ಹುಬ್ಬಳ್ಳಿ: ಸಚಿವ ಸಿ.ಎಸ್. ಶಿವಳ್ಳಿ ಅವರ ನಿಧನದಿಂದಾಗಿ ಸ್ವಗ್ರಾಮ ಯರಗುಪ್ಪಿ ಸೇರಿದಂತೆ ಕುಂದಗೋಳ ಕ್ಷೇತ್ರವೇ ಶೋಕಲ್ಲಿ ಮುಳುಗಿದೆ. ಮೂರು ತಿಂಗಳ ಹಿಂದೆಯಷ್ಟೇ ಸಚಿವ ಸ್ಥಾನ ಅಲಂಕರಿಸಿದ್ದ ಪ್ರಭಾವಿ ನಾಯಕ ಚನ್ನಬಸಪ್ಪ ಸತ್ಯಪ್ಪ ಶಿವಳ್ಳಿ ನಿಧನದಿಂದ ಸ್ವಗ್ರಾಮ ಯರಗುಪ್ಪಿಯಲ್ಲಿ ನೀರವ ಮೌನ ಆವರಿಸಿದೆ. ಎಲ್ಲಿ ನೋಡಿದರೂ ಶಿವಳ್ಳಿ ಅವರ ಕುರಿತಾದ ಮಾತುಗಳೇ ಕೆಳಿಬರುತ್ತಿವೆ. ಕಿರಿಯರಿಂದ ಹಿಡಿದು ಹಿರಿಯರ ವರೆಗೆ ಒಂದೇ ಮಾತು, ಶಿವಳ್ಳಿ ಒಳ್ಳೆಯವರು ಎಂಬುದಾಗಿತ್ತು.
ಚುರುಮುರಿ ಪ್ರಿಯ: ಸಚಿವ ಸಿ.ಎಸ್. ಶಿವಳ್ಳಿ ಅವರಿಗೆ ಚುರುಮುರಿ ಖಾರ ಎಂದರೆ ತುಂಬಾ ಇಷ್ಟ. ಅವರಿಗೆ ಯಾರಾದರೂ ಭೇಟಿಯಾದರೆ ಸಾಕು ಅವರೊಂದಿಗೆ ಚುರಮುರಿ ಖಾರ ಸವಿಯುತ್ತಿದ್ದರು ಎಂದು ಶಿವಳ್ಳಿ ಅವರ ಒಡನಾಡಿ ಚನ್ನಪ್ಪ ಶಿವಪ್ಪ ಶಲವಡಿ ಹೇಳುತ್ತಾರೆ.
ಕೈ ಮಾಡಿದಲ್ಲಿ ನಿಲ್ಲುತ್ತಿದ್ದರು: ಸದಾ ಜನರೊಂದಿಗೆ ಬೆರೆಯುತ್ತಿದ್ದ ಶಿವಳ್ಳಿ ಅವರು ಕ್ಷೇತ್ರದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಎಲ್ಲಿಗಾದರೂ ಹೊರಟಾಗ ಯಾರಾದರೂ ಭೇಟಿಯಾದರೆ ನಿಂತು ಮಾತನಾಡಿಸಿ ಹೋಗುತ್ತಿದ್ದರು. ಒಂದು ಬಾರಿ ಹೊಲದಲ್ಲಿ ಹತ್ತಿ ಕಟ್ಟಿಗೆ ಆರಿಸುತ್ತಿದ್ದ ರೈತರು ಶಿವಳ್ಳಿ ಅವರ ವಾಹನ ನೋಡಿ ದೂರದಿಂದಲೇ ಕೈ ಮಾಡಿದ್ದಾರೆ. ಅದನ್ನು ಗಮನಿಸಿದ ಶಿವಳ್ಳಿ ಅವರು ತಮ್ಮ ವಾಹನ ನಿಲ್ಲಿಸಿ ಹೊಲದಲ್ಲಿದ್ದವರ ಯೋಗಕ್ಷೇಮ ವಿಚಾರಿಸಿ ನಂತರ ಪ್ರಯಾಣ ಬೆಳೆಸಿದ್ದರು ಎಂದು ಚಿಕ್ಕನೇರ್ತಿ ಗ್ರಾಮದ ನಿವಾಸಿ ಬಸವಣೆಪ್ಪ ಮಾಯಣ್ಣವರ ದುಃ ಖದಿಂದ ಸ್ಮರಿಸಿಕೊಳ್ಳುತ್ತಾರೆ.
ಚಪ್ಪಲಿ ನನ್ನ ಆಸ್ತಿ: ತಮ್ಮನ್ನು ಭೇಟಿಯಾಗಲು ಬಂದವರಿಗೆಲ್ಲಾ ವಿಧಾನಸೌಧದ ಹೊರಗಡೆ ಇರುವ ಚಪ್ಪಲಿ ನನ್ನ ಆಸ್ತಿ ಎಂದು ಹೆಮ್ಮೆಯಿಂದ ಹೇಳುತ್ತಿದ್ದರು. ಇನ್ನು ಮಹಿಳೆಯರನ್ನು ಅಪಾರ ಗೌರವದಿಂದ ಕಾಣುತ್ತಿದ್ದರು. ಅವರನ್ನು ಭೇಟಿಯಾದ ಮಹಿಳೆಯರು ಆಡುಭಾಷೆಯಂತೆ ಯಪ್ಪಾ ಹೇಗಿದಿಯಾ ಎಂದು ಮಾತು ಆರಂಭಿಸಿದರೆ, ನನ್ನ ಹಡದವ್ವ ನೀನು ನನಗೆ ಯಪ್ಪಾ ಎನ್ನುತ್ತೀಯೇ ಎಂದು ಹಿರಿಯರ ಕಾಲಿಗೆ ಎರಗುತ್ತಿದ್ದರು ಎಂದು ಯರಗುಪ್ಪಿ ಗ್ರಾಮದ ಪರಸಪ್ಪ ಬಿಳಿಎಲೆ ಹೇಳುತ್ತಾ ಗದ್ಗದಿತರಾದರು.
ಹಿಡಿದ ಕೆಲಸ ಬಿಡದ ಛಲಗಾರ: ಅಂದುಕೊಂಡ ಕೆಲಸ ಆಗುವವರೆಗೆ ಸರಿಯುತ್ತಿರಲಿಲ್ಲ ಶಿವಳ್ಳಿ. ಯಾವುದೇ ನಿರ್ಣಯ ತೆಗೆದುಕೊಂಡರೂ ಅಷ್ಟೆ, ಯಾವುದೇ ವಿಚಾರ ಬಂದರೂ ಅಷ್ಟೆ ಸ್ವಂತ ನಿರ್ಣಯ ತೆಗೆದುಕೊಳ್ಳುತ್ತಿದ್ದರು. ಕಳೆದ ಚುನಾವಣೆಯಲ್ಲಿ ಗೆಲವು ಸಾಧಿಸಿದ ನಂತರ ಇನ್ನಾರ ಜೊತೆಯೂ ವಿರೋಧ ಕಟ್ಟಿಕೊಳ್ಳುವುದಿಲ್ಲ. ಎಲ್ಲರೂ ನಮ್ಮವರೇ, ಎಲ್ಲರೂ ನನ್ನವರೇ ಎಂದು ಹೇಳಿದ್ದರು ಎಂದು ಶಿವಳ್ಳಿ ಅವರಿಂದ ಸದಾ ಬೀಗರೆ ಎಂದು ಕರೆಯಿಸಿಕೊಳ್ಳುತ್ತಿದ್ದ ಸೋಮಪ್ಪ ಚಳಪ್ಪನವರ ಹೇಳುತ್ತಾರೆ.
ಬಸವರಾಜ ಹೂಗಾರ