Advertisement

ಶಬ್ದ ಮಾಲಿನ್ಯ ದೂರು ಗಣನೀಯ ಏರಿಕೆ

11:55 PM Jan 07, 2021 | Team Udayavani |

ಬೆಂಗಳೂರು: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಂಬಂಧಿಸಿದ ದೂರು ದಾಖಲಿಸಲು ಹಾಗೂ ಪರಿಸರ ಮಾಲಿನ್ಯ ತಡೆ ಉದ್ದೇಶದಿಂದ ಸ್ಥಾಪಿಸಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಮಾಂಡ್‌ ಕಂಟ್ರೋಲ್‌ ರೂಮ್‌ಗೆ ಮೂರು ತಿಂಗಳಲ್ಲಿ 101 ದೂರುಗಳು ಬಂದಿವೆ.  ಮಂಡಳಿಯ ಕಮಾಂಡ್‌ ಕಂಟ್ರೋಲ್‌ ರೂಮ್‌ಗೆ 2020ರ ಅ.15ಕ್ಕೆ ಚಾಲನೆ ನೀಡಲಾಗಿತ್ತು. ಒಟ್ಟು ದೂರುಗಳಲ್ಲಿ 99 ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಂಬಂಧಿಸಿದ್ದಾಗಿದೆ. ಬಿಬಿಎಂಪಿ ಹಾಗೂ ಜಲಮಂಡಳಿಗೆ ಸೇರಿದ ತಲಾ ಒಂದು ದೂರು ದಾಖಲಾಗಿದೆ.

Advertisement

ನೋಡಲ್‌ ಅಧಿಕಾರಿಗಳ ನೇಮಕ
ಕಂಟ್ರೋಲ್‌ ರೂಮ್‌ಗೆ ಕರೆ ಮಾಡುವ ಸಾರ್ವಜನಿಕರು ಆಯಾ ಪಾಲಿಕೆ, ಜಲಮಂಡಳಿ ಹಾಗೂ ಸ್ಥಳಿಯ ಸಂಸ್ಥೆಗಳಿಗೆ ಸಂಬಂಧಿಸಿದ ದೂರುಗಳನ್ನು ಕೂಡ ನೀಡುತ್ತಿರುವ ಹಿನ್ನೆಲೆಯಲ್ಲಿ ಆಯಾ ವಿಭಾಗದಲ್ಲಿ ಒಬ್ಬರು ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಕಂಟ್ರೋಲ್‌ರೂಮ್‌ಗೆ ದಾಖಲಾಗುವ ದೂರನ್ನು ಸಂಬಂಧಪಟ್ಟವರ ಗಮನಕ್ಕೆ ತರಲಾಗುತ್ತಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವು ದೂರುಗಳಿಗೆ ಕ್ರಿಯಾ ಯೋಜನೆ
ಇತ್ತೀಚಿನ ದಿನಗಳಲ್ಲಿ ರಾಜ್ಯದ ಪ್ರಮುಖ ನಗರಗಳಿಂದ ಮಾಲಿನ್ಯದ ಬಗ್ಗೆ ದೂರು ಬರುತ್ತಿದೆ. ಕೆಲವು ಸಮಸ್ಯೆಗಳಿಗೆ ಕ್ರಿಯಾ ಯೋಜನೆ ರೂಪಿಸಿಕೊಳ್ಳಬೇಕಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರು “ಕೆಎಸ್‌ಪಿಸಿಬಿ ಆ್ಯಪ್‌’ ಮೂಲಕ ದೂರು ನೀಡಬಹುದಾಗಿದ್ದು, ಅದು ಮತ್ತಷ್ಟು ಅನುಕೂಲವಾಗಲಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಶ್ರೀನಿವಾಸುಲು ಉದಯವಾಣಿಗೆ ತಿಳಿಸಿದರು.

ದೂರು ಪರಿಹಾರ: ಸ್ಪಷ್ಟತೆ ಇಲ್ಲ
ಮಂಡಳಿ ಕಂಟ್ರೋಲ್‌ ರೂಮ್‌ನ ಮೂಲಕ ಸಾರ್ವಜನಿಕರ ದೂರುಗಳಿಗೆ ಸ್ಪಂದಿಸುತ್ತಿದೆ ಎಂದು ಹೇಳುತ್ತಿದೆಯಾದರೂ, ಇದರಲ್ಲಿ ಮತ್ತಷ್ಟು ಪಾರದರ್ಶಕತೆ ಕಾಯ್ದುಕೊಳ್ಳಬೇಕಿದೆ. ದಾಖಲಾದ ದೂರುಗಳಲ್ಲಿ ಎಷ್ಟು ದೂರುಗಳಿಗೆ ಪರಿಹಾರ ಸಿಕ್ಕಿದೆ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. “ದಾಖಲಾದ ದೂರುಗಳಲ್ಲಿ ಕೆಲವು ದೀರ್ಘ‌ಕಾಲದ ಸಮಸ್ಯೆಗಳಿದ್ದು, ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ’ಎನ್ನುತ್ತಾರೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು.

ಕಮಾಂಡ್‌ ಕಂಟ್ರೋಲ್‌ ಕಾರ್ಯ ವಿಧಾನ
ಕಮಾಂಡ್‌ ಕಂಟ್ರೋಲ್‌ ಕೇಂದ್ರವು ಪ್ರತಿ 15 ನಿಮಿಷಕ್ಕೊಮ್ಮೆ ಕಾರ್ಖಾನೆಗಳ ವಾಯು, ಶಬ್ದ, ಜಲ ಮಾಲಿನ್ಯದ ಮಾಹಿತಿಯನ್ನು ಅಪ್‌ಡೇಟ್‌ ಮಾಡಲಿದೆ. ಅದಕ್ಕಾಗಿ ಆಯಾ ಕಾರ್ಖಾನೆಯಲ್ಲಿ ಮಾಲಿನ್ಯ ಅಳತೆ ಮಾಡುವ ಸಾಧನ ಅಳವಡಿಸಲಾಗಿದೆ. ಮಾಲಿನ್ಯ ನಿಗದಿಗಿಂತ ಹೆಚ್ಚಿದ್ದರೆ, ಅದರ ಕುರಿತು ಕಾರ್ಖಾನೆಯವರಿಗೆ ಸ್ವಯಂಚಾಲಿತವಾಗಿ ಮೆಸೇಜ್‌ ಹೋಗಲಿದೆ.

Advertisement

ದೂರು ದಾಖಲು ಹೇಗೆ?
ಸಾರ್ವಜನಿಕರು ದೂ.ಸಂ. 080-25582559ಗೆ ಕರೆ ಮಾಡಿ ದೂರು ದಾಖಲಿಸಬಹುದು. ದೂರು ನೀಡಿದ ಮೇಲೆ ಕಮಾಂಡ್‌ ಕಂಟ್ರೋಲ್‌ರೂಮ್‌ನಿಂದ ಖಾತ್ರಿ ಮೆಸೇಜ್‌ ಸಿಗಲಿದೆ. ದಾಖಲಾಗುವ ದೂರುಗಳನ್ನು ಆಯಾ ಜಿಲ್ಲೆಯ ಸ್ಥಳೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಮಾಹಿತಿ ರವಾನಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next