ಮನೆಯಲ್ಲಿಯೇ ಕೂತು ತಿಂದದರ ಪರಿಣಾಮವೇನೂ? ಚಪ್ಪಟೆಯಾಕಾರದ ಹೊಟ್ಟೆ ಹಂಡೆಯಾಕಾರಕ್ಕೆ ಮುಂದೆ ಚಾಚಿತ್ತು. ಸಿಕ್ಕ ಗೆಳೆಯರೆಲ್ಲರೂ ಏನು ಮಾರಾಯ ಇಷ್ಟು ದಪ್ಪಗಾಗಿದ್ದೀಯಾ ಬಗ್ಗಿ ಒಂದು ಹಿಡಿ ಮಣ್ಣು ಹೆಕ್ಕೋಕು ಆಗಲ್ಲ ಅಲ್ವೇನೋ ಎಂದು ತಮಾಷೆಗೆಳೆಯಿತ್ತಿದ್ದರು.
ಗೆಳೆಯನೊಬ್ಬ ಬಳಿಗೆ ಬಂದು ಮೆಲ್ಲನೆ ಇನ್ನು ಸ್ವಲ್ಪ ದಿನಗಳಲ್ಲಿ ಕಾಲೇಜು ಪ್ರಾರಂಭವಾಗುತ್ತದೆ. ಎಲ್ಲರು ನಿನ್ನನ್ನು ಹೀಯಾಳಿಸುತ್ತಾರೆ. ಮುಂಜಾನೆ ಎದ್ದು ಸ್ವಲ್ಪ ವಾಕಿಂಗ್ ಮಾಡು ಎಂಬ ಸಲಹೆಯಂತೆ ಈ ನಿರ್ಧಾರ ಕೈಗೊಂಡೆ.
ಒಂದು ಶುಭ್ರ ಬೆಳಗ್ಗೆ ಬೇಗ ಎದ್ದು, ಅಷ್ಟರಲ್ಲೇ ಮಳೆರಾಯ ಪಟಪಟ ಸದ್ದನ್ನ ಮಾಡುತ್ತ ಹುಯ್ಯನೆ ಸುರಿದು ನೆಲವನ್ನೆಲ್ಲ ತಂಪುಗೊಳಿಸಿದ್ದ. ಮನೆಯ ಬಾಗಿಲು ಮೆಲ್ಲನೆ ತೆರೆದು ಮನೆಯ ಅಂಗಳಕ್ಕೆ ಇನ್ನೇನು ಕಾಲಿಡಬೇಕು ಅಷ್ಟೇ, ಮನೆಯ ಮಾವಿನಮರದ ಬುಡದಲ್ಲಿ ತೆಳ್ಳನೆಯ ನರಪೇತಾಲದಂತಿರುವ ಆಕೃತಿಯೊಂದು ನಿಂತಿತ್ತು. ಸ್ವಲ್ಪ ಗಮನಿಸುತ್ತಲೇ ಕೈಯಲ್ಲೊಂದು ಬ್ಯಾಟರಿ ಟಾರ್ಚ್‌ನ ಬೆಳಗು ಪಿಳಿ ಪಿಳಿ ಬೆಳಗಿ ಮಾವಿನಮರದ ಎಲೆಗಳ ಮೇಲೆ ಮಿಂಚಿ ಆವಿಯಾಗುತ್ತಿತ್ತು.
ಸರಿ ಸುಮಾರು ಗಂಟೆ ಮುಂಜಾವಿನ ನಾಲ್ಕೂವರೆ ಆಗಿರಬಹುದು. ಮಂಜಿನ ಪರದೆಯಲ್ಲಿ ಯಾವುದೂ ಸ್ಪಷ್ಟವಾಗಿ ಗೋಚರಿಸುತ್ತಿರಲಿಲ್ಲ. ಮೆಲ್ಲನೆ ನನ್ನ ಕಾಲನ್ನು ಆ ನರಪೇತಾಲನ ಹತ್ತಿರ ಸರಿಸಿದಾಗ ಬಹುಶಃ ನನ್ನ ಹೆಜ್ಜೆಯ ಧ್ವನಿ ಅವನ ಕಿವಿಗೆ ಅಪ್ಪಳಿಸುತ್ತಲೇ ನನ್ನನ್ನೇ ದುರುಗುಟ್ಟಿ ನೋಡಲು ಪ್ರಾರಂಭಿಸಿದ.. ಒಮ್ಮೆ ಮೈ ಜುಮ್ ಎಂದಿತು. ಈ ಹಿಂದೆ ಗೆಳೆಯ ಸಮೀರ್ ನಮ್ಮ ಬೀದಿಯ ಕೊನೆಯ ಖಾಲಿ ಮನೆಯಲ್ಲಿ ಭೂತವಿದೆ ಎಂದು ಹೇಳಿದ್ದ.
ಚಳಿಯ ವಾತಾವರಣದ ನಡುವೆ ಮೈಯೆಲ್ಲ ಬೆವರುತ್ತಿತ್ತು. ಆಗಲೇ ನೋಡಿ ದೇವರ ನೆನಪಾದದ್ದು. ಇದುವರೆಗೂ ಕೇಳದ ಕಾಣದ ಮಂತ್ರಗಳು ಬಾಯಿಯ ಒಳಗೆ ಹೊಕ್ಕಿ ಚಟಪಟಿಸುತ್ತಿದ್ದವು. ಅಲ್ಲಿಂದ ಮೆಲ್ಲನೆ ಸರಿದು ರಸ್ತೆಗೆ ಇಳಿದು ಆಮೆಯ ಹೆಜ್ಜೆ ಹಾಕುತ್ತ ಮುಂದುವರಿದೆ. ಮುಂದೆ ಸಾಗುತ್ತಲೇ ಸಮಯ ಆಸುಪಾಸು ಐದೂವರೆ ಆಯಿತು. ಮೆಲ್ಲನೆ ರವಿ ತನ್ನ ಬೆಳಕನ್ನ ಹರಡುತ್ತ ಮೇಲೆರಿ ಬರುತ್ತಿದ್ದ ಹಕ್ಕಿಗಳೆಲ್ಲ ನಿದ್ದೆಯ ಮಂಪರಿನಲ್ಲಿದ್ದು ಚಿಲಿಪಿಲಿ ಗುಟ್ಟುತ್ತ ಕಾನನದ ಕಡೆಗೆ ಹೆಜ್ಜೆ ಹಾಕುತ್ತಿದ್ದವು. ಸ್ವಲ್ಪ ಧೈರ್ಯದ ಛಾಯೆ ಆವರಿಸಿತು. ಹಿಂದೆ ತಿರುಗಿ ನೋಡಿದಾಗ ನರಪೇತಲದ ವ್ಯಕ್ತಿ ನನ್ನನ್ನೆ ಹಿಂಬಾಲಿಸುತ್ತ ಬರುತ್ತಿದ್ದ. ಮತ್ತೆ ಮುಂದುವರಿದು ತಿರುಗಿದಾಗ ಆ ವ್ಯಕ್ತಿ ಮಾಯವಾಗಿದ್ದ ಮೊದಲೇ ಭೂತ ಎಂಬ ಪರಿಕಲ್ಪನೆಗೆ ಚೌಕಟ್ಟು ಹಾಕಿದ್ದ ತಲೆ ಸ್ವಲ್ಪ ಮಟ್ಟಿಗೆ ಅದುವೇ ಎಂದಿತ್ತು.
ಮರುದಿನದ ಮುಂಜಾನೆ ದರ್ಗಾದ ತಾಯತವನ್ನ ಕೈಗೇರಿಸಿಕೊಂಡು ಧೈರ್ಯಮಾಡಿ ಅಂಗಳಕ್ಕೆ ಇಳಿದೆ. ಅದೇ ರೀತಿ ಮತ್ತೆ ಆ ನರಪೇತಾಲ ಅಲ್ಲಿಯೆ ನಿಂತಿದ್ದ. ರಸ್ತೆಗಿಳಿದು ಮುಂದೆ ಸಾಗುತ್ತಲೆ ಹಿಂದೆಯೇ ಬರುತ್ತಿದ್ದ ಅನಂತರ ಸ್ವಲ್ಪ ಬೆಳಕಾಗುತ್ತಲೆ ಮಾಯವಾಗುತ್ತಿದ್ದ. ಇದು ಹಲವು ದಿನಗಳ ಕಾಲ ನಡೆಯಿತು. ಒಂದು ದಿನ ಈ ಮಾತನ್ನ ಗೆಳೆಯ ಅರವಿಂದನ ಬಳಿ ಹೇಳಿದಾಗ ಈ ದೆವ್ವ ಇದೆಲ್ಲ ಸುಮ್ಮನೆ ಮಾರಾಯ ನಾನು ಅದೆಷ್ಟೋ ಸಾರಿ ಕೆಲಸದಿಂದ ರಾತ್ರಿಯೆಲ್ಲ ಬಂದಿದ್ದೇನೆ. ನನಗೆ ಕಾಣಲಿಲ್ಲ ನಿನಗೆ ಹೇಗೆ ಕಾಣುತ್ತೆ ಎಂದ ನೋಡೋ ಣ ನಾಳೆ ನಾನು ನಿನ್ನೊಂದಿಗೆ ಬರುತ್ತೇನೆ ಅದ್ಯಾವ ದೆವ್ವ ಇದೆ ನೋಡೋಣ ಎಂದು ಮರು ದಿನ ಮುಂಜಾನೆ ಅವನ ಮಾತಿನಂತೆ ಹೊರಟೆವು ದಾರಿಯುದ್ದಕ್ಕೂ ಆ ವ್ಯಕ್ತಿಯ ಪತ್ತೇಯೇ ಇಲ್ಲ.
ಮನೆಗೆ ಮರಳಿ ಬಂದಾಗ ಅದೇ ಆಕಾರದ ಒಬ್ಬ ಹುಡುಗ ಮನೆಯ ಮುಂದುಗಡೆ ನಿಂತಿದ್ದ. ಧೈರ್ಯ ಮಾಡಿ ಅವನಲ್ಲಿ ಯಾರಪ್ಪ ನೀನು ನಮ್ಮ ಮನೆಯ ಮುಂದೆ ಏನು ಮಾಡುತ್ತಿರುತ್ತಿ ಕೇಳಿದಾಗ ಮೌನ ಅವನ ಉತ್ತರವಾಗಿತ್ತು. ಮತ್ತೆ ಸ್ವಲ್ಪ ದಬಾಯಿಸಿ ಕೇಳಿದೆ ಆ ಹುಡುಗ ಅಳಲು ಪ್ರಾರಂಭಿಸಿದ. ದೆವ್ವ ಎಂಬ ಹುಚ್ಚು ಪರಿಕಲ್ಪನೆ ಆಗಲೇ ನನ್ನ ಮನದಿಂದ ಇಳಿದು ಹೋಯಿತು. ಅವನನ್ನು ಸಮಾಧಾನಪಡಿಸಿದೆ. ನನ್ನ ಯಾವ ಪ್ರಶ್ನೆಗೂ ಅವ ನದು ಮೌನ ಉತ್ತರವಾಗಿತ್ತು.
ಅಷ್ಟರಲ್ಲಿ ಗೆಳೆಯ ರಕ್ಷಿತ್ ಮನೆಗೆ ಬಂದ ಅವನಲ್ಲಿ ನಡೆದ ವಿಚಾರವನ್ನ ತಿಳಿಸಿದೆ. ಅದಕ್ಕವನು ಅಯ್ಯೋ ಮಾರಾಯ ಮೂಗನಲ್ಲಿ ನೀನು ಮಾತಾಡು ಅಂದರೆ ಅವನೆಲ್ಲಿಂದ ಮತನಾಡುವುದು. ಅವನಿಗೆ ಮಾತೇ ಬರುವುದಿಲ್ಲ ಎಂದ. ಅವನು ಪಕ್ಕದ ಬೀದಿಯ ಹುಡುಗ, ಅವರಪ್ಪ ವಾಚ್‌ಮ್ಯಾನ್ ಎಂದಾಗ ನಾನು ಭಾವುಕನಾದೆ.
ಮಹಮ್ಮದ್ ಅಲ್ಪಾಜ್, ಕಾರ್ಕಳ