Advertisement

21ಕ್ಕೆ ರಾಜಭವನಕ್ಕೆ ಮುತ್ತಿಗೆ: ವಾಟಾಳ್‌

12:55 PM Oct 17, 2017 | Team Udayavani |

ಹುಬ್ಬಳ್ಳಿ: ಕಳೆದ ಎರಡು ವರ್ಷಗಳಿಂದ ಕಳಸಾ-ಬಂಡೂರಿ ಹೋರಾಟ ನಡೆಯುತ್ತಿದ್ದರೂ ಕೇಂದ್ರದಿಂದ ಯಾವುದೇ ಸ್ಪಂದನೆ ಇಲ್ಲ. ಈ ಕುರಿತು ಕೇಂದ್ರದ ಗಮನ ಸೆಳೆಯುವ ದೃಷ್ಟಿಯಿಂದ ಅ.21ರಂದು ರಾಜಭವನಕ್ಕೆ ಮುತ್ತಿಗೆ ಹಾಕುವ ಮೂಲಕ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್‌ ನಾಗರಾಜ ತಿಳಿಸಿದರು. 

Advertisement

ಸೋಮವಾರ ನಾಡೋಜ ಡಾ| ಪಾಟೀಲ ಪುಟ್ಟಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಅವರನ್ನು ಸನ್ಮಾನಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಮಹದಾಯಿ, ಕಳಸಾ-ಬಂಡೂರಿ ಬಗ್ಗೆ ಎರಡು ವರ್ಷಗಳಿಂದ ನಿರಂತರ ಹೋರಾಟ ನಡೆಯುತ್ತಿದೆ. ರಾಜ್ಯದ ಸಂಸದರು ಇಷ್ಟಾದರೂ ಪ್ರಧಾನಿ ಮಧ್ಯಸ್ಥಿಕೆಗೆ ಒತ್ತಡ ತರುವ ಪ್ರಾಮಾಣಿಕ ಕೆಲಸ ಮಾಡುತ್ತಿಲ್ಲ.

ಪ್ರಧಾನಿಯವರು ಸಹ ರಾಜ್ಯದ ಸಮಸ್ಯೆ ಕಡೆ ಗಮನ ನೀಡುತ್ತಿಲ್ಲ ಎಂದು ಆರೋಪಿಸಿದರು. ಮುಂದಿನ ದಿನಗಳಲ್ಲಿ ಕನ್ನಡ ಒಕ್ಕೂಟ ಹಾಗೂ ಒಕ್ಕೂಟದ ಮುಖಂಡರ ನೇತೃತ್ವದಲ್ಲಿ ರಾಜ್ಯಾದ್ಯಂತ ಎಲ್ಲ ಕನ್ನಡ ಪರ ಸಂಘಟನೆಗಳೊಂದಿಗೆ ಸೇರಿಕೊಂಡು ತೀವ್ರತರ ಹೋರಾಟಕ್ಕೆ ಸಿದ್ಧರಾಗುತ್ತಿದ್ದೇವೆ ಎಂದರು. ಇನ್ನು ರಾಜ್ಯ ಸರಕಾರ ವಿಧಾನಸೌಧ ವಜ್ರ ಮಹೋತ್ಸವ ಮಾಡಲು ಮುಂದಾಗಿದೆ.

ಸದ್ಯಕ್ಕೆ ಅದರ ಅವಶ್ಯಕತೆ ಇಲ್ಲ. ಬರ-ಅತಿವೃಷ್ಟಿಯಿಂದ ರೈತರು  ಕಂಗಾಲಾಗಿದ್ದು, ಇಂತಹ ಸಂದರ್ಭದಲ್ಲಿ ವಿಧಾನಸೌಧ ವಜ್ರಮಹೋತ್ಸವ ಹೆಸರಲ್ಲಿ ಶಾಸಕರಿಗೆ ಚಿನ್ನ, ಬೆಳ್ಳಿ ನಾಣ್ಯ ನೀಡುವ ವಿಚಾರ ಗೌರವ ತರುವಂತಹದ್ದಲ್ಲ. ಇದೊಂದು ನಾಚಿಕೆಗೇಡಿನ ಸಂಗತಿ. ತರಾತುರಿಯಲ್ಲಿ ಮಹೋತ್ಸವ ಕೈಗೊಳ್ಳುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next