ಸಿಂಗಾಪುರ/ಹೊಸದಿಲ್ಲಿ: ಕಳೆದ ವರ್ಷ ದೇಶದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದ (ಆರ್‌ಸಿಇಪಿ)ಕ್ಕೆ ಭಾರತ ಹೊರತುಪಡಿಸಿದ ಏಷ್ಯಾ-ಪೆಸಿಫಿಕ್ ವಲಯದ ಹದಿನೈದು ರಾಷ್ಟ್ರಗಳು ಭಾನುವಾರ ಸಹಿ ಹಾಕಿವೆ. ಇದು ವಿಶ್ವದ ಅತ್ಯಂತ ದೊಡ್ಡ ಮುಕ್ತ ವ್ಯಾಪಾರ ಒಪ್ಪಂದ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. 8 ವರ್ಷಗಳ ಕಾಲ ನಡೆದ ಸಮಾಲೋಚನೆ ಬಳಿಕ ಅದಕ್ಕೆ ಸಹಿ ಹಾಕಲಾಗಿದೆ.
ಹೈನೋದ್ಯಮ ಸೇರಿ ಕೆಲವೊಂದು ಕ್ಷೇತ್ರಗಳ ಮೇಲೆ ವಿಧಿಸಲಾಗಿರುವ ತೆರಿಗೆ ರದ್ದು ಮಾಡಿದರೆ, ಸ್ಥಳೀಯ ಉತ್ಪಾದಕರಿಗೆ ತೊಂದರೆ ಉಂಟಾಗಲಿದೆ ಹಾಗೂ ಚೀನಾದಿಂದ ಕಡಿಮೆ ಬೆಲೆಯ ಉತ್ಪನ್ನಗಳು ದೇಶಿಯ ಮಾರುಕಟ್ಟೆಗೆ ಬರಲಿವೆ ಎಂಬ ಆತಂಕದ ಹಿನ್ನೆಲೆಯಲ್ಲಿ ಭಾರತವು ಕಳೆದ ವರ್ಷವೇ ಈ ಒಪ್ಪಂದದಿಂದ ದೂರ ಉಳಿದು, ಮಾತುಕತೆಯಿಂದ ಹೊರ ಬಂದಿತ್ತು. ಜತೆಗೆ ಈ ಒಪ್ಪಂದಕ್ಕೆ ದೇಶದ ಕೃಷಿ ಕ್ಷೇತ್ರದಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಭಾರತ ಸಹಿ ಹಾಕದ ಹೊರತಾಗಿಯೂ ಒಟ್ಟು 2 ಶತಕೋಟಿ ಜನರ ಮೇಲೆ ಒಪ್ಪಂದ ಪ್ರಭಾವ ಬೀಳಲಿದೆ.
ಚೀನಾ ಪ್ರಾಬಲ್ಯಕ್ಕೆ ದಾರಿ?: ದಕ್ಷಿಣ ಏಷ್ಯಾ ಮತ್ತು ಆಸಿಯಾನ್ ರಾಷ್ಟ್ರಗಳ ವ್ಯಾಪ್ತಿಯಲ್ಲಿ ಚೀನಾ ಇರುವುದರಿಂದ ಡ್ರ್ಯಾಗನ್ ಸೂಚಿಸುವ ವಾಣಿಜ್ಯ ನಿಯಮಗಳೇ ಹೆಚ್ಚಾಗಿ ಜಾರಿಯಾಗುವ ಆತಂಕ ಎದುರಾಗಿದೆ. ಟ್ರಾನ್ಸ್ ಪೆಸಿಫಿಕ್ ಪಾರ್ಟ್‌ನರ್‌ಶಿಪ್‌ನಿಂದ ಅಮೆರಿಕ ಹೊರಬಂದದ್ದು ಕೂಡ ಚೀನಾಕ್ಕೆ ಸಹಕಾರಿಯಾಗಿದೆ. ಅದರ ಹೊರತಾ ಗಿಯೂ ಅಮೆರಿಕದ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಆರ್‌ಸಿಇಪಿಯಿಂದ ಲಾಭವೇ ಆಗಲಿದೆ. ಜತೆಗೆ ಜ.20ರ ಬಳಿಕ ಅಮೆರಿಕದ ಆಡಳಿತ ಚುಕ್ಕಾಣಿ ಬದಲಾಗಲಿದೆ. ಅಮೆರಿಕ ಸರಕಾರ ಟ್ರಾನ್ಸ್ ಪೆಸಿಫಿಕ್ ಪಾರ್ಟ್‌ನರ್‌ಶಿಪ್ ಪರಿಷ್ಕೃತ ಆವೃತ್ತಿ ಕಾಂಪ್ರಹೆನ್ಸಿವ್ ಆ್ಯಂಡ್ ಪ್ರೊಗ್ರೆಸಿವ್ ಎಗ್ರಿಮೆಂಟ್ ಫಾರ್ ಟ್ರಾನ್ಸ್ ಫೆಸಿಫಿಕ್ ಪಾರ್ಟ್‌ನರ್‌ಶಿಪ್ ಅಂತಿಮಗೊಳ್ಳುವುದನ್ನೇ ಎದುರು ನೋಡುತ್ತಿದೆ. ಅದರಿಂದ ಹೆಚ್ಚು ಲಾಭವಿದೆ ಎನ್ನುವುದು ಅಮೆರಿಕದ ಲೆಕ್ಕಾಚಾರ.