ಬೆಳಗಾವಿ: ಹೊಸ ಶಿಕ್ಷಣ ನೀತಿ ಭಾರತದ ಶೈಕ್ಷಣಿಕ ಇತಿಹಾಸದಲ್ಲಿ ಒಂದು ಹೆಗ್ಗುರುತಾಗಿದ್ದು ಬರುವ ದಿನಗಳಲ್ಲಿ ದೇಶದ ಭವ್ಯ ಭವಿಷ್ಯವನ್ನು ನಿರ್ಧರಿಸಲಿದೆ. ಈ ಶಿಕ್ಷಣ ನೀತಿಯ ಪರಿಣಾಮಕಾರಿ ಅನುಷ್ಠಾನದಿಂದ ಶಿಕ್ಷಣ ಕ್ಷೇತ್ರ ಗಮನಾರ್ಹ ಬದಲಾವಣೆಗಳನ್ನು ಕಾಣುತ್ತದೆ ಎಂದು ಉಪಮುಖ್ಯಮಂತ್ರಿ ಮತ್ತು ವಿಟಿಯು ಸಮಕುಲಾಧಿಪತಿ ಡಾ| ಸಿ.ಎನ್. ಅಶ್ವತ್ ನಾರಾಯಣ್ ಹೇಳಿದರು,
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಟೆಕ್ಯುಪ್ ಘಟಕ ಆಯೋಜಿಸಿದ್ದ ವಿದ್ಯಾರ್ಥಿಗಳ ಪ್ರೊಜೆಕ್ಟ್ ಪ್ರದರ್ಶನ ಹಾಗೂ ಪ್ರಶಸ್ತಿ ಪ್ರದಾನದ ವರ್ಚುಯಲ್ ಸಮಾರಂಭ “ಆವಿಷ್ಕಾರ 2020′ ಉದ್ಘಾಟಿಸಿ ಮಾತನಾಡಿದ ಅವರು, ಈ ಶಿಕ್ಷಣ ನೀತಿಯಿಂದ ನಮ್ಮ ರಾಷ್ಟ್ರ ವಿವಿಧ ಕೌಶಲಗಳ ಜ್ಞಾನದ ಕಣಜವಾಗಲು ಬೇಕಾಗುವ ಎಲ್ಲ ಅವಶ್ಯಕ ಅಂಶಗಳನ್ನು ಪೂರೈಸಬಲ್ಲದು ಎಂದರು.
ಈ ಶಿಕ್ಷಣ ನೀತಿಯಲ್ಲಿ ಪಠ್ಯಕ್ರಮದ ಶಿಕ್ಷಣದ ಜೊತೆಗೆ ಪಠ್ಯದಿಂದ ಆಚೆಗೆ ಇರುವ ವಿಷಯಗಳಿಗೆ ಸಂಬಂಧಿಸಿದ ಕೌಶಲಗಳಿಗೆ ಪ್ರಾಮುಖ್ಯ ನೀಡಲಾಗಿದ್ದು ಎಲ್ಲಾ ಕ್ಷೇತ್ರಗಳ ಕೌಶಲ ಮತ್ತು ಜ್ಞಾನವನ್ನು ನಿಯಮಿತ ಪಠ್ಯಕ್ರಮದಲ್ಲಿ ಸಂಯೋಜಿಸಲಾಗಿದೆ. ಆದ್ದರಿಂದ ಎಂಜಿನಿಯರಿಂಗ್ ಶಿಕ್ಷಣ ಕ್ಷೇತ್ರವು ಈ ಶಿಕ್ಷಣ ನೀತಿಯ ಪರಿಣಾಮಕಾರಿ ಅನುಷ್ಠಾನದಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದು ಹೇಳಿದರು.
ಈ ಶಿಕ್ಷಣ ನೀತಿಯನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯ ಎಂಬ ಮಾನ್ಯತೆಯನ್ನು ಕರ್ನಾಟಕಕ್ಕೆ ನೀಡುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯ ಸರ್ಕಾರ ಈಗಾಗಲೇ ಹೊಸ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮಾರ್ಗ ಗಳನ್ನು ಕಂಡುಕೊಳ್ಳುವ ಪ್ರಯತ್ನವನ್ನು ಮಾಡಿದೆ ಎಂದು ಹೇಳಿದರು.
ಆವಿಷ್ಕಾರ 2020 ಬಗ್ಗೆ ಪ್ರತಿಕ್ರಿಯಿಸಿದ ಅವರು, ವಿದ್ಯಾರ್ಥಿಗಳಲ್ಲಿ ಸಂಶೋಧನೆ ಮತ್ತು ನಾವೀನ್ಯತೆಗಳನ್ನು ಗುರುತಿಸುವ ಮತ್ತು ಉತ್ತೇಜಿಸುವ ನಿಟ್ಟಿನಲ್ಲಿ ರೂಪಿಸಿದ ಕಾರ್ಯಕ್ರಮಗಳಿಗೆ ವಿವಿಯನ್ನು ಶ್ಲಾಘಿಸಿದರು.ವಿಟಿಯು ಟೆಕ್ಯುಪ್ ಘಟಕದ ಮಾರ್ಗದರ್ಶಕ ಪ್ರೊ| ಎನ್.ಸಿ. ಶಿವಪ್ರಕಾಶ್ ಅವರು ಆವಿಷ್ಕಾರ 2020ಯ ಯೂಟ್ಯೂಬ್ ಚಾನೆಲ್‌ನ್ನು ಅನಾವರಣಗೊಳಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿವಿ ಕುಲಪತಿ ಪ್ರೊ| ಕರಿಸಿದ್ದಪ್ಪ ಮಾತನಾಡಿ, ಹೊಸ ಶಿಕ್ಷಣ ನೀತಿಯ ಪರಿಣಾಮಕಾರಿ ಅನುಷ್ಠಾನದಲ್ಲಿ ವಿಟಿಯು ಪ್ರಮುಖ ಪಾತ್ರ ವಹಿಸಲು ಸಿದ್ಧವಿದೆ ಎಂದು ಹೇಳಿದರು.
ಡಾ| ಸಂತೋಷ್ ದೇಶಪಾಂಡೆ ಸ್ವಾಗತಿಸಿದರು. ಡಾ| ಮೇಘನಾ ಕುಲಕರ್ಣಿ ನಿರೂಪಿಸಿದರು. ಪ್ರೊ| ಸತೀಶ್ ಅಣ್ಣಿಗೇರಿ ವಂದಿಸಿದರು.