ಬ್ಯಾಡಗಿ: ವೀರಯೋಧ ಶಿವಲಿಂಗೇಶ ಪಾಟೀಲ ನಿಧನದ ಸುದ್ದಿ ಗುಂಡೇನಹಳ್ಳಿ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿದ್ದು, ಇದೀಗ ಸ್ಮಶಾನ ಮೌನ ಆವರಿಸಿದೆ.
ಯೋಧ ಶಿವಲಿಂಗೇಶ ಅವರ ಪಾರ್ಥೀವ ಶರೀರ ಸೋಮವಾರ ಗ್ರಾಮಕ್ಕೆ ಆಗಮಿಸಲಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.
ಪುಲ್ವಾಮ ಬಳಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆ ವೇಳೆ ಗಾಯಗೊಂಡಿದ್ದ ಯೋಧ ಶಿವಲಿಂಗೇಶ ಪಾಟೀಲ ಅವರನ್ನು ದೆಹಲಿ ಆರ್.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಶಿವಲಿಂಗೇಶ ಕೊನೆಯುಸಿರೆಳೆದಿದ್ದರು. ಗ್ರಾಮಸ್ಥರಿಗೆ ಶನಿವಾರ ಯೋಧನ ಸಾವಿನ ಸುದ್ದಿ ಅಸ್ಪಷ್ಟವಾಗಿ ತಿಳಿದಿತ್ತು. ಗ್ರಾಮಸ್ಥರಿಗೆ ರವಿವಾರ ಬೆಳಗ್ಗೆ ಮಾಧ್ಯಮಗಳ ಮೂಲಕ ಸಾವಿನ ಬಗ್ಗೆ ನಿಖರ ಮಾಹಿತಿ ದೊರಕಿದೆ.
ಗ್ರಾಮದಲ್ಲಿ ಶೋಕ: ಯೋಧ ಶಿವಲಿಂಗೇಶ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ರವಿವಾರ ಬೆಳಗ್ಗೆ ಯೋಧನ ಮನೆ ಮುಂಭಾಗ ಗ್ರಾಮಸ್ಥರು ಕಣ್ಣೀರಿಡುತ್ತಿದ್ದ ದೃಶ್ಯಗಳು ಕಂಡು ಬಂದವು. ಅತಿ ಚಿಕ್ಕವಯಸ್ಸಿನಲ್ಲೇ ದೇಶಕ್ಕಾಗಿ ಹೋರಾಡಿ ವೀರ ಮರಣ ಹೊಂದಿದ್ದು ಗ್ರಾಮಕ್ಕೆ ಹೆಮ್ಮೆಯ ಸಂಗತಿಯಾಗಿದೆ. ನಿವೃತ್ತ ಸೈನಿಕ ವೀರಭದ್ರಪ್ಪ ಪಾಟೀಲ ಅವರ ಪುತ್ರರಾಗಿರುವ ಶಿವಲಿಂಗೇಶ ದಿಟ್ಟ ಹೋರಾಟವನ್ನು ಇಡೀ ಗ್ರಾಮವೇ ಮುಕ್ತಕಂಠದಿಂದ ಶ್ಲಾಘಿಸುತ್ತಿದೆ. ಆದರೆ ಕುಟುಂಬಸ್ಥರಿಗೆ ಮಾತ್ರ ಶಿವಲಿಂಗೇಶ ಅವರ ಸಾವಿನ ಸುದ್ದಿ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಕಳೆದ 7 ವರ್ಷಗಳ ಹಿಂದಷ್ಟೇ ಸೇನೆಗೆ ಸೇರಿದ್ದ ಶಿವಲಿಂಗೇಶ ತನ್ನ ಪ್ರಾಥಮಿಕ ಶಿಕ್ಷಣ (1ರಿಂದ 7) ಮೋಟೆಬೆನ್ನೂರು ನವೋದಯ ವಿದ್ಯಾಸಂಸ್ಥೆಯಲ್ಲಿ ಪೂರ್ಣಗೊಳಿಸಿದ್ದು, ಪ್ರೌಢಶಿಕ್ಷಣವನ್ನು (8ರಿಂದ 10) ಹಾವೇರಿ ಗೆಳೆಯರ ಬಳಗೆ ಶಾಲೆ, ತಾಲೂಕಿನ ಶಿಡೇನೂರ ಅಂಬೇಡ್ಕರ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದಿದ್ದ. ಧಾರವಾಡದ ಕೆಸಿಡಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುವಾಗ ಸೇನೆಗೆ ಸೇರಿದ್ದ.
ತಂದೆಗೆ ತಕ್ಕ ಮಗ: ಶಿವಲಿಂಗೇಶ ತಂದೆಯೂ ಸೈನ್ಯದಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗಷ್ಟೇ ನಿವೃತ್ತರಾಗಿದ್ದರು. ತನ್ನಂತೆ ಮಗನೂ ಅದೇ ಸೈನಿಕ ವೃತ್ತಿಯಲ್ಲಿ ಇರಬೇಕೆಂಬ ಏಕೈಕ ಉದ್ದೇಶದಿಂದ ಆತನಿಗೆ ಅವಶ್ಯವಿರುವ ಎಲ್ಲ ತರಬೇತಿಗಳನ್ನು ವೀರಭದ್ರಪ್ಪ ಮಾಡಿಕೊಟ್ಟಿದ್ದರು. ಇನ್ನು ತಾಯಿ ನಾಗರತ್ನಾ (ಗೃಹಿಣಿ) ಸಹೋದರಿ ದೀಪಾ ಡಿಪ್ಲೊಮಾ ಮೂರನೇ ವರ್ಷದಲ್ಲಿ ಓದುತ್ತಿದ್ದಾಳೆ. ಸಹೋದರ ಶಿವಕುಮಾರ ಸ್ವಂತ ಬಾಡಿಗೆ ವಾಹನದಲ್ಲಿ ಚಾಲಕನಾಗಿ ಕೆಎಂಎಫ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾನೆ.
ಪಾರ್ಥಿವ ಶರೀರ ಸೋಮವಾರ ಗ್ರಾಮಕ್ಕೆ: ಸೋಮವಾರ (ಮೇ 27) ಶಿವಲಿಂಗೇಶ ಪಾರ್ಥಿವ ಶರೀರ ಹುಟ್ಟೂರಾದ ಗುಂಡೇನಹಳ್ಳಿಗೆ ಆಗಮಿಸಲಿದೆ. ದೆಹಲಿಯಿಂದ ಗೋವಾ, ಬೆಳಗಾವಿ, ಹಾವೇರಿ ಮಾರ್ಗವಾಗಿ ಗುಂಡೇನಹಳ್ಳಿಗೆ ಬರಲಿದ್ದು, ಗ್ರಾಮದ ಹನುಮಂತ ದೇವಸ್ಥಾನ ಬಳಿ ಸಕಲ ಸರ್ಕಾರಿ ಗೌರವ ಸಲ್ಲಿಸುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.