Advertisement

ಸಿಗಂಧಿನಿ ಕಾಳು ಮೆಣಸಿನ ತಳಿಗೆ ವಿಶ್ವಮಾನ್ಯತೆ

10:00 PM Jul 11, 2021 | Team Udayavani |

ಗಂಗಾಧರ ಕೊಳಗಿ

Advertisement

ಸಿದ್ದಾಪುರ: ತಾಲೂಕಿನ ಸಿಗಂಧಿನಿ ಎನ್ನುವ ಹೆಸರಿನ ಸ್ಥಳೀಯ ಕಾಳುಮೆಣಸಿನ ತಳಿಗೆ ದೇಶದ ಭರವಸೆಯ ತಳಿ ಎನ್ನುವ ಪ್ರಮಾಣಿಕರಣದ ಜೊತೆಗೆ ಅದನ್ನು ಅಭಿವೃದ್ಧಿಪಡಿಸಿದ ಕಾನಸೂರು ಸಮೀಪದ ಹುಣಸೆಕೊಪ್ಪ-ಕಲ್ಕಟ್ಟೆ ರಮಾಕಾಂತ ಹೆಗಡೆಯವರ ಹೆಸರಿನಲ್ಲಿ ಪೇಟೆಂಟ್‌ ದೊರಕಿದೆ.

ಭಾರತ ಸರಕಾರ ಪ್ಲಾಂಟ್‌ ವೆರೈಟೀಸ್‌ ರಿಜಿಸ್ಟಿಯ ಪ್ರಮಾಣ ಪತ್ರ ನೀಡುವ ಮೂಲಕ ಸಿಗಂಧಿನಿ ಎನ್ನುವ ಹೆಸರಿನ ಈ ತಳಿ ಪ್ರಪಂಚದಲ್ಲಿನ ಕಾಳುಮೆಣಸಿನ ತಳಿಗಳಲ್ಲಿ ವಿಶಿಷ್ಠವಾದದ್ದು ಎಂದು ಗುರುತಿಸಿಕೊಂಡಿದ್ದು ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಈ ಮಾನ್ಯತೆ ಪಡೆದ ಕಾಳಿಮೆಣಸಿನ ತಳಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ತಮ್ಮ ಸಾಂಪ್ರದಾಯಿಕ ತೋಟದಲ್ಲಿ ಹಲವು ವರ್ಷಗಳ ಹಿಂದೆ ಕಾಳುಮೆಣಸಿಗೆ ರೋಗ ಬಂದು ನಾಶವಾದ ನಂತರದಲ್ಲಿ ವೆನಿಲ್ಲಾವನ್ನು ಬೆಳೆಸಿದ್ದೆ. ಈ ಸಂದರ್ಭದಲ್ಲಿ ತಮ್ಮ ತೋಟಕ್ಕೆ ಭೇಟಿ ನೀಡಿದ ವಿಜ್ಞಾನಿ ಡಾ| ವೇಣುಗೋಪಾಲ್‌ ತೋಟದಲ್ಲಿ ರೋಗ ಬಂದು ಎಲ್ಲ ಮೆಣಸಿನ ಬಳ್ಳಿಗಳು ನಾಶವಾದರೂ ಉಳಿದುಕೊಂಡ ಎರಡು ಕಾಳುಮೆಣಸಿನ ಬಳ್ಳಿಗಳನ್ನು ಕಂಡು ಕುತೂಹಲಗೊಂಡು ಆ ಬಗ್ಗೆ ಅಧ್ಯಯನ ನಡೆಸಿದರು. ನಂತರ ಆ ತಳಿಯನ್ನು ಸಂರಕ್ಷಿಸಿಕೊಂಡುಬರುವ ಕುರಿತು ಅಗತ್ಯ ಸಲಹೆ ನೀಡಿದರು ಎಂದು ಕಲ್ಕಟ್ಟೆ ರಮಾಕಾಂತ ಹೆಗಡೆ ಸುದ್ದಿಗಾರರಿಗೆ ತಿಳಿಸಿದರು.

ಕಳೆದ 9 ವರ್ಷಗಳಿಂದ ಆ ಎರಡು ಬಳ್ಳಿಗಳ ಬುಡದಲ್ಲಿನ ಕುಡಿಗಳನ್ನು ನೆಟ್ಟು ಈಗ ತೋಟದಲ್ಲಿ ಈ ತಳಿಯ 100 ಬಳ್ಳಿಗಳಾಗಿವೆ. ಯಾವುದೇ ವಿಶೇಷ ಆರೈಕೆ, ಔಷಧಿ ಇಲ್ಲದೇ ಅವುಗಳನ್ನು ಬೆಳೆಸಿದ್ದು ಇದು ವೈಶಿಷ್ಟಪೂರ್ಣ ರೋಗ ಪ್ರತಿಬಂಧಕ ಶಕ್ತಿ ಹೊಂದಿದೆ. ಈಗ ಪ್ರತಿ ಬಳ್ಳಿಯಿಂದ ಸರಾಸರಿ ನಾಲ್ಕೂವರೆ ಕೆ.ಜಿ. ಕಾಳುಮೆಣಸು ದೊರಕುತ್ತಿದೆ. ಇದೇ ಬಳ್ಳಿಗಳ ಕುಡಿಗಳನ್ನು ನರ್ಸರಿಯಲ್ಲಿ ಬೆಳೆಸಿ ಈವರೆಗೆ 1 ಲಕ್ಷಕ್ಕೂ ಹೆಚ್ಚು ಬಳ್ಳಿಗಳನ್ನು ಕೃಷಿಕರಿಗೆ ನೀಡಿದ್ದೇನೆ. ಈ ತಳಿಗೆ ಡಾ| ವೇಣುಗೋಪಾಲ್‌ ಅವರೇ ಈ ತಳಿಗೆ ಸಿಗಂಧಿನಿ ಎನ್ನುವ ಹೆಸರನ್ನು ಇಟ್ಟಿದ್ದು ಈ ತಳಿಯನ್ನು ರೈತರ ಹೆಸರಲ್ಲಿ ನೋಂದಣಿ ಮಾಡಲು ಸಲಹೆ ನೀಡಿದರು.

Advertisement

ತಾಲೂಕಿನ ತೋಟಗಾರಿಕೆ ಇಲಾಖೆ ಅಧಿಕಾರಿಗಳಾದ ದಾದಾಸಾಹೇಬ್‌ ದೇಸಾಯಿ, ಮಹಾಬಲೇಶ್ವರ ಅವರ ಮಾರ್ಗದರ್ಶನ, ಸಹಕಾರದೊಂದಿಗೆ ಇದನ್ನು ತಮ್ಮ ಹೆಸರಿನಲ್ಲಿ ಪೇಟೆಂಟ್‌ ಪಡೆದುಕೊಳ್ಳಲು ಸಾಧ್ಯವಾಯಿತು. ಪರಿಸರ ತಜ್ಞ ಬಾಲಚಂದ್ರ ಹೆಗಡೆ ಸಾಯಿಮನೆ ಕೂಡ ಸಹಕಾರ ನೀಡಿದರು.

ಐಎಎಸ್‌ಆರ್‌ ಹಾಗೂ ಇನ್ನಿತರ ಸಂಸ್ಥೆಗಳ ಕೊಲ್ಕೊತ್ತಾ, ಕೇರಳ ಮುಂತಾದೆಡೆಯ ವಿಜ್ಞಾನಿಗಳು 3 ವರ್ಷ ಇದರ ಅಧ್ಯಯನ ಬೆಳವಣಿಗೆ, ಹೂ ಬಿಡುವ, ಕರೆಕಟ್ಟುವ, ಕಾಳು ಬಲಿಯುವುದನ್ನು ಹಾಗೂ ಕರೆಯಲ್ಲಿನ ಕಾಳಿನ ಸಾಂಧ್ರತೆ, ಗಾತ್ರ, ರುಚಿಗಳನ್ನು ಅಧ್ಯಯನ ನಡೆಸಿ, ತಮ್ಮ ತೋಟಕ್ಕೂ ಭೇಟಿ ನೀಡಿ ಅಂತಿಮವಾಗಿ ಪ್ರಮಾಣಪತ್ರವನ್ನು ನೀಡಿದ್ದಾರೆ. ಇದು ಯಾವುದೇ ಪ್ರದೇಶ, ಹವಾಮಾನ, ಮಣ್ಣಿನ ಗುಣದಲ್ಲೂ ಬೆಳೆದು ಉತ್ತಮ ಬೆಳೆ ನೀಡಬಲ್ಲದು ಎಂದು ದೃಢೀಕರಿಸಿದ್ದಾರೆ. ಸಿಗಂಧಿನಿ ಶಾಶ್ವತವಾಗಿರುತ್ತದೆ. ಈ ಭಾಗದಲ್ಲಿ ಇದೇ ಥರದ ಹಲವಾರು ವಿಶಿಷ್ಠ ಮೂಲ ತಳಿಗಳಿದ್ದು ಅವು ಕೂಡ ರೈತರ ಹೆಸರಿನಲ್ಲಿ ಮಾನ್ಯತೆ ಪಡೆದುಕೊಳ್ಳುವಂತಾಗಬೇಕು ಎಂದರು. ತೋಟಗಾರಿಕಾ ಅಧಿಕಾರಿ ಮಹಾಬಲೇಶ್ವರ ಹಾಗೂ ಇನ್ನಿತರ ಸಿಬ್ಬಂದಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next