Advertisement

ರಾಯಚೂರು ತೆಲಂಗಾಣಕ್ಕೆ ಹೇಳಿಕೆಗೆ ಮೌನ ಸರಿಯಲ್ಲ

02:47 PM Aug 25, 2022 | Team Udayavani |

ಕಲಬುರಗಿ: ರಾಯಚೂರು ಜಿಲ್ಲೆ ಬೇಕೆಂದು ತೆಲಂಗಾಣ ರಾಜ್ಯದ ಮುಖ್ಯಮಂತ್ರಿಗಳೇ ಸಾರ್ವಜನಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿ ದರೂ, ಕರ್ನಾಟಕ ಸರಕಾರ ಮತ್ತು ಜನಪ್ರತಿನಿಧಿಗಳು ಮೌನವಾಗಿರುವುದು ನಿಜಕ್ಕೂ ಕಳವಳಕಾರಿ ಸಂಗತಿ ಎಂದು ಪತ್ರಕರ್ತ ಹಾಗೂ ಗುರುಪಾದೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ವಾದಿರಾಜ ವ್ಯಾಸಮುದ್ರ ಹೇಳಿದರು.

Advertisement

ನಗರದ ರಮಾಬಾಯಿ ಜಾಗೀರದಾರ್‌ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್‌ ದಕ್ಷಿಣ ವಲಯದ ಕಾರ್ಯಚಟುವಟಿಕೆಗಳ ಉದ್ಘಾಟನೆ, ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ರಾಯಚೂರು ಯಾವತ್ತೂ ಕನ್ನಡ ನಾಡಿನ ಅವಿಭಾಜ್ಯ ಅಂಗವಾಗಿದೆ. ಪ್ರತಿಯೊಬ್ಬ ಕನ್ನಡಿಗನೂ ತೆಲಂಗಾಣ ಮುಖ್ಯಮಂತ್ರಿಗಳ ಹೇಳಿಕೆಯನ್ನು ವಿರೋಧಿಸುವ ಮೂಲಕ ತಕ್ಕ ಉತ್ತರ ನೀಡಬೇಕು. ರಾಜ್ಯ ಸರ್ಕಾರವೂ ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ಕನ್ನಡಸಾಹಿತ್ಯ ಪರಿಷತ್‌ ಈ ಕುರಿತು ಹೋರಾಟ ಹಮ್ಮಿಕೊಳ್ಳುವ ಮೂಲಕ ಪ್ರಬಲವಾಗಿ ವಿರೋಧ ವ್ಯಕ್ತಪಡಿಸಲಿ ಎಂದು ಸಲಹೆ ನೀಡಿ, ನೂತನ ಪದಾಧಿಕಾರಿಗಳಿಗೆ ಶುಭ ಕೋರಿದರು.

ಎಲುಬು ಮತ್ತು ಕೀಲು ವೈದ್ಯರಾದ ಡಾ|ಅಲೋಕ ಪಾಟೀಲ ರೇವೂರ ಮಾತನಾಡಿ, ಕನ್ನಡ ಉಳಿಸುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ. ಎಲ್ಲರೂ ಮನೆಯಲ್ಲಿ ಕನ್ನಡ ಮಾತನಾಡಬೇಕು ಎಂದು ಕರೆ ನೀಡಿದರು.

ಎಸ್‌.ಡಿ.ಆರ್‌.ಎಫ್‌ನ ಡೆಪ್ಯೂಟಿ ಕಮಾಂಡೆಂಟ್‌ ಗುರುನಾಥ ಮಡಿವಾಳ ಮಾತನಾಡಿ, ಕನ್ನಡ ಭಾಷೆ ಉಳಿಸಿಕೊಳ್ಳಲು ಹೋರಾಟ ಮಾಡುವ ಕಾಲ ಬಂದಿರುವುದು ದುರಂತವೇ ಸರಿ. ಅನ್ಯ ಭಾಷೆಗಳ ಪ್ರಭಾವಕ್ಕೊಳಗಾಗಿ ಕನ್ನಡ ಭಾಷೆ ಅವನತಿಯತ್ತ ಸಾಗುತ್ತಿದೆ. ಕನ್ನಡಿಗರಾದ ನಾವೆಲ್ಲರೂ ಕನ್ನಡ ಉಳಿಸಿ ಬೆಳೆಸುವ ಮೂಲಕ ಕನ್ನಡತನದ ಬೀಜವನ್ನು ಬಿತ್ತುವ ಕೆಲಸ ಮಾಡೋಣ ಎಂದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿದರು.

Advertisement

ರಮಾಬಾಯಿ ಜಾಗಿರದಾರ ಪದವಿ ಪೂರ್ವ ವಿಜ್ಞಾನ ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಹಾಗೂ ಪ್ರಾಚಾರ್ಯ ಡಾ|ಪ್ರಹ್ಲಾದ ಬುರ್ಲಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ದಕ್ಷಿಣ ವಲಯದ ಅಧ್ಯಕ್ಷ ಶಾಮಸುಂದರ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತಾಡಿದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ವಿಪ್ರಸಮಾಜದ ಮುಖಂಡ ರವಿಲಾತೂರಕರ್‌, ಚರಣರಾಜ ಚಪ್ಪರಬಂದಿ, ಬಾಬುರಾವ್‌ ಹಾಗರಗುಂಡಗಿ, ಮಾಜಿ ಸೈನಿಕ ಮಲ್ಲಣ್ಣ ಮಡಿವಾಳ, ರಾಜೇಂದ್ರ, ಕಸಾಪ ದಕ್ಷಿಣ ವಲಯದ ಗೌರವ ಕಾರ್ಯದರ್ಶಿಗಳಾದ ಧನೇಶ ಮಾಲಗತ್ತಿ, ರವಿಕುಮಾರ ಶಹಾಪುರಕರ, ಮಹಿಳಾ ಪ್ರತಿನಿಧಿ ಜ್ಯೋತ್ಸನಾ ಹೇರೂರ, ಸಂಘಟನಾ ಕಾರ್ಯದರ್ಶಿಗಳಾದ ಮಲ್ಲಿನಾಥ ಸಂಘಶೆಟ್ಟಿ, ಶಿವಯ್ಯ ಮಠಪತಿ, ಸಹ ಕಾರ್ಯದರ್ಶಿ ಶಿವಕುಮಾರ ಸಿ.ಎಚ್‌ ಹಾಗೂ ವಿದ್ಯಾರ್ಥಿಗಳು ಇದ್ದರು.

ವಿದ್ಯಾರ್ಥಿ ಶ್ರೀಕಾಂತ ಅಗ್ನಿಹೋತ್ರಿ ಪ್ರಾರ್ಥಿಸಿದರು. ರವಿಕುಮಾರ ಶಹಾಪುರಕರ ಸ್ವಾಗತಿಸಿದರು. ಕಸಾಪ ದಕ್ಷಿಣ ವಲಯದ ಮಹಿಳಾ ಪ್ರತಿನಿಧಿ ಜ್ಯೋತ್ಸನಾ ರಾಜೇಂದ್ರ ಹೇರೂರ ನಿರೂಪಿಸಿದರು. ಕನ್ನಡ ಉಪನ್ಯಾಸಕ ಮಳೇಂದ್ರ ಹಿರೇಮಠ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next