Advertisement

ಕರ್ತಾರ್‌ಪುರ: ನಾ ಬರುವೆನೆಂದು ಪಾಕಿಗೆ ಭರವಸೆ ನೀಡಿದ್ದೆ : ಸಿಧು

05:19 PM Nov 30, 2018 | Team Udayavani |

ಹೊಸದಿಲ್ಲಿ : ”ಕರ್ತಾರ್‌ಪುರ ಕಾರಿಡಾರ್‌ ಶಿಲಾನ್ಯಾಸ ಕಾರ್ಯಕ್ರಮಕ್ಕೆ ನಾನು ಬರುವೆನೆಂದು ಪಾಕಿಸ್ಥಾನಕ್ಕೆ  ಭರವಸೆ ನೀಡಿದ್ದೆ; ಹಾಗಾಗಿ ನಾನು ಹೋಗಲೇ ಬೇಕಾಯಿತು. ನಾನಿದನ್ನು ಪಂಜಾಬ್‌ ಮುಖ್ಯಮಂತ್ರಿಗೂ ಮೊದಲೇ ತಿಳಿಸಿದ್ದೆ” ಎಂದು ಪಂಜಾಬ್‌ ಸಚಿವ ನವಜೋತ್‌ ಸಿಂಗ್‌ ಸಿಧು ತಾವು ಪಾಕಿಸ್ಥಾನದಲ್ಲಾದ ಕರ್ತಾರ್‌ಪುರ ಕಾರಿಡಾರ್‌ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಹೋದುದನ್ನು ಸಮರ್ಥಿಸಿಕೊಂಡಿದ್ದಾರೆ.

Advertisement

”ಪಾಕಿಸ್ಥಾನದ ಕರ್ತಾರ್‌ಪುರ ಕಾರ್ಯಕ್ರಮಕ್ಕೆ ಹೋಗುವಂತೆ ನನಗೆ ನನ್ನ ಕಾಂಗ್ರೆಸ್‌ ಪಕ್ಷದ ಕೇಂದ್ರ ನಾಯಕತ್ವ ಮತ್ತು ಕನಿಷ್ಠ 20 ಕಾಂಗ್ರೆಸ್‌ ನಾಯಕರು ಕೇಳಿಕೊಂಡಿದ್ದರು” ಎಂದು ಸಿಧು ಎಎನ್‌ಐ ಸುದ್ದಿ ಸಂಸ್ಥೆ ಜತೆಗೆ ಮಾತನಾಡುತ್ತಾ ಹೇಳಿದರು. 

”ಸಿಧು ಅವರು ಪಾಕಿಸ್ಥಾನಕ್ಕೆ ಖಾಸಗಿ ನೆಲೆಯಲ್ಲಿ ಹೋಗಿದ್ದಾರೆ. ಹೋಗುವ ಮೊದಲು ಅವರು ನನಗೆ ತಿಳಿಸಿದ್ದಾರೆ; ಆದರೂ ನಾನು ಅವರಿಗೆ ತನ್ನ ನಿರ್ಧಾರದ ಬಗ್ಗೆ ಪುನರಾಲೋಚಿಸುವಂತೆ ಹೇಳಿದ್ದೆ” ಎಂದು ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಹೇಳಿದ್ದರೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಕರ್ತಾರ್‌ಪುರ ಕಾರ್ಯಕ್ರಮಕ್ಕೆ ಹೋಗುವ ಮೂಲಕ ಸಿಧು ಪಾಕಿಸ್ಥಾನದಲ್ಲಿ ಜನಪ್ರಿಯ ವ್ಯಕ್ತಿಯಾಗಿದ್ದಾರೆ ಎಂಬುದನ್ನು ಸ್ವತಃ ಕೇಂದ್ರ ಸಚಿವೆ ಹರ್‌ಸಿಮ್ರತ್‌ ಕೌರ್‌ ಅವರೇ ಒಪ್ಪಿಕೊಂಡಿದ್ದರು. 

ಪಾಕಿಸ್ಥಾನದಲ್ಲಿ ಚುನಾವಣೆಗೆ ನಿಂತರೆ ಸಿಧು ಗೆಲ್ಲುವುದು ಖಚಿತ ಎಂದು ಸ್ವತಃ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌  ಹೇಳಿದ್ದರು. “ಸಿಧು ಪ್ರಧಾನಿಯಾಗುವ ತನಕ ಭಾರತ , ಕಾಶ್ಮೀರ ಸಮಸ್ಯೆ ನಿವಾರಣೆಗೆ ಕಾಯಬಾರದು” ಎಂದು ಹೇಳುವ ಮೂಲಕ ಇಮ್ರಾನ್‌ ಮೋದಿ ಸರಕಾರಕ್ಕೆ ಟಾಂಗ್‌ ನೀಡಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next