ಮಳವಳ್ಳಿ: ವಿಶ್ವೇಶ್ವರಯ್ಯ ನಾಲೆಯ ಕೊನೆಯ ಭಾಗದ ಬೆಳೆಗಳಿಗೆ ನೀರು ಹರಿಸಿ ಬೆಳೆಗಳನ್ನು ರಕ್ಷಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಸದಸ್ಯರು ತಾಲೂಕಿನ ಕಾಗೇಪುರ ಕಾವೇರಿ ನೀರಾವರಿ ನಿಗಮದ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಪುಟ್ಟಮಾದು ಮಾತನಾಡಿ, ಕೆಆರ್‌ಎಸ್ ನೀರು 2 ತಾಲೂಕಿಗೆ ಸೀಮಿತವಾಗಿದೆ. ಕಾಲುವೆಗಳಿಗೆ ನೀರು ಬಿಟ್ಟರೂ ಕೊನೆಯ ಭಾಗಕ್ಕೆ ನೀರು ತಲುಪುತ್ತಿಲ್ಲ. ಕಟ್ಟು ನೀರಿನ ಪದ್ಧತಿ ನೀರು ಕೊಡುತ್ತೇವೆಂದು ಹೇಳಿದರೂ ಸಮರ್ಪಕವಾಗಿ ನೀರು ಬಿಡದ ಕಾರಣ ಬೆಳೆದಿದ್ದ ಬೆಳೆಗಳು ಒಣಗುತ್ತಿವೆ. ಕಾಲುವೆಗಳಲ್ಲಿ ಹೂಳು ತುಂಬಿರುವ ಪರಿಣಾಮ ಕೊನೆಯ ಭಾಗಕ್ಕೆ ನೀರು ತಲುಪದಿ ದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಜಿದ್ದಿನ ರಾಜಕೀಯ: ಇತ್ತೀಚಿನ ದಿನಗಳಲ್ಲಿ ರಾಜಕೀಯದ ಜಿದ್ದಿನಿಂದಾಗಿ ರೈತರನ್ನೇ ನಾಶ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಚುನಾಯಿತ ಜನಪ್ರತಿನಿಧಿಗಳು ರೈತರ ಹೆಸರನ್ನು ಹೇಳಿಕೊಂಡು ಅಧಿಕಾರ ಹಿಡಿಯುತ್ತಾರೆ. ಆದರೆ ರೈತರ ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ, ಇಲ್ಲಿನ ರೈತರ ಕೃಷಿಗೆ ನೀರು ಇಲ್ಲದಿದ್ದರೂ ಬೆಂಗಳೂರು ಜನತೆಗೆ ಕುಡಿಯುವ ನೀರನ್ನು ಕೊಡಬೇಕೆಂದು ಹೇಳುತ್ತಾರೆ, ಬೆಂಗಳೂರಿನಲ್ಲಿ ನೀರನ್ನು ವ್ಯಯ ಮಾಡುತ್ತಿದ್ದು, ಬಳಸಿದ ನೀರನ್ನು ಮರುಬಳಕೆ ಮಾಡುವುದರ ಮೂಲಕ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕೆಂದು ಒತ್ತಾಯಿಸಿದರು.
ಕೆಲಸ ಕೊಟ್ಟು ವಲಸೆ ತಪ್ಪಿಸಿ: ಮುಂದಿನ ದಿನಗಳಲ್ಲಿ ಕೊನೆ ಭಾಗದ ಅಚ್ಚುಕಟ್ಟು ಪ್ರದೇಶದಿಂದ ನೀರು ಹರಿಸಲು ಪ್ರಾರಂಭಿಸ ಬೇಕು, ಮೂರು ತಿಂಗಳಲ್ಲಿ ಒಣಗಿರುವ ಬೆಳೆಗಳಿಗೆ ಪರಿಹಾರ ನೀಡಬೇಕು, ರಾಜಕೀಯ ಪ್ರವೇಶಕ್ಕೆ ಅವಕಾಶ ಕೊಡದೇ ರೈತ ಕೂಲಿಕಾರರನ್ನು ರಕ್ಷಿಸುವ ದೃಷ್ಟಿಯಿಂದ ನೀರು ನೀಡಬೇಕು, ಪಿಕಪ್ ನಾಲೆಗಳು, ಉಪ ಕಾಲುವೆಗಳು, ನೀರಕ್ಕಲುಗಳು ತೋಳ್ಗಾಲುವೆ ಗಳಲ್ಲಿ ಬೆಳೆದಿರುವ ಗಿಡಗಳನ್ನು ಮತ್ತು ತುಂಬಿರುವ ಮಣ್ಣನ್ನು ಉದ್ಯೋಗ ಖಾತ್ರಿ ಕಾಯ್ದೆಯಡಿ ತೆಗೆಸುವುದರ ಮೂಲ ಉದ್ಯೋಗ ಕಲ್ಪಿಸಿ ವಲಸೆ ತಪ್ಪಿಸಬೇಕೆಂದು ಒತ್ತಾಯಿಸಿದರು.
ನೀರು ಅನಿವಾರ್ಯ: ಸಿಐಟಿಯೂ ಮುಖಂಡ ಟಿ.ಎಲ್ ಕೃಷ್ಣೇಗೌಡ ಮಾತನಾಡಿ, ದಿವಂಗತ ಕೆ.ನಾಗೇಗೌಡರು ನೀರಾವರಿ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಪೈಪ್ ಮೂಲಕ ಕೊನೆಯ ಭಾಗಕ್ಕೆ ಹರಿಸುವ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದ್ದರು. ಆಯೋಜನೆ ಕಾರ್ಯರೂಪಕ್ಕೆ ಬರುವಂತೆ ಅಧಿಕಾರಿಗಳು ಗಮನಹರಿಸಬೇಕು. ಮಳವಳ್ಳಿ, ಮದ್ದೂರು ತಾಲೂಕಿಗೆ ನೀರು ತಲುಪುವಷ್ಟರಲ್ಲಿ ಶ್ರೀರಂಗಪಟ್ಟಣ, ಪಾಂಡವಪುರ, ಮಂಡ್ಯ ತಾಲೂಕಿನ ರೈತರು ಮೂರು ಸಲ ನೀರನ್ನು ಹಾಯಿಸಿಕೊಂಡಿರುತ್ತಾರೆ. ಇಲ್ಲಿನ ಜನರು ಎಚ್ಚೆತ್ತುಕೊಂಡು ಪ್ರತಿಭಟನೆಯ ಮೂಲಕ ನೀರನ್ನು ಪಡೆಯುವ ಅನಿವಾರ್ಯತೆ ಎದುರಾಗಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ನಾಗರಾಜು, ಬಸವರಾಜು, ಶಿವಮಲ್ಲಯ್ಯ, ಹನುಮೇಶ್, ಪಾಪಣ್ಣ, ಪ್ರಸನ್ನ, ದೊಡ್ಡಮರೀ ಗೌಡ, ಆನಂದ್ ಇತರರು ಉಪಸ್ಥಿತರಿದ್ದರು.