾರೆ. ಇದಕ್ಕೆ ಪ್ರತಿಫಲವಾಗಿ ರೇಷ್ಮೆಯಲ್ಲಿ ಯಶಸ್ಸು ಕಾಣಲು ಸಾಧ್ಯವಾಗಿದೆ ಎನ್ನುತ್ತಾರೆ.

ಅಯ್ಯನಗೌಡ್ರ ಸಹೋದರರು. ಹೋಬಳಿ ವ್ಯಾಪ್ತಿಯ ಜಕ್ಕಲಿ, ಯರೇಬೇಲೇರಿ, ಅಬ್ಬಿಗೇರಿ ಗ್ರಾಮಗಳಲ್ಲಿ ರೇಷ್ಮೆ ಬೆಳೆಗಾರರಿದ್ದಾರೆ. ಆದರೆ, ಕಳೆದ ನಾಲ್ಕೈದು ವರ್ಷಗಳಿಂದ ಬಹುತೇಕ ಕೊಳವೆ ಬಾವಿಗಳು ಬತ್ತಿ ಹೋಗಿದ್ದು, ತೋಟ ನಿರ್ವಹಣೆ ಮಾಡಲಾರದ ಸ್ಥಿತಿಯಲ್ಲಿ ರೈತರಿದ್ದಾರೆ. ಆದರೆ, ಇವರು ಮಾತ್ರ ವ್ಯವಸ್ಥಿತವಾಗಿ ನೀರು ಬಳಸಿಕೊಂಡು ಲಾಭದಾಯಕ ರೇಷ್ಮೆ ಕೃಷಿ ಮಾಡುತ್ತಿದ್ದಾರೆ.

ರೇಷ್ಮೆ ಪ್ರದೇಶವೆಷ್ಟು?: ಎರಡು ಎಕರೆಯಲ್ಲಿ ರೇಷ್ಮೆ ಬೆಳೆಯುತ್ತಿದ್ದು ಇಡೀ ವರ್ಷ ಬೆಳೆ ಇರುವ ಹಾಗೆ ಎರಡು ಪ್ಲಾಟ್‌ಗಳನ್ನಾಗಿ ಮಾಡಿಕೊಂಡು ಮೂರು ತಿಂಗಳ ಅವಧಿ ಯಲ್ಲಿ ಎರಡು ಬೆಳೆ ಬೆಳೆಯುತ್ತಿದ್ದಾರೆ. ಅಂದರೆ ಪ್ರತಿ ಬೆಳೆ ನಂತರ 15 ದಿನಗಳ ಬಿಡುವು ಬಿಟ್ಟರೆ, ಇಡೀ ವರ್ಷ ಇವರ ತೋಟದಲ್ಲಿ ರೇಷ್ಮೆ ಹುಳುಗಳು ಗೂಡು ಕಟ್ಟುತ್ತಿರುತ್ತವೆ.

ಸುಸಜ್ಜಿತ ಶೆಡ್‌: 1.50 ಲಕ್ಷ ವೆಚ್ಚದಲ್ಲಿ 20ಗಿ30 ಅಳತೆಯಲ್ಲಿ ರೇಷ್ಮೆ ಹುಳುಗಳಿಗಾಗಿ ಸುಸಜ್ಜಿತ ಶೆಡ್‌ ನಿರ್ಮಿಸಲಾಗಿದೆ. ಗಾಳಿ, ಬೆಳಕಿನ ವ್ಯವಸ್ಥೆಯಿದೆ. ಎರಡು ಎಕರೆಯಲ್ಲಿ ರೇಷ್ಮೆ ಬೆಳೆದರೆ, ಶೆಡ್‌ನ‌ಲ್ಲಿ ಹುಳು ಸಾಕಿದ್ದಾರೆ. ರೇಷ್ಮೆ ಗಿಡದ ಸೊಪ್ಪೇ ಹುಳುಗಳಿಗೆ ಆಹಾರ. ಹುಳುಗಳು ಗೂಡು ಕಟ್ಟಿವಿಕೆ ಆರಂಭಿಸಿದ 24 ದಿನಗಳಲ್ಲಿ ರೇಷ್ಮೆ ಹುಳು ಬೆಳವಣಿಗೆಯಾಗುತ್ತದೆ. ಅದರಲ್ಲಿ 2 ದಿನ ತನ್ನ ಸುತ್ತ ಕೋಶ ರಚಿಸಿಕೊಳ್ಳುತ್ತವೆ. ಗೂಡಿನೊಳಗೆ ರೇಷ್ಮೆ ಉತ್ಪಾದಿಸುವ ಹುಳು ಅದರೊಳಗೆ ಅಂತಿಮ ವಿದಾಯ ಹೇಳುತ್ತದೆ. ಇದು ರೇಷ್ಮೆ ಬೆಳೆ ಪದ್ಧತಿ.

ಕಳೆದ ಒಂದೂವರೆ ವರ್ಷದಿಂದ ರೇಷ್ಮೆ ಕೃಷಿಗೆ ಕನಿಷ್ಟ 1.50 ಲಕ್ಷ ರೂ. ಖರ್ಚು ಮಾಡಲಾಗಿದೆ. ಇದರಲ್ಲಿ ಖರ್ಚಿಗಿಂತ ಲಾಭವೇ ಅಧಿಕ. ಒಂದೂವರೆ ವರ್ಷದಲ್ಲಿ 4-5 ಲಕ್ಷದವರೆಗೆ ಲಾಭ ಪಡೆದಿದ್ದೇವೆ. ರೇಷ್ಮೆ ಇಲಾಖೆ ಸಹಾಯದೊಂದಿಗೆ ರೇಷ್ಮೆ ಹುಳು ಹಾಗೂ ಮಾರಾಟಕ್ಕೆ ಶಿರಹಟ್ಟಿ, ರಾಮನಗರ ಸೇರಿದಂತೆ ವಿವಿಧೆಡೆ ಹೋಗುವುದು ಅನಿವಾರ್ಯವಾಗಿದೆ. ಪ್ರಶಾಂತ ಅಯ್ಯನಗೌಡ್ರ, ರೈತ

 

-ಸಿಕಂದರ ಎಂ. ಆರಿ

Advertisement

Udayavani is now on Telegram. Click here to join our channel and stay updated with the latest news.

Next