Advertisement

ಆರು ತಿಂಗಳಲ್ಲಿ ಸಿಗ್ನಲ್‌ ಮುಕ್ತ ಕಾರಿಡಾರ್‌

11:28 AM Jul 12, 2017 | |

ಬೆಂಗಳೂರು: ನಗರದಲ್ಲಿ ತೀವ್ರ ವಾಹನ ದಟ್ಟಣೆಯಿರುವ ಎಚ್‌ಎಎಲ್‌ ವಿಮಾನನಿಲ್ದಾಣ ರಸ್ತೆ ಹಾಗೂ ಹಳೆ ಮದ್ರಾಸ್‌ ರಸ್ತೆಯಲ್ಲಿ ದಟ್ಟಣೆ ತಗ್ಗಿಸಲು ರೂಪಿಸಲಾದ ಸಿಗ್ನಲ್‌ವುುಕ್ತ ಕಾರಿಡಾರ್‌ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ಸಮಸ್ಯೆ ನಿವಾರಣೆಯಾಗಿದ್ದು, ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದರು.

Advertisement

ಎಚ್‌ಎಎಲ್‌ ವಿಮಾನನಿಲ್ದಾಣ ರಸ್ತೆಯ ಸುರಂಜನ್‌ದಾಸ್‌ ರಸ್ತೆ ಜಂಕ್ಷನ್‌ನಿಂದ ಇಂದಿರಾನಗರದ 100 ಅಡಿ ರಸ್ತೆವರೆಗೆ ಸಿಗ್ನಲ್‌ ಮುಕ್ತ ಸಂಚಾರ ವ್ಯವಸ್ಥೆ ಕಲ್ಪಿಸುವ ಯೋಜನೆ ಸಂಬಂಧ ಮಂಗಳವಾರ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಹಳೆ ವಿಮಾನನಿಲ್ದಾಣ ರಸ್ತೆ ಹಾಗೂ ಹಳೆ ಮದ್ರಾಸ್‌ ರಸ್ತೆಗಳಲ್ಲಿ ದಿನ ಕಳೆದಂತೆ ದಟ್ಟಣೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 2014ರಲ್ಲಿ ಸುಮಾರು 275 ಕೋಟಿ ರೂ. ವೆಚ್ಚದಲ್ಲಿ 33 ಕಿ.ಮೀ. ಉದ್ದದ ಸಿಗ್ನಲ್‌ ಮುಕ್ತ ಕಾರಿಡಾರ್‌ ಯೋಜನೆ ಕೈಗೆತ್ತಿಕೊಂಡು ಕಾರ್ಯಾದೇಶ ನೀಡಲಾಗಿತ್ತು.

ಆದರೆ ಭೂಸ್ವಾಧೀನ ಪ್ರಕ್ರಿಯೆ ವಿಳಂಬದಿಂದ ಯೋಜನೆ ಅನುಷ್ಠಾನಕ್ಕೆ ಹಿನ್ನಡೆಯಾಗಿತ್ತು. ಸದ್ಯ ಎನ್‌ಐಎಲ್‌, ಎಚ್‌ಎಎಲ್‌ ಹಾಗೂ ಕೆಲ ಖಾಸಗಿ ಆಸ್ತಿದಾರರಿಗೆ ಟಿಡಿಆರ್‌ ನೀಡಿ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು.

ಮೊದಲ ಹಂತದಲ್ಲಿ ಮಣಿಪಾಲ್‌ ಆಸ್ಪತ್ರೆ ಜಂಕ್ಷನ್‌ನಿಂದ ಸುರಂಜನ್‌ದಾಸ್‌ ರಸ್ತೆ ಜಂಕ್ಷನ್‌, ಕುಂದಲಹಳ್ಳಿ, ವರ್ತೂರು ಕೋಡಿ, ಹೋಪ್‌ ಫಾರಂವರೆಗಿನ ಮಾರ್ಗ, ಎರಡನೇ ಹಂತದಲ್ಲಿ ಬಿಗ್‌ ಬಜಾರ್‌ ಜಂಕ್ಷನ್‌, ಹೂಡಿ ಜಂಕ್ಷನ್‌, ಕೆ.ಆರ್‌.ಪುರ ರೈಲ್ವೆ ನಿಲ್ದಾಣ ಹಾಗೂ ಇಂದಿರಾನಗರ 100 ಅಡಿ ರಸ್ತೆ ಸೇರಿದಂತೆ ಒಟ್ಟು 33 ಕಿ.ಮೀ. ಉದ್ದದ ಮಾರ್ಗದಲ್ಲಿ 6 ಅಂಡರ್‌ಪಾಸ್‌ ಹಾಗೂ ಒಂದು ಮೇಲ್ಸೇತುವೆ ನಿರ್ಮಾಣದ ಜತೆಗೆ ಪಾದಚಾರಿ ಮಾರ್ಗ, ಒಳಚರಂಡಿ ವ್ಯವಸ್ಥೆ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.

ಹಳೆ ಮದ್ರಾಸ್‌ ರಸ್ತೆಯ ಬಿಗ್‌ಬಜಾರ್‌ ಜಂಕ್ಷನ್‌ನಲ್ಲಿ 26 ಮರ ಸೇರಿದಂತೆ ಯೋಜನೆಯಡಿ 46 ಮರ ತೆರವುಗೊಳಿಸುವ ಬದಲು ಸ್ಥಳಾಂತರಿಸುವ ಬಗ್ಗೆ ಪರಿಶೀಲಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಆದರೆ ಅದು ಕಾರ್ಯಸಾಧುವಲ್ಲ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದರು.

Advertisement

ಕುಂದಲಹಳ್ಳಿ ಬಳಿ ಪರಿಶೀಲನೆ ವೇಳೆ ದೊಡ್ಡನೆಕ್ಕುಂದಿ ವಾರ್ಡ್‌ ಸದಸ್ಯೆ ಶ್ವೇತಾ ವಿಜಯಕುಮಾರ್‌ ಹಾಗೂ ಸ್ಥಳೀಯರು ತೂಬರಹಳ್ಳಿಯ ವಿಬ್‌ಗಯಾರ್‌ ಶಾಲೆಗೆ ಸಂಪರ್ಕಿಸುವ ರಸ್ತೆಯನ್ನು 10 ವರ್ಷಗಳಿಂದ ಅಭಿವೃದ್ಧಿಪಡಿಸಿಲ್ಲ ಎಂದು ಸಚಿವ ಜಾರ್ಜ್‌ ಅವರಿಗೆ ದೂರು ನೀಡಿದರು. ಇದಕ್ಕೆ ಸ್ಪಂದಿಸಿದ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮಾತನಾಡಿ, ಸುಮಾರು ಒಂದು ಕಿ.ಮೀ. ರಸ್ತೆ ಅಭಿವೃದ್ಧಿಗೆ ನಾಲ್ಕು ಮಂದಿ ಭೂಮಾಲೀಕರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.

ಹೀಗಾಗಿ ಅಭಿವೃದ್ಧಿಪಡಿಸಲು ಸಾಧ್ಯವಾಗಿಲ್ಲ ಎಂದರು. ಶೀಘ್ರವೇ ತಡೆಯಾಜ್ಞೆ ತೆರವಿಗೆ ಪ್ರಯತ್ನಿಸುವ ಮೂಲಕ ಟಿಡಿಆರ್‌ನಡಿ ಪರಿಹಾರ ನೀಡಿ ಭೂಸ್ವಾಧೀನಪಡಿಸಿಕೊಳ್ಳುವಂತೆ ಸೂಚನೆ ನೀಡಿದರು. ಮೇಯರ್‌ ಜಿ.ಪದ್ಮಾವತಿ, ಉಪಮೇಯರ್‌ ಆನಂದ್‌, ಶಾಸಕ ಎಸ್‌.ರಘು, ಆಯುಕ್ತ ಎನ್‌.ಮಂಜುನಾಥ್‌ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next