Advertisement

ಕೋಟೇಶ್ವರ: ಸಂಪೂರ್ಣ ತುಕ್ಕು ಹಿಡಿದ ಹಿಂದೂ ರುದ್ರಭೂಮಿಯ ಸಿಲಿಕಾನ್‌ ಚೇಂಬರ್‌

12:19 PM Jun 11, 2019 | Team Udayavani |

ಕೋಟೇಶ್ವರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಸನಿಹದ ಪಾರ್ಶ್ವದಲ್ಲಿರುವ ಹಿಂದೂ ರುದ್ರ ಭೂಮಿಯ ಶವ ಸಂಸ್ಕಾರದ ಬಳಕೆಯ ಸಿಲಿಕಾನ್‌ ಚೇಂಬರ್‌ ತುಕ್ಕು ಹಿಡಿದು ಸಂಪೂರ್ಣವಾಗಿ ಹಾಳಾಗಿದ್ದು ಬಳಕೆಗೆ ಅಯೋಗ್ಯವಾಗಿದೆ.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಕೋಟೇಶ್ವರ ಸಹಿತ ಆಸುಪಾಸಿನವರಿಗೆ ಈ ರುದ್ರಭೂಮಿಯ ಸಿಲಿಕಾನ್‌ ಚೇಂಬರ್‌ ನಿರ್ಮಾಣಕ್ಕಾಗಿ ಈ ಹಿಂದೆ ಹಣ ಒದಗಿಸಲಾಗಿತ್ತು. ಅಂತೆಯೇ ದಾನಿಗಳೂ ಧನ ಸಹಾಯ ಮಾಡುವುದರ ಮೂಲಕ ಕೈ ಜೋಡಿಸಿದ್ದರು. ಈ ನಡುವೆ ಕಳೆದ ಕೆಲವು ತಿಂಗಳಿಂದೀಚೆ ಶವ ಸಂಸ್ಕಾರಕ್ಕೆ ಅಡ್ಡಿಯಾಗುತ್ತಿರುವ ದುರಸ್ತಿಯಾಗದ‌ ಎರಡು ಪ್ರತ್ಯೇಕ ಸಿಲಿಕಾನ್‌ ಚೇಂಬರ್‌ ಬಳಕೆಗೆ ಯೋಗ್ಯವಾಗಿಲ್ಲದೇ ಹಾಳಾಗಿದ್ದು ಶವ ಸಂಸ್ಕಾರಕ್ಕಾಗಿ ಬರುವವರ ಪಾಡು ಶಿವನಿಗೇ ಪ್ರೀತಿ ಎಂಬಂತಾಗಿದೆ.

ದಾರಿದೀಪದ ಕೊರತೆ
ರಾ. ಹೆದ್ದಾರಿಯ ಎದುರಿನ ಪ್ರದೇಶದಲ್ಲಿ ದಾರಿದೀಪ ಇಲ್ಲದಿರುವುದರಿಂದ ರುದ್ರಭೂಮಿಗೆ ರಾತ್ರಿ ಹೊತ್ತಿ¤ನಲ್ಲಿ ಸಾಗುವುದು ಹರಸಾಹಸವೇ ಸರಿ. ಅಲ್ಲಿನ ಎರಡು ಪ್ರತ್ಯೇಕ ಸಿಲಿಕಾನ್‌ ಚೇಂಬರ್‌ಗಳ ಆಸುಪಾಸಿನ ದೀಪಗಳು ಬೆಳಗದಿರುವುದು ಇನ್ನಷ್ಟು ಸಮಸ್ಯೆಗೆ ಎಡೆಮಾಡಿದ್ದು ಸಂಬಂಧಿಸಿದವರು ಈ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ವಿಲೇವಾರಿಯಾಗದ ತ್ಯಾಜ್ಯ
ಶವವನ್ನು ಹೊತ್ತು ಸಾಗುವ ಮಾರ್ಗದ ಇಕ್ಕೆಲಗಳಲ್ಲಿ ಮೂಟೆಗಟ್ಟಲೆ ತ್ಯಾಜ್ಯ ಎಸೆಯಲಾಗಿದೆ. ಅವುಗಳ ವಿಲೇವಾರಿ ಆಗದಿರುವುದು ಆ ಮಾರ್ಗವಾಗಿ ರುದ್ರಭೂಮಿಗೆ ಸಾಗುವವರಿಗೆ ಕಿರಿಕಿರಿ ಉಂಟುಮಾಡಿದೆ.

ಒಟ್ಟಾರೆ ಹಿಂದೂ ರುದ್ರಭೂಮಿಯು ನಾನಾ ಸಮಸ್ಯೆಯಿಂದ ನಲುಗುತ್ತಿದ್ದು ಇದಕ್ಕೊಂದು ಪರಿಹಾರ ಒದಗಿಸುವಲ್ಲಿ ಗ್ರಾ.ಪಂ. ಕ್ರಮ ಕೈಗೊಳ್ಳಬೇಕಾಗಿದೆ.

Advertisement

ಭರವಸೆ ನೀಡಿದ್ದಾರೆ
ವಿಧಾನ ಪರಿಷತ್‌ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಸರಕಾರದ ವಿಶೇಷ ಅನುದಾನದಡಿ ಹೊಸ ತಾಂತ್ರಿಕ ವ್ಯವಸ್ಥೆಯ ಯೋಜನೆ ರೂಪಿನಿ ಕಾರ್ಯಗತಗೊಳಿಸುವ ಭರವಸೆ ನೀಡಿದ್ದಾರೆ.
-ತೇಜಪ್ಪ ಕುಲಾಲ್‌, ಪಿಡಿಒ, ಗ್ರಾ.ಪಂ. ಕೋಟೇಶ್ವರ

ತಾತ್ಕಾಲಿಕ ಪರಿಹಾರ
ಮುಂದಿನ ಕ್ರಿಯಾ ಯೋಜನೆಯಲ್ಲಿ ಎರಡು ಹೊಸ ಪ್ರತ್ಯೇಕ ಸಿಲಿಕಾನ್‌ ಚೇಂಬರ್‌ಗಳನ್ನು ಅಳವಡಿಸುವ ಬಗ್ಗೆ ಸಿದ್ಧತೆ ಮಾಡಲಾಗುವುದು. ಅದಕ್ಕೆ ಒಂದೆರೆಡು ತಿಂಗಳು ಕಾಲಾವಧಿ ಬೇಕಾಗಿರುವುದರಿಂದ ತತ್‌ಕ್ಷಣ ತಾತ್ಕಾಲಿಕ ಪರಿಹಾರ ಒದಗಿಸುವ ವ್ಯವಸ್ಥೆ ಮಾಡಲಾಗಿದೆ.
-ಉದಯ ನಾಯ್ಕ, ಪ್ರಭಾರ ಅಧ್ಯಕ್ಷರು, ಗ್ರಾ.ಪಂ. ಕೋಟೇಶ್ವರ

Advertisement

Udayavani is now on Telegram. Click here to join our channel and stay updated with the latest news.

Next