ಪುಣೆ: ಇತ್ತೀಚೆಗಷ್ಟೇ ಹತ್ಯೆಗೀಡಾಗಿದ್ದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಲ್ಲಿ ಒಬ್ಬನಾದ ಶೂಟರ್ ಸಂತೋಷ್ ಜಾಧವ್ ಎಂಬಾತನನ್ನು ಪುಣೆಯ ಗ್ರಾಮಾಂತರ ಕ್ರೈಂ ಬ್ರ್ಯಾಂಚ್ ಪೊಲೀಸರು ಬಂಧಿಸಿರುವುದಾಗಿ ಸೋಮವಾರ (ಜೂನ್ 13) ತಿಳಿಸಿದ್ದಾರೆ.
ಇದನ್ನೂ ಓದಿ:ಖಾಸಗೀಕರಣದತ್ತ ಲಲಿತ್‌ಮಹಲ್ ಹೋಟೆಲ್?; 14ರಂದು ನಡೆಯುವ ಸಂಪುಟ ಸಭೆಯಲ್ಲಿ ನಿರ್ಣಯ ಸಾಧ್ಯತೆ
ವರದಿಯ ಪ್ರಕಾರ, ಪುಣೆ ಗ್ರಾಮಾಂತರ ಪೊಲೀಸರು ಶೂಟರ್ ಸಂತೋಷ್ ಜಾಧವ್ ನನ್ನು ಗುಜರಾತ್ ನಲ್ಲಿ ಬಂಧಿಸಿದ್ದರು. ನಂತರ ಭಾನುವಾರ ತಡರಾತ್ರಿ ಮ್ಯಾಜಿಸ್ಟ್ರೇಟ್ ಮುಂದೆ ಜಾಧವ್ ನನ್ನು ಹಾಜರುಪಡಿಸಿದ್ದು, ಜೂನ್ 20ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿ ಆದೇಶ ನೀಡಿರುವುದಾಗಿ ತಿಳಿಸಿದೆ.
ಮೇ 29ರಂದು ಪಂಜಾಬ್ ನ ಮಾನ್ಸಾ ಜಿಲ್ಲೆಯಲ್ಲಿ ಹಾಡಹಗಲೇ ಗಾಯಕ ಸಿಧು ಮೂಸೆವಾಲಾ ಅವರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಶಂಕಿತ ಪ್ರಮುಖ ಆರೋಪಿಯಾದ ಜಾಧವ್ ಸಹಚರ ನವ್ ನಾಥ್ ಸೂರ್ಯವಂಶಿಯನ್ನೂ ಪುಣೆ ಪೊಲೀಸರು ಬಂಧಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೌರವ್ ಮಹಾಕಾಲ್ ಎಂಬಾತ ವಿಚಾರಣೆ ವೇಳೆ ನೀಡಿರುವ ಮಾಹಿತಿ ಆಧಾರದ ಮೇಲೆ ಜಾಧವ್ ಮತ್ತು ಸೂರ್ಯವಂಶಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧನದ ಕುರಿತು ಇಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕುಲ್ವಂತ್ ಕುಮಾರ್ ಸಾರಂಗಲ್ ಮಾಧ್ಯಮಗಳಿಗೆ ಮಾಹಿತಿ ನೀಡುವ ನಿರೀಕ್ಷೆ ಇದೆ ಎಂದು ಪಿಟಿಐ ವರದಿ ಮಾಡಿದೆ.
ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ನ ಸದಸ್ಯನಾಗಿರುವ ಜಾಧವ್ ನನ್ನು 2021ರಲ್ಲಿ ಪುಣೆಯ ಮಂಚಾರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಕಳೆದ ಒಂದು ವರ್ಷದಿಂದ ತಲೆಮರೆಯಿಸಿಕೊಂಡಿದ್ದ ಜಾಧವ್ ಮತ್ತು ಸೂರ್ಯವಂಶಿ ಸಿಧು ಮೂಸೆವಾಲಾ ಕೊಲೆ ಪ್ರಕರಣದಲ್ಲೂ ಶಾಮೀಲಾಗಿರುವುದಾಗಿ ಶಂಕಿಸಲಾಗಿದೆ ಎಂದು ಪಿಟಿಐ ವರದಿ ತಿಳಿಸಿದೆ.