ಶಿವಮೊಗ್ಗ: ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನದ ವಿಚಾರವಾಗಿ ಸರ್ಕಾರ ರಚಿಸಿರುವ ಮೇಲ್ವಿಚಾರಣೆ ಸಮಿತಿ ಹಾಗೂ ಸಲಹಾ ಸಮಿತಿಯನ್ನು ಕೈ ಬಿಡುವಂತೆ ಸರ್ಕಾರಕ್ಕೆ 15 ದಿನಗಳ ಗಡುವು ನೀಡಲು ತೀರ್ಮಾನಿಸಲಾಗಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದರು.
ಜಿಲ್ಲಾ ಆರ್ಯ ಈಡಿಗರ ಸಂಘದ ವತಿಯಿಂದ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ, ಹೋರಾಟದ ಪೂರ್ವ ಭಾವಿ ಸಿದ್ದತಾ ಸಭೆ ನಂತರ ತುರ್ತು ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದರು.
ದೇವಸ್ಥಾನದ ವಿಚಾರವಾಗಿ ಸರ್ಕಾರ ರಚಿಸಿರುವ ಮೇಲ್ವಿಚಾರಣೆ ಹಾಗೂ ಸಲಹಾ ಸಮಿತಿಯನ್ನು ಜಾತ್ಯಾತೀತವಾಗಿ ಖಂಡಿಸುತ್ತೇವೆ. ಶೀಘ್ರದಲ್ಲಿ ಈಡಿಗರ ಸ್ವಾಮೀಜಿಗಳ ನೇತೃತ್ವದಲ್ಲಿ ಇತರೆ ಸಮಾಜದ ಸ್ವಾಮೀಜಿಗಳ ಸಹಕಾರದೊಂದಿಗೆ ಜಾತ್ಯಾತೀತ ಹೋರಾಟಕ್ಕೆ ನಿರ್ಧರಿಸಲಾಗಿದೆ. ಸರ್ಕಾರ 15 ದಿನದೊಳಗೆ ಮೇಲ್ವಿಚಾರಣೆ ಹಾಗೂ ಸಲಹಾ ಸಮಿತಿಯನ್ನು ರದ್ದುಗೊಳಿಸಬೇಕು. ಇಲ್ಲದಿದ್ದರೆ ಸ್ವಾಮೀಜಿಗಳ ನೇತೃತ್ವದಲ್ಲಿ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಾಜಿ ಶಾಸಕ ಮಧುಬಂಗಾರಪ್ಪ ಮಾತನಾಡಿ, ಎಲ್ಲಾ ಸಮಾಜದ ಮುಖಂಡರು, ಸ್ವಾಮೀಜಿಗಳು ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಸರ್ಕಾರದ ಈ ನಡೆ ಭಕ್ತಾದಿಗಳ ಭಾವನೆಗೆ ಧಕ್ಕೆ ತಂದಿದೆ. ಸರ್ಕಾರ ನಡೆಸಲು ಸಿಗಂದೂರು ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರಿಸಲು ಹೊರಟಿದ್ದಾರೆ ಎಂಬ ಅನುಮಾನ ಕಾಡುತ್ತಿದೆ ಎಂದರು.
ಇದನ್ನೂ ಓದಿ: ರಾಜ್ಯದಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲು ಮಾರ್ಗಸೂಚಿ ಬಿಡುಗಡೆ
ಸರ್ಕಾರದ ವಿರುದ್ಧ ಕಾನೂನು ಹೋರಾಟಕ್ಕೆ ಸಿದ್ದತೆ ನಡೆಸಲಾಗಿದೆ. ಸರ್ಕಾರ ಬಗ್ಗದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದರು.
ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಜಿಲ್ಲಾಡಳಿತ ರಚಿಸಿರುವ ಮೇಲ್ವಿಚಾರಣೆ ಸಮಿತಿಗೆ ಎಲ್ಲಾ ಜಾತಿ, ಧರ್ಮದವರು ವಿರೋಧ ವ್ಯಕ್ತಪಡಿಸಿದ್ದಾರೆ. ಸಿಗಂದೂರು ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು. ಶೀಘ್ರದಲ್ಲೇ ಹೋರಾಟದ ದಿನಾಂಕ ನಿಗದಿ ಪಡಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: ರವಿವಾರ ನೇತ್ರಾವತಿ ನದಿಗೆ ಹಾರಿದ್ದ ಯುವಕ: ಪಾಣೆಮಂಗಳೂರು ಸೇತುವೆಯಡಿ ಇಂದು ಮೃತದೇಹ ಪತ್ತೆ
ಸುದ್ದಿಗೋಷ್ಟಿಯಲ್ಲಿ ಮಾಜಿ ಶಾಸಕಿ ಶಾರದಾ ಪೂರ್ಯನಾಯ್ಕ, ದಲಿತ ಸಂಘರ್ಷ ಸಮಿತಿಯ ಎಂ.ಗುರುಮೂರ್ತಿ, ಸ್ವರಾಜ್ ಇಂಡಿಯಾ ವಕ್ತಾರ ಕೆ.ಪಿ ಶ್ರೀಪಾಲ್, ಮಾಜಿ ಶಾಸಕ ಜಿ.ಡಿ ನಾರಾಯಣಪ್ಪ, ಸೈದಪ್ಪ ಗುತ್ತೇದಾರ್ ಸೇರಿದಂತೆ ಹಲವರಿದ್ದರು