Advertisement

ಸಿಗಂದೂರು ದೇಗುಲ ಮುಜರಾಯಿಗಿಲ್ಲ: ಸ್ವಾಮೀಜಿ ನಿಯೋಗಕ್ಕೆ ಸಿಎಂ ಭರವಸೆ

11:39 PM Nov 07, 2020 | sudhir |

ಬೆಂಗಳೂರು : ಸಿಗಂದೂರು ದೇವಾಲಯದ ಮೇಲುಸ್ತುವಾರಿ ಸಮಿತಿ ಗೊಂದಲ ನಿವಾರಣೆ ಸಂಬಂಧ ಸ್ವಾಮೀಜಿಗಳ ನಿಯೋಗ ಶನಿವಾರ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡಿತು.

Advertisement

ಗೃಹ ಕಚೇರಿ “ಕೃಷ್ಣಾ’ದಲ್ಲಿ ರೇಣುಕಾನಂದ ಸ್ವಾಮೀಜಿ, ಮಾಜಿ ಸಚಿವ ಹರತಾಳು ಹಾಲಪ್ಪ ನೇತೃತ್ವದಲ್ಲಿ ಸುಮಾರು 20 ವಿವಿಧ ಸಮುದಾಯಗಳ ಸ್ವಾಮೀಜಿಗಳ ನಿಯೋಗ ಭೇಟಿ ಮಾಡಿ, ಮೇಲುಸ್ತುವಾರಿ ಸಮಿತಿ ಗೊಂದಲ ನಿವಾರಿಸಿ, ಭಕ್ತರು ನೀಡುವ ದೇಣಿಗೆ ವಿಚಾರದಲ್ಲಿ ಪಾರದರ್ಶಕತೆ ತರಲು ಕೋರಿತು.

ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ, ದೇವಾಲಯವನ್ನು ಯಾವುದೇ ಕಾರಣಕ್ಕೂ ಮುಜರಾಯಿ ವ್ಯಾಪ್ತಿಗೆ ತರುವ ಪ್ರಶ್ನೆಯೇ ಇಲ್ಲ. ದೇಣಿಗೆ ವಿಚಾರದಲ್ಲಿ ಪಾರದರ್ಶಕತೆ ತರಬೇಕು ಎಂದು ಭಕ್ತರು ಬಯಸಿದ್ದರಿಂದ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಲಹಾ ಸಮಿತಿ ರಚಿಸಲಾಗಿದೆ. ಈ ಸಮಿತಿಯಲ್ಲಿ ಈಡಿಗ ಜನಾಂಗದ ರೇಣುಕಾನಂದ ಸ್ವಾಮೀಜಿಯವರನ್ನು ಸೇರ್ಪಡೆಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಮಿತಿ ಸದ್ಯ ನಾಲ್ಕು ತಿಂಗಳವರೆಗೆ ಮುಂದುವರಿಯಲಿದ್ದು, ಬಳಿಕ ಅದರ ಅಸ್ತಿತ್ವದ ಬಗ್ಗೆ ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಬಂಜಾರ ಸಮಾಜದ ಸೇವಾಲಾಲ್‌ ಅರೇಮಲ್ಲಾಪುರದ ಪ್ರಣಯಾನಂದ ಸ್ವಾಮೀಜಿ, ಭಗೀರಥ ಮಠದ ಪುರುಷೋತ್ತಮ ಪುರಿ ಸ್ವಾಮೀಜಿ, ಕುಂಚಿಟಿಗ ಗುರುಪೀಠದ ಶಾಂತವೀರ ಸ್ವಾಮಿ, ಹೊಸದುರ್ಗ ಕನಕಗುರು ಪೀಠದ ಈಶ್ವರಾನಂದಪುರ ಸ್ವಾಮೀಜಿ, ತಿಗಳರ ಲಕ್ಷ್ಮೀ ನರಸಿಂಹ ಸ್ವಾಮಿ, ಮಡಿವಾಳರ ಮಾಚಿದೇವ ಸ್ವಾಮೀಜಿ, ಗಾಣಿಗರ ಮಠದ ಡಾ| ಬಸವ ಕುಮಾರ ಸ್ವಾಮೀಜಿ, ಚಿತ್ರದುರ್ಗ ಮಾದಾರ ಪೀಠದ ಬಸವ ಛಲವಾದಿ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next