ಉಡುಪಿ: ಪೋಲಂಡ್‌ನ ಆ್ಯಡಮ್ ಮಿಕ್ಕಿ ವಿಕ್ಜ್ ವಿ.ವಿ.ಯ (ಎಎಂಯು) ಉಪ-ರೆಕ್ಟರ್ ಪೊಝನ್ ಪ್ರೊ| ರಫಲ್ ವಿಟ್ಕೋವಸ್ಕೀ ಮತ್ತು ಮಣಿಪಾಲ ಮಾಹೆ ಕುಲಪತಿ ಲೆ|ಜ|ಡಾ| ಎಂ.ಡಿ.ವೆಂಕಟೇಶ್ ಎರಡೂ ಕಡೆಯಿಂದ ಶೈಕ್ಷಣಿಕ ಸಹಕಾರ ಕುರಿತು ಏರ್ಪಟ್ಟ ತಿಳಿವಳಿಕೆ ಪತ್ರಕ್ಕೆ ಸಹಿ ಮಾಡಿದರು.
ಮಣಿಪಾಲ ಮಾಹೆಯಲ್ಲಿ ಅಂತಾ ರಾಷ್ಟ್ರೀಯ ವ್ಯವಹಾರ ಮತ್ತು ಸಹಯೋಗ ಕಚೇರಿ, ಭಾಷಾ ಇಲಾಖೆ ಸಹಯೋಗ ದಲ್ಲಿ ಪಾಲಿಶ್ ವಿಜ್ಞಾನ ದಿನವನ್ನು ಆಚರಿಸಲಾಯಿತು. ಈ ದಿನವು ಪ್ರಸಿದ್ಧ ಪೋಲಂಡ್ ಗಣಿತಜ್ಞ ಮತ್ತು ಖಗೋಳ ವಿಜ್ಞಾನಿ ನಿಕೋಲಸ್ ಕೋಪರ್ನಿಕಸ್ ಅವರ ಜನ್ಮದಿನವನ್ನು ಸ್ಮರಿಸುತ್ತದೆ. ಅವರು ಬ್ರಹ್ಮಾಂಡದ ಮಾದರಿಯನ್ನು ಪ್ರತಿಪಾದಿಸಿದರು, ಸೂರ್ಯ ಬ್ರಹ್ಮಾಂಡದ ಮಧ್ಯದಲ್ಲಿದ್ದು ಭೂಮಿಯು ತಿರುಗುತ್ತಿದೆ ಎಂದು ಪ್ರತಿಪಾದಿಸಿದ್ದರು.
ಮುಖ್ಯ ಅತಿಥಿಯಾದ ಭಾರತೀಯ ಪೋಲಂಡ್ ರಾಯಭಾರಿ ಆ್ಯಡಂ ಬುರಾಕೊಸ್ಕಿ, ಪಾಲಿಶ್ ನ್ಯಾಷನಲ್ ಏಜೆನ್ಸಿ ಫಾರ್ ಅಕಾಡೆಮಿಕ್ಸ್ ಎಕ್ಸ್‌ಚೇಂಜ್(nawa) ವ್ಯವಸ್ಥಾಪಕ ನಿರ್ದೇಶಕ ಡಾ| ಗ್ರಝ್ನ್ಯಾ ಝೆಬ್ರೋಸ್ಕಾ, ಮಾಹೆಯ ಪಾಲಿಶ್ ಭಾಷೆಯ ಮಾರ್ಗದರ್ಶಕ ಜುಶಿ¤ಯಾನ ಗುಝಿಯಾಕ್ ಉಪಸ್ಥಿತರಿದ್ದರು.
ಭಾರತದಲ್ಲಿ ಪೋಲಿಶ್ ಭಾಷೆ ಮತ್ತು ಸಂಸ್ಕೃತಿ ಅಧ್ಯಯನವನ್ನು ಕೈಗೆತ್ತಿಕೊಳ್ಳುವ ಕುರಿತು ನಾವಾ ಹಾಕಿಕೊಂಡ ಮುನ್ನೋಟವನ್ನು ಗ್ರಝನ್ಯಾ ತಿಳಿಸಿದರು.
ಶಿಕ್ಷಣ, ಪ್ರವಾಸೋದ್ಯಮ, ತಂತ್ರಜ್ಞಾನ, ಕೈಗಾರಿಕಾ ಅಭಿವೃದ್ಧಿ, ಹೂಡಿಕೆ ಮತ್ತು ಇತರ ಕ್ಷೇತ್ರಗಳಲ್ಲಿ ಪೋಲಂಡ್ ಮತ್ತು ಕರ್ನಾಟಕದ ನಡುವೆ ನಿಕಟ ಸಂಬಂಧವನ್ನು ಉತ್ತೇಜಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಬಗ್ಗೆ ಬೆಂಗಳೂರಿನ ಪೋಲಂಡ್ ದೂತವಾಸದ ಅಧಿಕಾರಿ ರಘು ಸಿ. ರಾಜಪ್ಪ ಅವರು ಸ್ಮರಿಸಿದರು.