Advertisement

Kaup ಪೊಲೀಸರ ಸಿನಿಮೀಯ ಶೈಲಿ ಕಾರ್ಯಾಚರಣೆ : ಆರು ಮಂದಿ ಬಂಧನ

01:10 PM Jun 02, 2024 | Team Udayavani |

ಕಾಪು: ದರೋಡೆಗೆ ಹೊಂಚು ಹಾಕಿ, ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸ್ಕಾರ್ಫಿಯೋ ಕಾರಿನಲ್ಲಿ ಸಂಚರಿಸುತ್ತಿದ್ದ ಆರೋಪಿಗಳನ್ನು ಕಾಪು ಪೊಲೀಸರು ಶನಿವಾರ ರಾತ್ರಿ ಸಿನಿಮೀಯ ರೀತಿಯ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.

Advertisement

ರಾ.ಹೆ.66ರ ಕೋತಲಕಟ್ಟೆ ಬಳಿ ಸ್ಕಾರ್ಪಿಯೋ ಕಾರಿಗೆ ತಡೆಯೊಡ್ಡಿದ ಪೊಲೀಸರು ಆರೋಪಿಗಳಾದ ಅಮಿತ್ ರಾಜ್, ಪ್ರಕಾಶ್  ಸುರತ್ಕಲ್, ವರುಣ್ ನೀರುಮಾರ್ಗ, ಕಾರ್ತಿಕ್ ಶೆಟ್ಟಿ ಸುರತ್ಕಲ್, ಅಭಿಷೇಕ್, ಶ್ರೀಕಾಂತ್ ಶ್ರೀಪತಿ ಫರಂಗಿಪೇಟೆ ಎಂಬವರನ್ನು ಬಂಧಿಸಿದ್ದಾರೆ.

ಘಟನೆಯ ವಿವರ: ಉಡುಪಿಯಿಂದ ಕಾಪು‌ ಕಡೆಗೆ ಬರುತ್ತಿದ್ದ ಕಾಪು‌ ಸಿಐ ಜಯಶ್ರೀ ಮಾನೆ ಅವರು ಉದ್ಯಾವರ ಸೇತುವೆ ಮೇಲೆ ಅನುಮಾನಾಸ್ಪದ ರೀತಿಯಲ್ಲಿ ಸ್ಕಾರ್ಪಿಯೋ ಕಾರೊಂದು ನಿಂತಿರುವುದನ್ನು ಗಮನಿಸಿದ್ದರು. ಕೂಡಲೇ ಸ್ಕಾರ್ಪಿಯೋ ಕಾರನ್ನು ನಿಲ್ಲಿಸಲು ಯತ್ನಿಸಿದಾಗ ಆರೋಪಿಗಳು ಕಾರನ್ನು ಇತರರ ಪ್ರಾಣಕ್ಕೆ ಮಾರಕವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಕಾಪು ಕಡೆಗೆ ತೆರಳಿದ್ದರು.

ಅವರು ತತ್ ಕ್ಷಣ ಈ ಬಗ್ಗೆ ಕಾಪು ಮತ್ತು ಪಡುಬಿದ್ರಿ ಪೊಲೀಸರಿಗೆ ಮಾಹಿತಿ ನೀಡಿದ್ದು ಬಳಿಕ ಕಾಪು ಎಸ್ಸೈ ಅಬ್ದುಲ್ ಖಾದರ್ ನೇತೃತ್ವದ ತಂಡದ ಸಹಕಾರದೊಂದಿಗೆ ಕೋತಲಕಟ್ಟೆ ಬಳಿ ಸ್ಕಾರ್ಪಿಯೋ ಕಾರನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಕಾಪು‌ ಸಿಐ ಜಯಶ್ರೀ ಮಾನೆ ಮತ್ತು ಕಾಪು ಎಸ್ ಐ ಅಬ್ದುಲ್ ಖಾದರ್ ಹಾಗೂ ಸಿಬ್ಬಂದಿಗಳು ಸ್ಕಾರ್ಪಿಯೋದಲ್ಲಿ ಇದ್ದವರನ್ನು ವಶಕ್ಕೆ ಪಡೆದುಕೊಂಡು ಪರಿಶೀಲಿಸಿದಾಗ ದರೋಡೆಗೆ ಹೊಂಚು ಹಾಕುತ್ತಿರುವ ವಿಚಾರ ಬೆಳಕಿಗೆ ಬಂದಿತ್ತು.

ಸ್ಕಾರ್ಪಿಯೋ ಕಾರ್ ನಲ್ಲಿ ಡ್ರ್ಯಾಗನ್, ಚೂರಿ, ಕಬ್ಬಿಣದ ಪೈಪ್ ಮತ್ತು ಮರಳು ಮಿಶ್ರಿತ ಮೆಣಸಿನ ಪುಡಿಯನ್ನು ಪತ್ತೆ ಹಚ್ಚಿದ್ದು, ಪೊಲೀಸರು ಆರೋಪಿಗಳನ್ನು  ಮತ್ತಷ್ಟು ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next