ಬೆಂಗಳೂರು: ಮೈಸೂರು ಸಿಲ್ಕ್ ರೇಷ್ಮೆ ಸೀರೆಯೂ ನಾಚುವಂತಹ ಬಗೆ ಬಗೆಯ ರೇಷ್ಮೆ ವಸ್ತ್ರಗಳ ಪ್ರದರ್ಶನ ಮತ್ತು ಮಾರಾಟ ಮೇಳ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯುತ್ತಿದೆ. ಕೇಂದ್ರ ಸರ್ಕಾರದ ಸಿಲ್ಕ್ ಮಾರ್ಕ್ ಸಂಸ್ಥೆ (ಎಸ್‌ಎಂಒಐ) ವತಿಯಿಂದ ಜ.28ರವರೆಗೂ ಹಮ್ಮಿಕೊಳ್ಳಲಾಗಿರುವ ಪ್ರದರ್ಶನದಲ್ಲಿ 11 ರಾಜ್ಯಗಳ ವಿಶೇಷವಾದ ರೇಷ್ಮೆ ಸೀರೆಗಳು ಹೆಂಗೆಳೆಯರ ಮನಸೂರೆಗೊಳ್ಳುತ್ತಿವೆ.
ಗುಜಾರತ್‌ನ ವಿವಿಧ ಬಣ್ಣದ ಬಾಂಧನಿ ಸೀರೆ, ಪಟೋಲ ಸೀರೆ, ಪಶ್ಚಿಮ ಬಂಗಾಳದ ಮುರ್ಷಿದಾ ರೇಷ್ಮೆ ಸೀರೆ, ಬಾಲಚರಿ ಸೀರೆ, ಟಸ್ಸಾರ್ ರೇಷ್ಮೆ ಸೀರೆಗಳು ಹಾಗೂ ಕರ್ನಾಟಕದ ಈರಿ ರೇಷ್ಮೆ ಸೀರೆಗಳು ಪ್ರದರ್ಶನದ ವಿಶೇಷವಾಗಿವೆ. ಅಸ್ಸಾಂನ ವಿಶೇಷವಾದ ಮುಗ ರೇಷ್ಮೆ ಸೀರೆಗಳು ಹೆಣ್ಣು ಮಕ್ಕಳ ಗಮನ ಸೆಳೆಯುತ್ತಿದ್ದವು. ಶುದ್ಧವಾದ ಬಂಗಾರದ ಬಣ್ಣದಂತೆ ಕಾಣುವ ಈ ರೇಷ್ಮೆಯ ನೂಲು, ಅಸ್ಸಾಂ ಹೊರತುಪಡಿಸಿದರೆ ಪ್ರಪಂಚದ ಬೇರೆ ಎಲ್ಲೂ ದೊರೆಯದು.
ಅಂತಹ ಅಪರೂಪದ ರೇಷ್ಮೆಯ ನೂಲಿನಿಂದ ಮಾಡಿದ ಮುಗ ಸೀರೆಗಳು ಮೇಳದ ಪ್ರಮುಖ ಆಕರ್ಷಣೆಯಾಗಿವೆ. ಎಸ್‌ಎಂಒಐನಲ್ಲಿ ನೋಂದಣಿ ಮಾಡಿಕೊಂಡಿರುವ ಶುದ್ಧ ರೇಷ್ಮೆ ಉತ್ಪನ್ನಗಳ ಅಧಿಕೃತ ಉತ್ಪಾದಕರು ಮತ್ತು ನೇಕಾರರು ಮಾತ್ರವೇ ಮೇಳದಲ್ಲಿ ಭಾಗವಹಿಸುತ್ತಿದ್ದಾರೆ. ಒಂದು ವೇಳೆ ಇಲ್ಲಿ ಖರೀದಿಸುವ ಸೀರೆಗಳ ಬಗ್ಗೆ ಗ್ರಾಹಕರಲ್ಲಿ ಅನುಮಾನ ಮೂಡಿದರೆ ಮೇಳದಲ್ಲಿ ತೆರೆಯಲಾಗಿರುವ ರೇಷ್ಮೆ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಿಸಿಕೊಳ್ಳಬಹುದು.
ರೇಷ್ಮೆ ದಾರ ಸುಡುವ ಪರೀಕ್ಷೆ ಮೂಲಕ ಅಪ್ಪಟ ರೇಷ್ಮೆ ಯಾವುದು ಎಂದು ಸಿಬ್ಬಂದಿ ತಿಳಿಸಲಿದ್ದಾರೆ. ರೇಷ್ಮೆ ಹುಳುಗಳ ಎಂಜಲಿನಿಂದ ರೇಷ್ಮೆ ದಾರಗಳನ್ನು ತಯಾರಿಸಲಾಗುತ್ತದೆ. ಹೀಗಾಗಿ ರೇಷ್ಮೆ ದಾರಗಳಲ್ಲಿ ಪ್ರೋಟಿನ್ ಅಂಶ ಇರುತ್ತದೆ. ಹತ್ತಿಯ ದಾರ ಸುಟ್ಟರೆ ಕಾಗದ ಸುಟ್ಟ ವಾಸನೆ ಬರಲಿದೆ ಹಾಗೂ ಬೂದಿಯೂ ಕಾಗದದ ಬೂದಿಯಂತೆ ಇರಲಿದೆ. ಪಾಲಿಸ್ಟರ್ ದಾರ ಸುಟ್ಟರೆ ಅದು ಅಂಟ ಅಂಟಾಗಿರಲಿದೆ. ಆದರೆ ರೇಷ್ಮೆ ದಾರಗಳನ್ನು ಸುಟ್ಟರೆ ತಲೆ ಕೂದಲನ್ನು ಸುಟ್ಟ ವಾಸನೆ ಬರಲಿದೆ ಅದರ ಬೂದಿ ಪುಡಿ ಪುಡಿಯಾಗಿರಲಿದೆ.
ಮೇಳದಲ್ಲಿ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಟಚ್ ಸಿಲ್ಕ್ ಎಂಬ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರದ ಸಿಲ್ಕ್ ಮಾರ್ಕ್ ಸಂಸ್ಥೆಯ ಸಹಾಯಕ ನಿರ್ದೇಶಕ ಗೋವಿಂದಾಚಾರ್ಯ ತಿಳಿಸಿದರು. ಎಸ್‌ಎಂಒಐನ ಉಪಾಧ್ಯಕ್ಷ ರಜಿತ್ ರಂಜನ್ ಓಖಾಂಡಿಯರ್ ಶುಕ್ರವಾರ ಮೇಳಕ್ಕೆ ಚಾಲನೆ ನೀಡಿ, 5 ದಿನಗಳು ನಡೆಯುವ ಪ್ರದರ್ಶನದಲ್ಲಿ ಒಂದು-ಒಂದುವರೆ ಕೋಟಿಯಷ್ಟು ವ್ಯಾಪಾರ ವಹಿವಾಟು ನಡೆಯುವ ನಿರೀಕ್ಷೆ ಇದೆ ಎಂದು ತಿಳಿಸಿದರು.