ಮಹಾಭಾರತದಲ್ಲಿ ಶಿಖಂಡಿ ಎಂಬ ಪಾತ್ರ ಬರುತ್ತದೆ. ಇದು ಅತಿಸಣ್ಣ ಪಾತ್ರ. ಈ ಪಾತ್ರದ ಬಗ್ಗೆ ಬಹಳ ಚರ್ಚೆಗಳೂ ಆಗಿರಲಿಕ್ಕಿಲ್ಲ. ಆದರೆ ಮಹಾಭಾರತ ಗೊತ್ತಿಲ್ಲದವರಿಗೂ ಈ ಹೆಸರು ಗೊತ್ತಿರುತ್ತದೆ. ಮಹಾಭಾರತವನ್ನು ಅಲ್ಲಿ ಇಲ್ಲಿ ಕೇಳಿದವರಿಗೆ, ಅಲ್ಪಸ್ವಲ್ಪ ತಿಳಿದವರಿಗೂ ಪಾತ್ರ ಪರಿಚಯವಂತೂ ಇರುತ್ತದೆ. ಭಾರತದಲ್ಲಿ ಈ ಹೆಸರನ್ನು ಸಮುದಾಯವೊಂದಕ್ಕೆ ಇಡಲಾಗಿದೆ. ಗಂಡಾಗಿ ಹುಟ್ಟಿ ಹೆಣ್ಣಿನಂತೆ ಅವಯವಗಳನ್ನು ಹೊಂದಿದ, ಹೆಣ್ಣಾಗಿ ಹುಟ್ಟಿ ಗಂಡಿನಂತೆ ಹಾವಭಾವ ಮಾಡುವ ವ್ಯಕ್ತಿಗಳನ್ನು ಈಗ ಶಿಖಂಡಿ ಎಂದೇ ಕರೆಯಲಾಗುತ್ತದೆ. ಹಾಗೇಕೆ ಕರೆಯಲಾಗುತ್ತದೆ? ಅದರ ಹಿಂದೊಂದು ರೋಚಕ ಕಥೆಯಿದೆ.
ಬೆಸ್ತರ ಹುಡುಗಿ ಸತ್ಯವತೀಯನ್ನು ಮದುವೆಯಾಗಿದ್ದ ಶಂತನುವಿಗೆ ಇಬ್ಬರು ಮಕ್ಕಳು ಹುಟ್ಟಿರುತ್ತಾರೆ. ಚಿತ್ರಾಂಗದ ಹಾಗೂ ವಿಚಿತ್ರವೀರ್ಯರ ಪೈಕಿ, ಚಿತ್ರಾಂಗದ ಅದೇ ಹೆಸರಿನ ಇನ್ನೊಬ್ಬ ಗಂಧರ್ವನೊಂದಿಗೆ ಯುದ್ಧ ಮಾಡಿ ಬಾಲ್ಯದಲ್ಲೇ ಸತ್ತುಹೋಗುತ್ತಾನೆ. ಆಮೇಲೆ ಪುಟ್ಟ ವಯಸ್ಸಿನ ವಿಚಿತ್ರವೀರ್ಯನಿಗೆ ಯುವರಾಜ ಪದವಿಕಟ್ಟಿ, ತಾನು ಆಡಳಿತದ ಉಸ್ತುವಾರಿಯನ್ನು ಭೀಷ್ಮ ಹೊತ್ತಿರುತ್ತಾನೆ. ಈ ವೇಳೆ ವಿಚಿತ್ರವೀರ್ಯನಿಗೆ ಮದುವೆ ಮಾಡುವ ಯೋಚನೆ ಭೀಷ್ಮನಿಗೆ ಬರುತ್ತದೆ. ಆಗ ಆಘಾತಕಾರಿ ಘಟನೆಯೊಂದು ಜರುಗುತ್ತದೆ. ಕುರು ಮನೆತನಕ್ಕೂ ಕಾಶೀರಾಜನ ಮನೆತನಕ್ಕೂ ಹಿಂದಿನಿಂದ ಒಂದು ಪದ್ಧತಿಯಿರುತ್ತದೆ.
ಕಾಶೀರಾಜನ ಪುತ್ರಿಯರನ್ನೇ ಕುರು ಮನೆತನಕ್ಕೆ ತಂದುಕೊಳ್ಳಲಾಗುತ್ತಿತ್ತು (ಭೀಷ್ಮನ ಆಡಳಿತ ನಡೆಯುತ್ತಿದ್ದ ಕಾಲದವರೆಗೆ). ಈ ಬಾರಿ ಭೀಷ್ಮ ಹೆಣ್ಣು ಕೇಳಲು ಇನ್ನೇನು ಹೊರಡಬೇಕು, ಆಗ ಕಾಶೀರಾಜ ತನ್ನ ಮೂವರು ಪುತ್ರಿಯರಿಗೆ ಸ್ವಯಂವರ ಏರ್ಪಡಿಸಿರುವುದು ಗೊತ್ತಾಗುತ್ತದೆ. ಪದ್ಧತಿಯನ್ನು ಮುರಿದಿರುವುದು ಮಾತ್ರವಲ್ಲ, ಸೌಜನ್ಯಕ್ಕೂ ಒಂದು ಮಾತು ತಿಳಿಸದೇ ಕಾಶೀರಾಜ ಸ್ವಯಂವರ ಏರ್ಪಡಿಸಿರುವುದು ಭೀಷ್ಮನಿಗೆ ನೋವುಂಟು ಮಾಡುತ್ತದೆ. ಅವನು ನೇರವಾಗಿ ಸ್ವಯಂವರಕ್ಕೆ ತೆರಳುತ್ತಾನೆ. ಯುದ್ಧ ಮಾಡಿ ಅಲ್ಲಿದ್ದ ರಾಜರನ್ನು ಸೋಲಿಸಿ, ಅಂಬೆ, ಅಂಬಿಕೆ, ಅಂಬಾಲಿಕೆಯರನ್ನು ಗೆದ್ದು ತರುತ್ತಾನೆ.
ಆ ಮೂವರನ್ನೂ ವಿಚಿತ್ರವೀರ್ಯನಿಗೆ ಮದುವೆ ಮಾಡಿಸಬೇಕೆನ್ನುವಾಗ ಒಂದು ತಕರಾರು ಶುರುವಾಗುತ್ತದೆ. ಅದು ಮಹಾಭಾರತ ಕಥೆಯ ಅತ್ಯಂತ ರೋಚಕ ಅಧ್ಯಾಯವೊಂದಕ್ಕೆ ಮುನ್ನುಡಿ ಬರೆಯುತ್ತದೆ. ಆ ಯುವತಿಯರಲ್ಲಿ ದೊಡ್ಡಾಕೆ ಅಂಬೆ, ತಾನು ಶಾಲ್ವರಾಜನನ್ನು ಪ್ರೀತಿಸುತ್ತಿದ್ದೇನೆ, ನೀನು ಒಂದು ಮಾತೂ ಕೇಳದೇ ನಮ್ಮನ್ನು ಕರೆದುತಂದುಬಿಟ್ಟೆ ಎಂದು ಭೀಷ್ಮನಿಗೆ ಹೇಳುತ್ತಾಳೆ. ವಿಚಿತ್ರವೀರ್ಯ ಕೂಡ, ಬೇರೊಬ್ಬನನ್ನು ಪ್ರೀತಿಸುತ್ತಿರುವ ವ್ಯಕ್ತಿಯನ್ನು ತಾನು ಹೇಗೆ ಮದುವೆಯಾಗಲಿ ಎಂದು ಹೇಳುತ್ತಾನೆ. ಸರಿ, ಭೀಷ್ಮ ಆಕೆಯನ್ನು ಗೌರವದಿಂದಲೇ ಶಾಲ್ವರಾಜನ ಬಳಿ ವಾಪಸ್ ಕಳುಹಿಸುತ್ತಾನೆ.
ಶಾಲ್ವರಾಜ ಮದುವೆಯಾಗಲು ನಿರಾಕರಿಸುತ್ತಾನೆ. ತನ್ನನ್ನು ಸೋಲಿಸಿ, ಭೀಷ್ಮ ನಿನ್ನನ್ನು ಕರೆದೊಯ್ದಿರುವುದರಿಂದ, ನಿನ್ನನ್ನು ಮದುವೆಯಾಗುವುದು ಕ್ಷತ್ರಿಯಧರ್ಮಕ್ಕೆ ವಿರುದ್ಧ ಎನ್ನುವುದು ಅವನ ವಾದ. ಇಲ್ಲಿಂದ ಅಂಬೆಯ ಘೋರದುರಂತದ ಬದುಕು ಶುರುವಾಗುತ್ತದೆ. ಇತ್ತಕಡೆ ವಾಪಸ್ ಬಂದು ಭೀಷ್ಮನಿಗೆ, ನನ್ನನ್ನು ಮದುವೆಯಾಗು ಎಂದು ಕೇಳಿಕೊಳ್ಳುತ್ತಾಳೆ. ತಾನು ಮದುವೆಯಾಗುವುದಿಲ್ಲ ಎಂಬ ಪ್ರತಿಜ್ಞೆ ಮಾಡಿದ್ದೇನೆ, ಅದನ್ನು ಮುರಿಯಲಿಕ್ಕೆ ಸಾಧ್ಯವೇ ಇಲ್ಲ ಎಂದು ಭೀಷ್ಮ ನಿರಾಕರಿಸುತ್ತಾನೆ. ಅಂಬೆ ಹೀಗೆ ಅಲ್ಲಿಂದಿಲ್ಲಿ, ಇಲ್ಲಿಂದಲ್ಲಿ ಸುತ್ತುತ್ತ 6 ವರ್ಷ ಕಳೆಯುತ್ತಾಳೆ. ಕಡೆಗೆ ತಪಸ್ಸು ಮಾಡಲು ಅರಣ್ಯಕ್ಕೆ ತೆರಳುತ್ತಾಳೆ.
ಅಲ್ಲಿನ ಋಷಿಗಳೂ ಸುಂದರಿಯಾದ ಆಕೆಯನ್ನು ತಮ್ಮೊಂದಿಗೆ ಇಟ್ಟುಕೊಳ್ಳಲು ಬಯಸುವುದಿಲ್ಲ. ಕಡೆಗೂ ಯಾವುದೋ ಕಾಡಿನಲ್ಲಿ ಆಕೆ ತೀವ್ರ ತಪಸ್ಸು ಮಾಡಿ ಶಿವನನ್ನು ಒಲಿಸಿಕೊಳ್ಳುತ್ತಾಳೆ. ಭೀಷ್ಮನನ್ನು ತಾನೇ ಕೊಲ್ಲಬೇಕೆಂಬ ವರವನ್ನು ಕೇಳಿಕೊಳ್ಳುತ್ತಾಳೆ. ಮುಂದಿನ ಜನ್ಮಕ್ಕೆ ನೀನೇ ಅವನನ್ನು ಕೊಲ್ಲುತ್ತೀಯ ಎಂದು ಶಿವ ಹೇಳುತ್ತಾನೆ. ಹಾಗೆ ದ್ರುಪದರಾಜನ ಪುತ್ರಿಯಾಗಿ ಹುಟ್ಟುವ ಅಂಬೆಗೆ ಶಿಖಂಡಿ ಎಂದು ಹೆಸರು ಇಡಲಾಗುತ್ತದೆ. ಗಂಧರ್ವನೊಬ್ಬನ ಕೃಪೆಯಿಂದ ಈಕೆ ಗಂಡಾಗಿ ಬದಲಾಗುತ್ತಾಳೆ. ಮೂಲಭೂತವಾಗಿ ಶಿಖಂಡಿ ಎಂಬ ಪದ ಶಿಖಂಡಿನ್ ಎಂಬುದರಿಂದ ಬಂದಿದೆ. ಹಾಗೆಂದರೆ ನವಿಲು!
* ನಿರೂಪ