ಮಾನವ ಜೀವನದಲ್ಲಿ ಮಾತುಗಳಿಗಿಂತ ಮೌನವೇ ಹೆಚ್ಚು ಅರ್ಥವನ್ನು ಕೊಡುತ್ತದೆ. ನೂರು ಮಾತಿಗಿಂತ ಒಂದು ಮೌನವೇ ಭಾವವನ್ನು ವ್ಯಕ್ತಪಡಿಸುತ್ತದೆ.
ಅದೊಂದು ದಿನ ಒಬ್ಬ ವ್ಯಕ್ತಿ ಏನೋ ಒಂದನ್ನು ಕಳೆದುಕೊಂಡ ಕೊರತೆಯಿಂದ ಇರುತ್ತಾನೆ. ಎಲ್ಲಿ ಹೋದರೂ ಯಾವ ಯೋಜನೆ ಹಾಕಿಕೊಂಡರೂ, ಅಲ್ಲಿ ಆ ವ್ಯಕ್ತಿಗೆ ಕೊರತೆಯನ್ನು ಅನುಭವಿಸುತ್ತಿರುವ ಯೋಚನೆಯೇ ಅಡ್ಡಲಾಗಿ ಕಾಡುತ್ತದೆ. ದೈಹಿಕವಾಗಿ ಪುಷ್ಟಿಯಾಗಿದ್ದರೂ ಮಾನಸಿಕವಾಗಿ ಕುಗ್ಗಿದ ಭಾವ ಆ ವ್ಯಕ್ತಿಯ ದಿನಚರಿಯಲ್ಲಿ ಎಲ್ಲವೂ ನಿರಾಶೆಯಾಗಿ, ನಿಧಾನವಾಗಿ ಸಾಗುವಂತೆ ಮಾಡುತ್ತದೆ. ಏನಾಯಿತು, ಹೇಗಾಯಿತು, ಎನ್ನುವ ಮಾತಿಗೂ ಆ ವ್ಯಕ್ತಿಯ ಮೂಲಕ ಬರುವುದು ಮೌನ ತುಂಬಿದ ಒಂದು ದೀರ್ಘ ಉಸಿರು ಮಾತ್ರ.
ಕೆಲ ಕ್ಷಣಗಳಲ್ಲಿ ಆ ವ್ಯಕ್ತಿ ಯೋಚನಾ ಲಹರಿಯನ್ನು ಬದಲಾಯಿಸಿಕೊಂಡು ಎಲ್ಲವೂ ಸರಿಯಾಗುತ್ತದೆ ಎನ್ನುವ ಭರವಸೆಯೊಂದಿಗೆ, ಎಲ್ಲರೊಂದಿಗೆ ಬೆರೆಯುವ, ನುಡಿಯುವ ಹಾಗೂ ಮೌನ ಮರೆಮಾಚಿ ನಗುವ ಪ್ರಯತ್ನವನ್ನು ಮಾಡುತ್ತಾನೆ. ಇದು ಪ್ರತಿಯೊಬ್ಬರಲ್ಲಿ ಸಾಗುವ ಒಂದು ಸಹಜ ಪ್ರಕ್ರಿಯೆ. ಇದಕ್ಕೆ ಕಾರಣ ನಮ್ಮ ನಗುವನ್ನು ಕೇಳುವ ಕಿವಿಗಳು, ನೋವನ್ನು ಕೇಳದೇ ದೂರ ಹೋಗುವುದು. ಎಷ್ಟೇ ಹೇಳಿದರೂ ಮಾನವ ನಕ್ಕಾಗ ಜಂಟಿ ಅತ್ತಾಗ ಒಂಟಿ ಎನ್ನುವ ವಾಸ್ತವದ ಮಾತನ್ನು ನಾವು ಅನುಭವದ ಗೆರೆಯನ್ನು ದಾಟಿಕೊಂಡೇ ಅರ್ಥ ಮಾಡಿಕೊಳ್ಳಬೇಕು.
ಕೆಲವೊಂದು ಬಂಧಗಳು ಹಾಗೆಯೇ. ನೋಟಗಳಿಂದ ಆರಂಭವಾಗುವ ಬಾಂಧವ್ಯ, ನಗು ನಲಿವಿನೊಂದಿಗೆ ವಿಲೀನವಾಗಿ ಕೊನೆಗೆ ಅಲ್ಲೊಂದಿಷ್ಟು ಚರ್ಚೆ, ತಾತ್ಕಾಲಿಕ ಕೋಪ, ನೀರು, ಅನ್ನದ ಮೇಲಿನ ಮುನಿಸು, ಸಾವಿನ ಬಗ್ಗೆ ಪ್ರಾರಂಭಿಕ ಚಿಂತೆ, ಮೋಸ ಹೋಗುತ್ತೇನೆ ಎನ್ನುವುದರ ಭಯ, ನಿನ್ನೆಯ ಸಂತೆ, ನಾಳಿನ ಚಿಂತೆ ಎಲ್ಲವೂ ಆಗಾಗ ನಿದ್ದೆಯಲ್ಲೂ ಪೀಡಿಸುವ ಮಾನಸಿಕ ಜಿಜ್ಞಾಸೆಗಳಾಗುತ್ತವೆ. ನೋಟಗಳಿಂದ ಆರಂಭವಾಗುವ ಪ್ರೀತಿ, ಜೀವನದ ಪಾಠವನ್ನು ಕಲಿಸುತ್ತದೆ. ನಡುವೆ ಬರುವ ಸಾವಿನ ಯೋಚನೆ, ಊಟ, ನಿದ್ದೆ ಬಿಟ್ಟು ಬಿಡುವ ನಿರ್ಣಯ ಎಲ್ಲವೂ ತಾತ್ಕಾಲಿಕ ಎನ್ನುವ ಸತ್ಯಾಂಶವನ್ನು ನಾವಾಗಿಯೇ ತಿಳಿದುಕೊಳ್ಳಬೇಕು. ಎಷ್ಟು ವಿರ್ಪಯಾಸ ಅಂದರೆ ನೋವು, ನಲುವಿಗೂ ಅನುಭವದ ಆಧಾರ ಕೇಳುವ ಕಾಲವಿದು.
ಬದುಕು ಬದಲಿಸಬಹುದು. ಹೌದು ಬದಲಾಯಿಸಬಹುದು, ಬದಲಾಗುವ ಮನಸ್ಸು ಇದ್ದರೆ, ಬದಲಾಗಿ ಕನಸು ಕಾಣುವ ಉಮೇದು ಇದ್ದರೆ ಬದುಕು ಬದಲಾಯಿಸಬಹುದು. ಬದುಕಿನ ಆಯ್ಕೆಗಳು ನಮ್ಮ ಕೈಯಲ್ಲಿವೆ ನಿಜ. ಆದರೆ ಆ ಕೈಯನ್ನು ಇನ್ನೊಬ್ಬರು ಹಿಡಿದು ಮುನ್ನೆಡೆಸಬೇಕು. ಅವರ ನೆರಳಿನ ಹಿಂದೆ ನಮ್ಮ ಹೆಜ್ಜೆಯನ್ನಿಡಬೇಕು ಎನ್ನುವ ಯೋಚನೆಯಿಂದ ಮುಕ್ತಿ ಪಡೆದು ಸಾಗುವುದು ಇದೆ ಅಲ್ವಾ ಅಲ್ಲಿ ನಮ್ಮ ಬದುಕಿದೆ. ಜೀವನ ಎಷ್ಟೇ ಹೇಳಿದರೂ ಭಾವನೆಗಳ ಬದನೇಕಾಯಿ. ತಮಾಷೆಯ ವಾಕ್ಯವಾದರೂ ಇದರ ಹಿಂದಿರುವ ತಣ್ತೀ ಬದುಕಿನ ಕೈಗನ್ನಡಿ.
-ಸುಹಾನ್ ಶೇಕ್