Advertisement

Sikh ಕೆನಡಾಕ್ಕೆ ಸಿಕ್ಖ್ ವಲಸೆ ನೂರಾರು ವರ್ಷಗಳ ಇತಿಹಾಸ

11:57 PM Oct 02, 2023 | Team Udayavani |

ಖಲಿಸ್ಥಾನಿ ಉಗ್ರ ನಿಜ್ಜರ್‌ ಹತ್ಯೆ ಸಂಬಂಧ ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಹಾಳಾಗಿದೆ. ಕೆನಡಾದಲ್ಲಿರುವ ಕೆಲವು ಖಲಿಸ್ಥಾನಿ ಪರ ಸಿಕ್ಖ್ ರ ಆಗ್ರಹದಿಂದಲೇ ಅಲ್ಲಿನ ಸರಕಾರ ಭಾರತದ ಮೇಲೆ ಹತ್ಯೆಯ ಆರೋಪ ಮಾಡಿದೆ ಎಂಬುದೂ ಈಗ ಬಹಿರಂಗವಾಗಿದೆ. ಕೆನಡಾ ಪ್ರಧಾನಿ ಜಸ್ಟಿನ್‌ ಟ್ರಾಡೊ ಅಲ್ಲಿನ ಸಿಕ್ಖ್ರಿಗೆ ಹೆದರುತ್ತಿರುವುದೇಕೆ? ಹಾಗಾದರೆ ಅಲ್ಲಿ ಭಾರೀ ಪ್ರಮಾಣದ ಸಿಕ್ಖ್ ರ ನೆಲೆಸಿದ್ದು ಹೇಗೆ? ಇಲ್ಲಿದೆ ಮಾಹಿತಿ…

Advertisement

ಭಾರತ ಬಿಟ್ಟರೆ ಕೆನಡಾದಲ್ಲೇ ಹೆಚ್ಚು
2021ರ ಕೆನಡಾದ ಜನಗಣತಿಯಂತೆ 8 ಲಕ್ಷ ಸಿಕ್ಖ್ ರ ವಾಸಿಸುತ್ತಿದ್ದಾರೆ. ಅಂದರೆ ಅಲ್ಲಿನ ಜನಸಂಖ್ಯೆಯ ಶೇ.2.1ರಷ್ಟು ಮಂದಿ ಅಲ್ಲಿದ್ದಾರೆ. ಜತೆಗೆ ಅಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸಮುದಾಯ. ಒಂಟಾರಿಯೋ, ಬ್ರಿಟಿಷ್‌ ಕೊಲಂಬಿಯಾ ಮತ್ತು ಆಲೆºರ್ಟಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಕ್ಖ್ರು ವಾಸ ಮಾಡುತ್ತಿದ್ದಾರೆ. ನಗರಗಳ ಲೆಕ್ಕಾಚಾರದಲ್ಲಿ ಬ್ರಾಂಪ್ಟನ್‌ನಲ್ಲಿ 1.63 ಲಕ್ಷ, ಸರೆìಯಲ್ಲಿ 1.54 ಲಕ್ಷ, ಕಾಲ್ಗೆರಿಯಲ್ಲಿ 49 ಸಾವಿರ ಮತ್ತು ಎಡ್‌ಮೌಂಟನ್‌ನಲ್ಲಿ 41 ಸಾವಿರ ಮಂದಿ ಇದ್ದಾರೆ. ಅಷ್ಟೇ ಅಲ್ಲ, ಪಂಜಾಬ್‌ ಮತ್ತು ಚಂಡೀಗಢ ಬಿಟ್ಟರೆ, ಹೆಚ್ಚು ಮಂದಿ ಸಿಕ್ಖ್ ರ ಇರೋದು ಬ್ರಿಟಿಷ್‌ ಕೊಲಂಬಿಯಾದಲ್ಲಿ.

1897 ಸಿಕ್ಖ್ ರ ಮೊದಲಿಗೆ ಕೆನಡಾಗೆ ಕಾಲಿಟ್ಟ ವರ್ಷ. ಅದು ಕ್ವೀನ್‌ ವಿಕ್ಟೋರಿಯಾ ಅವರ ವಜ್ರಮಹೋತ್ಸವ ವರ್ಷವಾಗಿತ್ತು. ಕೇಸರ್‌ ಸಿಂಗ್‌ ಎಂಬ ಬ್ರಿಟಿಷ್‌ ಇಂಡಿಯನ್‌ ಆರ್ಮಿಯಲ್ಲಿದ್ದ ರೈಸಿಲ್ದಾರ್‌ ಮೇಜರ್‌ ಮೊದಲಿಗೆ ಕೆನಡಾದಲ್ಲಿ ವಾಸ ಮಾಡಲು ಶುರು ಮಾಡಿದ ಸಿಕ್ಖ್ ಸಮುದಾಯದ ವ್ಯಕ್ತಿ. ಇವರೂ ಸೇರಿದಂತೆ ಹಾಂಗ್‌ಕಾಂಗ್‌ ರೆಜಿಮೆಂಟ್‌ಗೆ ಸೇರಿದ ಸಿಕ್ಖ್ ಯೋಧರ ಗುಂಪೊಂದು ವ್ಯಾಂಕೋವರ್‌ಗೆ ತೆರಳಿತ್ತು. ಇದರಲ್ಲಿ ಜಪಾನ್‌ ಮತ್ತು ಚೀನದ ಯೋಧರೂ ಇದ್ದರು.

ಇದಾದ ಮೇಲೆ 1900ರ ಅನಂತರ ಕೆನಡಾಗೆ ಸಿಕ್ಖ್ ರ ವಲಸೆ ಶುರುವಾಯಿತು. ಬ್ರಿಟಿಷ್‌ ಕೊಲಂಬಿಯಾ ಮತ್ತು ಒಂಟಾರಿಯೋದಲ್ಲಿನ ವಿವಿಧ ಕಾರ್ಖಾನೆಗಳಲ್ಲಿ ಕೆಲಸಕ್ಕೆಂದು ಕಾರ್ಮಿಕರಾಗಿ ಸಿಕ್ಖ್ ರ ತೆರಳಿದರು. ಆಗ ಕೇವಲ 5000 ಮಂದಿ ಮಾತ್ರ ಕೆನಡಾಗೆ ತೆರಳಿದ್ದರು. ಇವರಲ್ಲಿ ಬಹುತೇಕರಿಗೆ ಕೆನಡಾದಲ್ಲಿ ಶಾಶ್ವತವಾಗಿ ವಾಸಿಸುವ ಇರಾದೆ ಇರಲಿಲ್ಲ. ಬದಲಾಗಿ ಅಲ್ಲಿ ದುಡಿದು ವಾಪಸ್‌ ತಮ್ಮ ಊರುಗಳಿಗೆ ಹಣ ಕಳುಹಿಸುವ ಸಂಬಂಧ ತೆರಳಿದ್ದರು. ಮೂರರಿಂದ ಐದು ವರ್ಷಗಳ ವರೆಗೆ ಮಾತ್ರ ಅಲ್ಲಿ ಇರುವ  ಉದ್ದೇಶ ಇರಿಸಿಕೊಂಡಿದ್ದರು ಎಂದು ಕೆಲವು ಪುಸ್ತಕಗಳಲ್ಲಿ ಪ್ರಸ್ತಾವಿತವಾಗಿದೆ.

ಸುಲಭದಲ್ಲಿ ಕೆಲಸ
ಆಗ ಕೆನಡಾಕ್ಕೆ ತೆರಳುತ್ತಿದ್ದ ಎಲ್ಲರಿಗೂ ಸುಲಭವಾಗಿ ಕೆಲಸ ಸಿಗುತ್ತಿತ್ತು. ಆರಂಭದಲ್ಲಿ ಎಲ್ಲವೂ ಸರಿಯಾಗಿಯೇ ನಡೆಯುತ್ತಿತ್ತು. ಆದರೆ ಸಿಕ್ಖ್ ರ ವಲಸೆ ಹೆಚ್ಚಾದಂತೆ ಜನಾಂಗೀಯ ಸಂಘರ್ಷಗಳು ಹೆಚ್ಚಾಗಲು ಶುರುವಾದವು. ಈ ಬೆಳವಣಿಗೆಗಳಿಂದಾಗಿ ಕೆನಡಾ ಸರಕಾರವು ವಲಸೆ ನೀತಿ ರೂಪಿಸಿ, ಕೆಲವೊಂದು ಕಠಿನ ನಿಯಮಗಳನ್ನು ಹಾಕಿತು. ಅಲ್ಲದೆ ಇಲ್ಲಿಗೆ ಬರುವಂಥ ವಲಸಿಗರು, ತಮ್ಮ ಬಳಿ ಕಡೇ ಪಕ್ಷ 200 ಡಾಲರ್‌ ಹಣ ಇರಿಸಿಕೊಂಡು ಬರಬೇಕು ಎಂಬ ನಿಯಮವನ್ನೂ ಮಾಡಿತು. ಹೀಗಾಗಿ ಸಿಕ್ಖ್ ರ ವಲಸೆ ನಿಧಾನಗತಿಯಲ್ಲಿ ಕಡಿಮೆಯಾಗುತ್ತಾ ಬಂದಿತು. ಅಂದರೆ 1908ರಲ್ಲಿ ವರ್ಷಕ್ಕೆ 2,500 ಮಂದಿ ಸಿಕ್ಖ್ ರ ವಲಸೆ ಹೋಗುತ್ತಿದ್ದರು. ಅನಂತರದ ವರ್ಷಗಳಲ್ಲಿ ಇದು ಕೆಲವೇ ನೂರುಗಳಿಗೆ ಇಳಿಯಿತು.

Advertisement

1914ರಲ್ಲಿ ಕೊಮಗಟ ಮಾರು ಹೆಸರಿನ ಘಟನೆಯೊಂದು ನಡೆಯಿತು. ಜಪಾನ್‌ ಮೂಲದ ಈ ಹಡಗು ವ್ಯಾಂಕೋವರ್‌ ಸಮುದ್ರ ತೀರಕ್ಕೆ ತೆರಳಿತ್ತು. ಇದರಲ್ಲಿ ಏಷ್ಯಾದ 376 ಪ್ರಯಾಣಿಕರು ಇದ್ದರು. ಇದರಲ್ಲಿ ಬಹುತೇಕರು ಸಿಕ್ಖ್  ಆಗಿದ್ದರು. ಇವರನ್ನು ತನ್ನ ನೆಲದೊಳಗೆ ಬಿಟ್ಟುಕೊಳ್ಳದ ಕೆನಡಾ ಸರಕಾರ, 2 ತಿಂಗಳುಗಳ ಕಾಲ ಜೈಲಿನಲ್ಲಿ ಇಟ್ಟು, ಬಳಿಕ ಅದೇ ಹಡಗಿನಲ್ಲಿ ವಾಪಸ್‌ ಕಳುಹಿಸಿತ್ತು. ಈ ಹಡಗು ಭಾರತಕ್ಕೆ ವಾಪಸ್‌ ಬಂದಾಗ ಬ್ರಿಟಿಷ್‌ ಆಡಳಿತ ಮತ್ತು ಪ್ರಯಾಣಿಕರ ಮಧ್ಯೆ ದೊಡ್ಡ ಸಂಘರ್ಷವೇ ಆಯಿತು. ಆಗ 22 ಮಂದಿ ಸಾವನ್ನಪ್ಪಿದ್ದರು.

2ನೇ ಮಹಾಯುದ್ಧದ ಬಳಿಕ ಮತ್ತೆ ಹೆಚ್ಚಳ
ಒಂದು ಹಂತದಲ್ಲಿ ಭಾರತದಿಂದ ಕೆನಡಾಕ್ಕೆ ವಲಸಿಗರ ಸಂಖ್ಯೆ ಕಡಿಮೆಯಾಗಿತ್ತು. ಆದರೆ 2ನೇ ಮಹಾಯುದ್ಧ ನಡೆದ ಬಳಿಕ ಜಗತ್ತಿನ ಬಹುತೇಕ ರಾಷ್ಟ್ರಗಳು ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ದವು. ಆಗ ಕೆನಡಾ ಕೂಡ ಆರ್ಥಿಕ ಸಂಕಷ್ಟದಿಂದ ಹೊರಬರಬೇಕಾಗಿತ್ತು. ಆರ್ಥಿಕ ಬೆಳವಣಿಗೆಗೆ ಆಗ ಜಾರಿಯಲ್ಲಿ ಇದ್ದ ವಲಸೆ ನೀತಿ ಅಡ್ಡಿಯಾಗಬಹುದು ಎಂದರಿತ ಅಲ್ಲಿನ ಸರಕಾರ, ಇದನ್ನು ಬದಲಾವಣೆ ಮಾಡಿ ಮತ್ತೆ ಸಿಕ್ಖ್ ರ ಗೆ ಮುಕ್ತ ಅವಕಾಶ ನೀಡಿತು. ಅಲ್ಲದೆ ತೃತೀಯ ಜಗತ್ತಿನ ದೇಶಗಳ ಕಾರ್ಮಿಕರನ್ನು ಕೆನಡಾ ತನ್ನತ್ತ ಕೈ ಬೀಸಿ ಕರೆಯಿತು. ಇದಾದ ಮೇಲೆ 1967ರಲ್ಲಿ ಕೆನಡಾ ಸರಕಾರ, ಕೌಶಲವಿದ್ದರೆ ಸಾಕು ಯಾರೂ ಬೇಕಾದರೂ ಕೆನಡಾಕ್ಕೆ ಬರಬಹುದು ಎಂಬ ನೀತಿಯನ್ನೂ ಜಾರಿ ಮಾಡಿತು.

ಸಿಕ್ಖ್ ರ ಮೇಲೆಕೆ  ಟ್ರಾಡೊಗೆ ಪ್ರೀತಿ?
ಇದು ಕೇವಲ ಈಗಿನ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರಾಡೊ ಅವರೊಬ್ಬರ ನೀತಿಯಲ್ಲ. ಇವರ ತಂದೆ ಟ್ರಾಡೊ ಕಾಲದಲ್ಲೂ ಭಾರತ ವಿರೋಧಿ ನೀತಿ ಅನುಸರಿಸಲಾಗಿತ್ತು. 1980ರ ದಶಕದಲ್ಲಿ ಖಲಿಸ್ಥಾನಿ ಆಂದೋಲನ ಹೆಚ್ಚಾಗಿದ್ದು, ಖಲಿಸ್ಥಾನಿ ಬೆಂಬಲಿಗರು ಹೆಚ್ಚಾಗಿ ಕೆನಡಾದಲ್ಲೇ ಇದ್ದು, ಭಾರತ ವಿರೋಧಿ ಚಟುವಟಿಕೆ ಕೈಗೆತ್ತಿಕೊಳ್ಳುತ್ತಿದ್ದರು. ಆಗ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರು, ಟ್ರಾಡೊ ಅವರಿಗೆ ಈ ಬಗ್ಗೆ ದೂರನ್ನೂ ನೀಡಿದ್ದರು. ನಿಮ್ಮ ನೆಲದಲ್ಲಿ ಇಂಥ ದೇಶ ವಿರೋಧಿ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಬೇಡಿ. ನಿಲ್ಲಿಸಿ ಎಂದಿದ್ದರು. ಆದರೆ ಟ್ರಾಡೊ ಕೇಳಿರಲಿಲ್ಲ. ಇದಾದ ಬಳಿಕ ಆಪರೇಶ‌ನ್‌ ಬ್ಲೂಸ್ಟಾರ್‌ ಆಗಿ, ಖಲಿಸ್ಥಾನ ಆಂದೋಲನವನ್ನು ಮಟ್ಟ ಹಾಕಲಾಗಿತ್ತು. ಆಗ ಕೆಲವು ಖಲಿಸ್ಥಾನಿಗಳು ತಪ್ಪಿಸಿಕೊಂಡು ಹೋಗಿ ಈಗ ಕೆನಡಾದಲ್ಲಿ ವಾಸಿಸುತ್ತಿದ್ದಾರೆ.  ಈಗಲೂ ಖಲಿಸ್ಥಾನಿ ಬೆಂಬಲಿಗರೇ ಭಾರತ ವಿರೋಧಿ ಕೆಲಸಗಳನ್ನು ಮಾಡುತ್ತಿದ್ದು, ವೋಟ್‌ ಬ್ಯಾಂಕ್‌ ರಾಜಕಾರಣದಿಂದಾಗಿ ಜಸ್ಟಿನ್‌ ಟ್ರಾಡೊ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿಲ್ಲ.

ವೋಟ್‌ ಬ್ಯಾಂಕ್‌ ರಾಜಕಾರಣ
ಇತ್ತೀಚೆಗಷ್ಟೇ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದ್ದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಉಗ್ರರಿಗೆ ನೆಲೆ ನೀಡಬೇಡಿ ಎಂದು ಹೇಳುವ ಮೂಲಕ ಕೆನಡಾಕ್ಕೆ ಟಾಂಗ್‌ ನೀಡಿದ್ದರು. ಇದಕ್ಕೆ ಕಾರಣವೂ ಇದೆ. ಕೆನಡಾದಲ್ಲಿ ಶೇ.2.1ರಷ್ಟು ಸಿಕ್ಖ್ ಇದ್ದು, ಇವರ ಮತ ಜಸ್ಟಿನ್‌ ಟ್ರಾಡೊ ಪಾರ್ಟಿಗೆ ಅತ್ಯಮೂಲ್ಯವಾಗಿವೆ. ಒಂದು ವೇಳೆ ಖಲಿಸ್ಥಾನಿ ಉಗ್ರರ ವಿರುದ್ಧ ಕ್ರಮಕ್ಕೆ ಮುಂದಾದರೆ, ಇವರ ಮತ ಸಿಗುವುದಿಲ್ಲ ಎಂಬ ಕಾರಣಕ್ಕಾಗಿ ಜಸ್ಟಿನ್‌ ಟ್ರಾಡೊ ಕ್ರಮಕ್ಕೆ ಮುಂದಾಗುತ್ತಿಲ್ಲ. ಇದಕ್ಕೆ ಬದಲಾಗಿ, ಭಾರತ ವಿರೋಧಿ ಕ್ರಮ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಅಲ್ಲದೆ ಸದ್ಯ ಟ್ರಾಡೊ ಸರಕಾರ ಅಲ್ಪಮತದ್ದಾಗಿದ್ದು, ಜಗ್‌ಮೀತ್‌ ಸಿಂಗ್‌ ಎಂಬಾತನ ನ್ಯೂ ಡೆಮಾಕ್ರೆಟಿಕ್‌ ಪಾರ್ಟಿ ಬೆಂಬಲ ನೀಡಿದೆ. ಈತ ಹೇಳಿದಂತೆಯೂ ಟ್ರಾಡೊ ಕೇಳುತ್ತಿದ್ದಾರೆ ಎಂಬ ಆರೋಪವೂ ಇದೆ. ಜಗ್‌ಮೀತ್‌ ಸಿಂಗ್‌ ಸಂಪೂರ್ಣವಾಗಿ ಖಲಿಸ್ಥಾನಿಗಳ ಪರವಿದ್ದಾನೆ.

ಖಲಿಸ್ಥಾನಿಗಳಿಗಿಂತ ಮುಂಚೆ ನಾಜಿಗಳಿಗೂ ಆವಾಸಸ್ಥಾನ
ಖಲಿಸ್ಥಾನಿಗಳಿಗೆ ಆಶ್ರಯ ಕೊಟ್ಟು ಭಾರತದ ಕೆಂಗಣ್ಣಿಗೆ ಗುರಿಯಾಗಿರುವ ಕೆನಡಾ, ಜರ್ಮನಿಯ ಅಡಾಲ್ಫ್ ಹಿಟ್ಲರ್‌ನ ನಾಜಿಗಳಿಗೂ ಆಶ್ರಯ ತಾಣವಾಗಿದೆ ಎಂಬ ಆಘಾತಕಾರಿ ಅಂಶವನ್ನು ಅಲ್ಲಿನ ವಲಸೆ ಸಚಿವ ಮಾರ್ಕ್‌ ಮಿಲ್ಲರ್‌ ಹೇಳಿದ್ದಾರೆ. ನಾಜಿಗಳಿಗೆ ಆಶ್ರಯ ಕೊಟ್ಟ ಅತ್ಯಂತ ಕಪ್ಪು ಇತಿಹಾಸವನ್ನೂ ನಾವು ಹೊಂದಿದ್ದೇವೆ ಎಂದು ಅವರು ಹೇಳಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಕೆನಡಾ ಸಂಸತ್‌ನಲ್ಲಿ ನಾಜಿ ಸೇನೆಯ ಯೋಧರೊಬ್ಬರಿಗೆ ಗೌರವ ಕೊಟ್ಟ ಬಳಿಕ ವಿವಾದವುಂಟಾಗಿದ್ದು ಈ ಬಳಿಕ ಇಂಥ ಅಂಶಗಳು ಹೊರಬಿದ್ದಿವೆ. ವಿಚಿತ್ರವೆಂದರೆ 1939ರಲ್ಲಿ ಹಿಟ್ಲರ್‌ನ ಕಪಿಮುಷ್ಟಿಯಿಂದ ತಪ್ಪಿಸಿಕೊಂಡು ಕೆನಡಾಕ್ಕೆ ಬಂದಿದ್ದ 900 ಯಹೂದಿಗಳನ್ನು ವಾಪಸ್‌ ಕಳಿಸಲಾಗಿತ್ತು. ಇವರೆಲ್ಲರೂ ಜರ್ಮನಿಗೆ ಹೋಗಿ ನಾಜಿ ಕ್ಯಾಂಪ್‌ಗಳಲ್ಲಿ ಪ್ರಾಣ ತೆತ್ತಿದ್ದರು. ಈ ಬಗ್ಗೆ 2018ರಲ್ಲಿ ಜಸ್ಟಿನ್‌ ಟ್ರಾಡೊ ಕ್ಷಮೆ ಕೋರಿದ್ದರು.  2ನೇ ಮಹಾಯುದ್ಧ ಮುಗಿದ ಮೇಲೆ ಹಲವಾರು ನಾಜಿಗಳು, ಕೆನಡಾ ಸೇರಿದಂತೆ ಅನೇಕ ದೇಶಗಳಿಗೆ ಓಡಿ ಹೋಗಿ ನೆಲೆಯೂರಿದ್ದರು. ಇವರಿಗೆ ಅಮೆರಿಕ, ಐರೋಪ್ಯ ದೇಶಗಳು ಆಶ್ರಯ ನೀಡಿದ್ದವು. ಅಮೆರಿಕವಂತೂ ನಾಜಿ ಸೇನೆಯ ವೈದ್ಯರು, ಎಂಜಿನಿಯರ್‌ಗಳು, ಭೌತಶಾಸ್ತ್ರಜ್ಞರು, ರಾಸಾಯನ ಶಾಸ್ತ್ರಜ್ಞರನ್ನು ತಾಂತ್ರಿಕ ಸಹಾಯಕ್ಕಾಗಿ ಬಳಸಿಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next