Advertisement

ಕಣ್ಮನ ಸೆಳೆಯುತ್ತಿದೆ ಡಾ|ಅಪ್ಪ ಸಿಲಿಕಾನ್‌ ಪ್ರತಿಮೆ

12:02 PM Jun 17, 2022 | Team Udayavani |

ಕಲಬುರಗಿ: ಶರಣಬಸವೇಶ್ವರ ಸಂಸ್ಥಾನದ ಎಂಟನೇ ಮಹಾದಾಸೋಹ ಪೀಠಾಧಿಪತಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಪೂಜ್ಯ ಡಾ| ಶರಣಬಸವಪ್ಪ ಅಪ್ಪ ಅವರ ಸಿಲಿಕಾನ್‌ ಪ್ರತಿಮೆ ಸಂಸ್ಥಾನದ ಪ್ರಸಿದ್ಧ ಶರಣಬಸವೇಶ್ವರ ಪುಣ್ಯಕ್ಷೇತ್ರ ಹಾಗೂ ದಾಸೋಹ ಮಹಾಮನೆಗೆ ಭೇಟಿ ನೀಡುತ್ತಿರುವ ಎಲ್ಲರ ಕಣ್ಮನ ಸೆಳೆಯುತ್ತಿದೆ.

Advertisement

ಬೆಂಗಳೂರು ಮೂಲದ ಶಿಲ್ಪಿ ಆನಂದ ಬೀಳಗಿ ಅವರು ಹಿರಿಯ ದಾರ್ಶನಿಕ, ಶಿಕ್ಷಣ ತಜ್ಞರೂ ಆದ ಡಾ|ಅಪ್ಪ ಅವರನ್ನು ಹೋಲುವ ಎಲ್ಲ ಬಾಹ್ಯರೇಖೆಗಳೊಂದಿಗೆ ಸುಂದರ ಮತ್ತು ನೈಸರ್ಗಿಕವಾದ ಬಣ್ಣಗಳನ್ನು ಉಪಯೋಗಿಸಿ ಸಹಜ ಗಾತ್ರದ ಸಿಲಿಕಾನ್‌ ಪ್ರತಿಮೆಯನ್ನು ಆಸನದ ಭಂಗಿಯಲ್ಲಿ ತಯಾರಿಸಿದ್ದಾರೆ.

ದಾಸೋಹ ಮಹಾಮನೆಗೆ ಎರಡು ಬಾರಿ ಭೇಟಿ ನೀಡಿದ ಆನಂದ ಅವರು ಪ್ರತಿಮೆ ಸಿದ್ಧಪಡಿಸಲು ಡಾ| ಅಪ್ಪ ಅವರ ದೇಹದ ವಿವಿಧ ಭಾಗಗಳ ಅಳತೆ ತೆಗೆದುಕೊಂಡು ಅವರ ಎಲ್ಲ ವೈಶಿಷ್ಟ್ಯಗಳನ್ನು ಅಳವಡಿಸಿ, ನೈಜ ಸ್ವರೂಪದಲ್ಲಿ ರೂಪಿಸಿದ್ದಾರೆ. ಈ ಪ್ರತಿಮೆಯನ್ನು ಯಾರಾದರೂ ಸ್ಪರ್ಶಿಸಿದರೆ ಅಪ್ಪ ಅವರನ್ನೇ ಸ್ಪರ್ಶಿಸಿದ ಭಾವನೆ ಮೂಡುತ್ತದೆ.

ಈ ಮೊದಲು ಬೀಳಗಿ ಅವರು ಮೈಸೂರು ಮೂಲದ ಚಾಮುಂಡೇಶ್ವರಿ ಸೆಲೆಬ್ರಿಟಿ ಮ್ಯೂಸಿಯಂನಲ್ಲಿ ಗಣ್ಯರಾದ ಮದರ್‌ ತೆರೆಸಾ, ಸಿದ್ಧಗಂಗಾ ಮಠದ ಡಾ|ಶಿವಕುಮಾರ ಸ್ವಾಮೀಜಿ, ಡಾ| ಬಿ.ಆರ್‌.ಅಂಬೇಡ್ಕರ್‌, ವಲ್ಲಭಭಾಯಿ ಪಟೇಲ್‌, ದಲೈಲಾಮಾ, ಚಾರ್ಲಿ ಚಾಪ್ಲಿನ್‌ ಮತ್ತು ಇತರರ ಜೀವಿತಾವ ಧಿಯ ಪ್ರತಿಮೆಗಳನ್ನು ಕೆತ್ತಿದ್ದಾರೆ. ಬೀಳಗಿ ಅವರು ವಿಜಯಪುರದ ಅಭಿನವ ಶಿವಪುತ್ರ ಸ್ವಾಮೀಜಿ ಮತ್ತು ಇತರ ಸಿಲಿಕಾನ್‌ ಪ್ರತಿಮೆಗಳನ್ನು ಸಹ ತಯಾರಿಸಿದ್ದಾರೆ.

ಡಾ| ಅಪ್ಪ ಅವರು ಭೌತಿಕ ದರ್ಶನಕ್ಕೆ ಲಭ್ಯವಿಲ್ಲದಿದ್ದಾಗ, ಶರಣಬಸವೇಶ್ವರ ದೇಗುಲಕ್ಕೆ ಆಗಮಿಸುವ ಭಕ್ತರಿಗೆ ದರ್ಶನ ಹಾಗೂ ಆಶೀರ್ವಾದ ಪಡೆಯಲು ದಾಸೋಹ ಮಹಾಮನೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಈ ಮೂರ್ತಿಯನ್ನು ವಿನ್ಯಾಸಗೊಳಿಸಲು ಬೀಳಗಿ ಅವರು ಸುಮಾರು ನಾಲ್ಕು ತಿಂಗಳು ಸಮಯ ತೆಗೆದುಕೊಂಡಿದ್ದಾರೆ.

Advertisement

ವೈದ್ಯಕೀಯ ದರ್ಜೆಯ ಸಿಲಿಕಾನ್‌ ವಸ್ತುವನ್ನು ಭಾರತದಲ್ಲಿ ತಯಾರಿಸದ ಕಾರಣ ಅದನ್ನು ಆಮದು ಮಾಡಿಕೊಂಡು ಪ್ರತಿಮೆ ಕೆತ್ತಲಾಗಿದೆ. ಇದು ಪ್ರತಿಮೆಯನ್ನು ಪರಿಪೂರ್ಣತೆಗೆ ತಕ್ಕಂತೆ ರೂಪಿಸಲು ಶಿಲ್ಪಿಗೆ ಅಗತ್ಯವಾದ ಕರಕುಶಲತೆಯನ್ನು ಒದಗಿಸುತ್ತದೆ ಎಂದು ಬೀಳಗಿ ತಿಳಿಸಿದ್ದಾರೆ.

ಮೇಣ, ನಾರಿನಂಥ ಇತರ ವಸ್ತುಗಳು ಸೀಮಿತ ಮತ್ತು ಕಡಿಮೆ ಜೀವಿತಾವಧಿಯನ್ನು ಹೊಂದಿದ್ದವಾದ್ದರಿಂದ ಡಾ|ಅಪ್ಪ ಪ್ರತಿಮೆಗೆ ವೈದ್ಯಕೀಯ ದರ್ಜೆಯ ಸಿಲಿಕಾನ್‌ ವಸ್ತುವನ್ನು ಪ್ರಮುಖವಾಗಿ ಆಯ್ಕೆ ಮಾಡಲಾಗಿದ್ದು, ವಿವಿಧ ವಸ್ತುಗಳ ಸೆಲೆಯಿಂದ ಪ್ರತಿಮೆ ರೂಪಿಸಲಾಗಿದೆ. ಸಿಲಿಕಾನ್‌ ಆಧಾರಿತ ಪ್ರತಿಮೆ ಕನಿಷ್ಟ 25 ವರ್ಷ ದೀರ್ಘಾವಧಿ ಆಯುಷ್ಯ ಹೊಂದಿದೆ. ಪ್ರತಿಮೆ ಮೇಲೆ ಬಳಸುವ ಬಟ್ಟೆಗಳನ್ನು ಅಗತ್ಯವಿದ್ದಾಗ ಬದಲಾಯಿಸಬಹುದು ಮತ್ತು ನಿಜವಾದ ಆಭರಣಗಳನ್ನು ಪ್ರತಿಮೆ ಮೇಲೆ ಪರಿಪೂರ್ಣ ನೋಟವನ್ನು ನೀಡಲು ಬಳಸಬಹುದು ಎಂದು ವಿವರಿಸಿದ್ದಾರೆ.

ಪ್ರತಿಮೆಯ ಮೇಣ ಮತ್ತು ಫೈಬರ್‌ ವಸ್ತುಗಳು ಸ್ಕ್ರ್ಯಾಚ್‌ ಪ್ರೂಫ್‌ ಆಗಿರುವುದಿಲ್ಲ ಮತ್ತು ಧೂಳನ್ನು ಸ್ವತ್ಛಗೊಳಿಸುವುದು ಕಠಿಣ ವಿಧಾನವಾಗಿದೆ. ಆದಾಗ್ಯೂ, ಸಿಲಿಕಾನ್‌ ಆಧಾರಿತ ಪ್ರತಿಮೆಯನ್ನು ತೊಳೆಯಬಹುದು ಮತ್ತು ಸ್ವತ್ಛಗೊಳಿಸಬಹುದು. ಪ್ರತಿಮೆಯ ಮತ್ತೂಂದು ವೈಶಿಷ್ಟ್ಯವೆಂದರೆ ಹುಬ್ಬು, ತಲೆ, ಕೈಗಳು ಮತ್ತು ಕಾಲಿನ ಮೇಲೆ ನೈಸರ್ಗಿಕ ಕೂದಲನ್ನು ಅಳವಡಿಸಲಾಗಿರುವುದು ಗಮನಾರ್ಹವಾಗಿದೆ.

ವಿಜಯಪುರ ಮೂಲದ ಬೀಳಗಿ ಅವರು ದಾವಣಗೆರೆ ಸ್ಕೂಲ್‌ ಆಫ್‌ ಆರ್ಟ್ಸ್ನಿಂದ ದೃಶ್ಯ ಕಲೆಯಲ್ಲಿ ಪದವಿ ಪಡೆದಿದ್ದಾರೆ. ಈಗ ಬೆಂಗಳೂರಿನಲ್ಲಿ “ಶಿಲ್ಪಕರ’ ಎನ್ನುವ ಸ್ಟುಡಿಯೋವನ್ನು ಸ್ಥಾಪಿಸಿದ್ದಾರೆ. ಅವರ ಹಲವಾರು ಕೃತಿಗಳನ್ನು ಅನೇಕ ಖಾಸಗಿ ಮನೆಗಳಲ್ಲಿ ಮತ್ತು ವಸ್ತುಸಂಗ್ರಹಾಲಯಗಳಲ್ಲಿ ಪ್ರದರ್ಶಿಸಲಾಗಿದೆ.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್‌ ಮಾತೋಶ್ರೀ ಡಾ| ದಾಕ್ಷಾಯಿಣಿ ಅವ್ವ, ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣಬಸವ ವಿಶ್ವವಿದ್ಯಾಲ ಯದ ಉಪಕುಲಪತಿ ಡಾ| ನಿರಂಜನ್‌ ವಿ. ನಿಷ್ಠಿ, ವಿಶ್ವವಿದ್ಯಾಲಯದ ಕುಲಸಚಿವ ಡಾ| ಅನಿಲಕುಮಾರ ಬಿಡವೆ, ಡೀನ್‌ ಡಾ| ಲಕ್ಷ್ಮೀ ಪಾಟೀಲ ಮಾಕಾ, ಹಣಕಾಸು ಅಧಿಕಾರಿ ಪ್ರೊ| ಕಿರಣ ಮಾಕಾ, ಬೀಳಗಿಯವರ ಕಾರ್ಯವನ್ನು ಅಭಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next