Advertisement

ಮೌನವೆಂಬ ಸಂಗಾತಿ

08:02 PM Dec 29, 2019 | mahesh |

ಮುಸ್ಸಂಜೆಯ ತಣ್ಣನೆಯ ಗಾಳಿ ಬೀಸುತ್ತಲೇ ಏಕಾಂತದ ಸವಿ ಇನ್ನಷ್ಟು ಹತ್ತಿರವಾಯಿತು. ಮನಸ್ಸನ್ನು ಮುದಗೊಡುವ ವಾತಾವರಣ ಹುದುಗಿಟ್ಟ ಸಾವಿರಾರು ಆಲೋಚನೆಗಳನ್ನು ಬದಿಗೆ ಸರಿಸಿ ನಿಸ್ಸಂದೇಹವಾಗಿ ಮೌನದ ಕಣಿವೆಯತ್ತ ನನ್ನ ಪಯಣ ಸಾಗಿತ್ತು. ಆ ಮೂಕವಿಸ್ಮಿತ ಕ್ಷಣಗಳು ಮೌನವನ್ನು ಇನ್ನಷ್ಟು ಅರ್ಥಮಾಡಿಕೊಳ್ಳಲು ಒಂದು ಉತ್ತಮ ಅವಕಾಶ ಒದಗಿಸಿದೆ ಎಂದರೆ ತಪ್ಪಾಗಲಾರದು. ಮೌನದ ಕುರಿತು ಒಬ್ಬೊಬ್ಬರು ಒಂದೊಂದು ದೃಷ್ಟಿಕೋನವನ್ನು ಹೊಂದಿದ್ದಾರೆ. ರೂಮಿನಲ್ಲಿ ಏಕಾಂತವಾಗಿ ಕೂತಾಗ ಮೌನವಹಿಸಿದ್ದೇವೆ ಎಂದರ್ಥವಲ್ಲ. ಅದೇ ಏಕಾಂತ ನಮ್ಮನ್ನು ಸಾವಿರ ಯೋಚನೆಗಳಿಗೆ ಎಡೆಮಾಡುತ್ತದೆ. ತಲೆ ಕೆಟ್ಟು ಬೇಡದ ಯೋಚನೆಗಳು ನಮ್ಮತ್ತ ಸುಳಿಯುವ ಸಾಧ್ಯತೆಯೂ ಇರುತ್ತದೆ. ವಿದೇಶದಲ್ಲಿ ಕಠಿನ ಶಿಕ್ಷೆಗಳ ಪೈಕಿ ಈ ಏಕಾಂತ ಶಿಕ್ಷೆಯೂ ಒಂದು. ಆದರೆ ಮೌನದಲ್ಲಿ ಇಂತಹ ಅನುಭವಗಳು ಇರಲಾರದು. ಮೌನದಿಂದ ಕೆಟ್ಟದು ಆಗುತ್ತದೆ, ಮಾನಸಿಕ ಖನ್ನತೆ ಏರ್ಪಡುತ್ತದೆ ಎಂಬ ಚಿಂತೆಗೆ ಹೋಗದಿರಿ. ಕವಿ, ಸಾಹಿತಿ, ಲೇಖಕರಿಗೆ ಮೌನ ಎಷ್ಟೋ ಸಂದರ್ಭದಲ್ಲಿ ಪ್ರೇರಣೆಯಾಗಿ ಸುಂದರ ಬರವಣಿಗೆ ಮೂಡಿಬರಲು ಕಾರಣವಾಗಿದೆ.

Advertisement

ಪ್ರಕೃತಿಯ ಒಡನಾಟಕ್ಕೆ ಮೌನವು ನಿಮ್ಮ ಸಂಗಾತಿ
ಒಬ್ಬಂಟಿಯಾಗಿ ಪ್ರೇಕ್ಷಣೀಯ ಸ್ಥಳಕ್ಕೆ ಹೋಗುವುದೆಂದರೆ ಕೆಲವರಿಗೆ ಅದೇನೊ ಖುಷಿ. ಈ ಖುಷಿಯು ಸ್ನೇಹಿತರೊಂದಿಗೆ ಹೋದ ಅನುಭವಕ್ಕಿಂತ ವಿಭಿನ್ನ. ಗೆಳೆಯರ ಜತೆ ಹೋದಾಗ ಹಾಡು, ಹರಟೆ, ಸೆಲ್ಫಿ ಮುಂತಾದ ಮನೋರಂಜನೆಗೆ ಪ್ರಾಮುಖ್ಯ ದೊರೆತರೆ ಒಬ್ಬಂಟಿಯಾಗಿದ್ದಾಗ ಪ್ರಕೃತಿಯ ಸೊಬಗನ್ನು ಇನ್ನಷ್ಟು ಸವಿಯಲು ಸಾಧ್ಯವಾಗುತ್ತದೆ. ಇಬ್ಬನಿಯಿಂದ ಕಂಗೊಳಿಸುವ ಪುಷ್ಪ, ತಣ್ಣನೆಯ ಗಾಳಿ ಹೊತ್ತು ತಂದ ಆ ಹೊಸತನವು ಉಲ್ಲಾಸ ತುಂಬುತ್ತದೆ. ಅದೇ ಸಂದರ್ಭದಲ್ಲಿ ನಿಮ್ಮ ಕೈಗೊಂದು ಲೇಖನಿ ಕೊಟ್ಟರೆ ಸ್ಥಳದಲ್ಲಿಯೇ ಸುಂದರ ಕವಿತೆಯ ರಚನಕಾರರಾಗಿಬಿಡುತ್ತೀರಿ.

ಮನಸ್ಸಿನ ನೆಮ್ಮದಿ ಅರಸುವವರ ನೆಚ್ಚಿನ ಸ್ನೇಹಿತ ಮೌನ
ಜೀವನದ ಜಂಜಾಟದಲ್ಲಿ ಸಿಲುಕಿ ನಲುಗಿ ಹೋದ ಅದೇಷ್ಟೋ ಮಂದಿಗೆ ಒಮ್ಮೆಯಾದರೂ ಮೌನ ವಹಿಸಿ ಕ್ಷಣ ಕಾಲವಾದರೂ ನೆಮ್ಮದಿಯಿಂದಿರಬೇಕು ಎನ್ನುವ ಆಸೆ ಇರುತ್ತದೆ. ಬಹುತೇಕರು ಬ್ಯುಸಿ ಲೈಫ್ನಲ್ಲಿ ಈ ಆಸೆಯನ್ನು ಕಾಯ್ದಿರಿಸಿ ಮುಪ್ಪಿನ ಅವಧಿಯಲ್ಲಿ ನೆರವೇರಿಸಲು ಮುಂದಾಗುತ್ತೀರಿ. ಆದರೆ ನಾವೆಷ್ಟೇ ಬ್ಯುಸಿ ಇದ್ದರೂ ಕನಿಷ್ಠ ಪಕ್ಷ ಮಲಗುವ ಮುನ್ನ ಟಿವಿ, ಮೊಬೈಲ್‌ ಮುಂತಾದ ತಂತ್ರಜ್ಞಾನಗಳಿಂದ ಹೊರಬಂದು ಅರ್ಧ ಗಂಟೆಯಾದರೂ ಮೌನದಿಂದ ಕುಳಿತು ಧ್ಯಾನಿಸಿದರೆ ಸುಖ ನಿದ್ದೆ ನಿಮ್ಮದಾಗುವುದರೊಂದಿಗೆ ಮರುದಿನದ ಕೆಲಸಕ್ಕೂ ಹೊಸ ಲವಲವಿಕೆ ಮೂಡುತ್ತದೆ.

ಮೌನವು ತನ್ನಿಚ್ಛೆಯಿದ್ದಂತೆ
ಬಹುತೇಕರು ಕೋಪದಲ್ಲಿ ಮೌನವಹಿಸಿ ಕೆಟ್ಟ ಆಲೋಚನೆಗಳ ಸುಳಿಯಲ್ಲಿ ಸಿಲುಕುತ್ತಾರೆ. ಕೋಪದಲ್ಲಿ ನೀವು ಮೌನವಹಿಸಿದರೆ ಸಂದರ್ಭ, ಸನ್ನಿವೇಶಗಳನ್ನು ಅರ್ಥೈಸಿಕೊಂಡಿದ್ದಿರಿ ಎಂದೇ ಲೆಕ್ಕ. ಕೋಪ ಬಂದಾಗ ಮೌನದಲ್ಲಿ ನಿಮ್ಮ ನೆಚ್ಚಿನ ಹಾಡನ್ನು ಕೇಳಿ ಆಸ್ವಾದಿಸಿದರೆ ನೆಮ್ಮದಿ ದೊರೆಯುತ್ತದಂತೆ.

- ರಾಧಿಕಾ ಕುಂದಾಪುರ

Advertisement
Advertisement

Udayavani is now on Telegram. Click here to join our channel and stay updated with the latest news.

Next