Advertisement

ರೈತರಿಂದ ವಿದ್ಯುತ್‌ ಕಚೇರಿಗೆ ಮುತ್ತಿಗೆ-ಆಕ್ರೋಶ

01:20 PM Mar 18, 2022 | Team Udayavani |

ಅಫಜಲಪುರ: ಜಮೀನುಗಳಿಗೆ ದಿನದ ಏಳು ಗಂಟೆ ವರೆಗೆ ವಿದ್ಯುತ್‌ ಪೂರೈಸುವಂತೆ ಸರ್ಕಾರಕ್ಕೆ ಕೋರಿದರೂ ಆನೂರ ಗ್ರಾಮದ ಜಮೀನುಗಳುಳಿಗೆ ಕೆಲ ದಿನಗಳಿಂದ ಸರಿಯಾಗಿ ವಿದ್ಯುತ್‌ ಪೂರೈಕೆಯಾಗುತ್ತಿಲ್ಲ ಎಂದು ಗ್ರಾಮದ ರೈತರು ರೇವೂರ ವಿದ್ಯುತ್‌ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ರೈತ ಮುಖಂಡ ರೇವಣಸಿದ್ಧ ಬಳೂಂಡಗಿ, ಜಗದೀಶ ಹಿರೇಮಠ, ರೇವಣಸಿದ್ಧ ಕಲಶೆಟ್ಟಿ ಮಾತನಾಡಿ ತಾಲೂಕಿನ ಆನೂರ ಗ್ರಾಮಕ್ಕೆ ನಿರಂತರವಾಗಿ ವಿದ್ಯುತ್‌ ವ್ಯತ್ಯಯವಾಗುತ್ತಿದೆ. ಈ ಕುರಿತು ಸರಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಅನೇಕ ಬಾರಿ ಮಾತನಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸದ್ಯ ಬೇಸಿಗೆ ಆವರಿಸಿದ್ದರಿಂದ ನೀರಾವರಿ ಮಾಡಿಕೊಂಡಿರುವ ರೈತರಿಗೆ ಆಂತಕ ಶುರುವಾಗಿದೆ. ಇಂತದ್ದರಲ್ಲಿ ಸಮರ್ಪಕ ವಿದ್ಯುತ್‌ ಸರಬರಾಜು ಆಗುತ್ತಿಲ್ಲ. ಇದರಿಂದಾಗಿ ಬೆಳೆಗಳು ಒಣಗುವ ಹಂತಕ್ಕೆ ತಲುಪಿವೆ. ಇದೇ ರೀತಿ ಮುಂದುವರಿದರೆ ರೈತ ಮತ್ತಷ್ಟು ಸಾಲದ ಹೊರೆ ಹೊರಬೇಕಾಗುತ್ತದೆ. ಹೀಗೆ ನಿರ್ಲಕ್ಷಿಸಿದರೆ ಕುಟುಂಬದೊಂದಿಗೆ ಕಚೇರಿ ಎದುರು ಧರಣಿ ಕುಳಿತುಕೊಳ್ಳಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಪ್ರಗತಿಪರ ರೈತ ಶಿವಕುಮಾರ ಬಳೂಂಡಗಿ ಮಾತನಾಡಿ, ಜಮೀನುಗಳಿಗೆ ವಿದ್ಯುತ್‌ ಪೂರೈಸುವಲ್ಲಿ ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ. ಇದರಿಂದ ನೀರಾವರಿ ಅವಲಂಬಿತ ಬೆಳೆಗಳು ಸಂಪೂರ್ಣ ಹಾಳಾಗುತ್ತಿವೆ ಎಂದರು.

ರೇವೂರ ಜೇಸ್ಕಾಂ ಕಚೇರಿ ಎಸ್‌ಒ ದೇವಿಂದ್ರಪ್ಪ ಮಾತನಾಡಿ, ಆನೂರ ಗ್ರಾಮಕ್ಕೆ ಎರಡು ಟಿಸಿ ಮೂಲಕ ವಿದ್ಯುತ್‌ ಪೂರೈಸಲಾಗುತ್ತಿದೆ. ಇದರಲ್ಲಿ ಒಂದು ಟಿಸಿ ಕೆಟ್ಟಿದ್ದರಿಂದ ಈ ಸಮಸ್ಯೆಯಾಗಿದೆ. ನಾಲ್ಕೈದು ದಿನಗಳಲ್ಲಿ ಕೆಟ್ಟಿರುವ ಟಿಸಿ ಸರಿಪಡಿಸಿ ಸಮರ್ಪಕ ವಿದ್ಯುತ್‌ ಪೂರೈಸಲಾಗುವುದು ಎಂದು ಭರವಸೆ ನೀಡಿದರು.

Advertisement

ರೈತ ಮುಖಂಡರಾದ ರೇವಣಸಿದ್ಧ ಕಲಶೆಟ್ಟಿ, ಬಾಬು ಸೀತನೂರ, ಭೀಮರಾಯ ಕೆರಮಗಿ, ಹೊನ್ನಪ್ಪ ಪೂಜಾರಿ, ಗುರುದೇವ ಜೀರೊಳಿ, ಸುನೀಲ ಜೀರೊಳಿ, ಹಣಮಂತ್ರಾಯ ನವದಗಿ, ಶಿವಪುತ್ರ ಭೂಸನೂರ ಹೂವಪ್ಪ ಪೂಜಾರಿ, ಸಿದ್ದು ಕೆರಮಗಿ, ಆಕಾಶ ಹಳ್ಳಾಳ, ಯಶವಂತ ಉಮ್ಮನಗೋಳ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next