ಸಿಂಧನೂರು: ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸುವಾಗ ಮೃತಪಟ್ಟ ಕೆ.ಬಸಾಪುರ ಗ್ರಾಮದ ಕೂಲಿಕಾರ್ಮಿಕ ಶಶಿಧರ ಕುಟುಂಬಕ್ಕೆ 10 ಲಕ್ಷ ರೂ.ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರೈತ ಸಂಘ ಹಾಗೂ ಕ್ರಾಂತಿಕಾರಿ ಯುವಜನ ರಂಗ ತಾಲೂಕು ಘಟಕ ಜಂಟಿಯಾಗಿ ಶುಕ್ರವಾರ ನಗರದ ಮಿನಿ ವಿಧಾನಸೌಧ ಮುಂದೆ ಪ್ರತಿಭಟಿಸಲಾಯಿತು.
ಕೆರೆಯ ಮಣ್ಣು ತೆಗೆಯುತ್ತಿದ್ದಾಗ ಮಣ್ಣು ಕುಸಿದು ಏ.25 ರಂದು ಮೃತಪಟ್ಟಿದ್ದು, ಈ ಘಟನೆಗೆ ಅಧಿಕಾರಿಗಳ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯವೇ ಕಾರಣವಾಗಿದೆ. ಸ್ಥಳೀಯವಾಗಿಯೇ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಬೇಕೆಂಬ ನಿಯಮವಿದ್ದರೂ, ಗುಂಡಾ ಗ್ರಾಪಂ ವ್ಯಾಪ್ತಿಯ ಗುಡಿಹಾಳ ಗ್ರಾಮದ ಕೆರೆಯ ಮಣ್ಣು ತೆಗೆಯಲು ಕೂಲಿಕಾರರನ್ನು ನಿಯೋಜಿಸುವ ಮೂಲಕ ನಿಯಮ ಉಲ್ಲಂಘಿಸಿದ್ದಾರೆ. ಬರದ ಬೇಗೆಯಿಂದ ಕಂಗಾಲಾಗಿರುವ ಜನರು ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದು, ಸಕಾಲಕ್ಕೆ ಉದ್ಯೋಗ ದೊರಕಿಸಿ ಕೊಡಬೇಕಾದ ಗ್ರಾಪಂ ಅಧಿಕಾರಿಗಳು ಬೇಜವಾಬ್ದಾರಿ ವಹಿಸಿರುವುದಲ್ಲದೆ, ಅಪಾಯಕಾರಿ ಸ್ಥಳದಲ್ಲಿ ಕೆಲಸ ನಿರ್ವಹಿಸುವಾಗ ಕನಿಷ್ಠ ಮುನ್ನೆಚ್ಚರಿಕೆ ಕ್ರಮ ಅನುಸರಿಸದಿರುವುದರಿಂದ ಕಾರ್ಮಿಕ ಬಲಿಯಾಗಿದ್ದಾರೆ ಎಂದು ಆರ್‌ವೈಎಫ್ ರಾಜ್ಯ ಘಟಕದ ಸಂಚಾಲಕ ನಾಗರಾಜ ಪೂಜಾರ ಆಪಾದಿಸಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕರಿಗೆ ಕುಡಿವ ನೀರು, ನೆರಳಿನ ವ್ಯವಸ್ಥೆ, ಅನಾರೋಗ್ಯ ಉಂಟಾದರೆ ಚಿಕಿತ್ಸೆ ಇನ್ನಿತರೆ ಅನುಕೂಲ ಕಲ್ಪಿಸಬೇಕೆನ್ನುವ ನಿಯಮಗಳಿದ್ದರೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದು, ಉದ್ಯೋಗ ಖಾತ್ರಿ ಯೋಜನೆಗೆ ಒಂದೂರಿನಿಂದ ಇನ್ನೊಂದು ಊರಿಗೆ ಕುರಿಗಳನ್ನು ಸಾಗಿಸುವಂತೆ ಕೂಲಿ ಕಾರ್ಮಿಕರನ್ನು ಟ್ರ್ಯಾಕ್ಟರ್, ಟಂಟಂ ಸೇರಿದಂತೆ ಖಾಸಗಿ ವಾಹನಗಳಲ್ಲಿ ಸಾಗಿಸಲಾಗುತ್ತಿದೆ. ಇದರಿಂದಾಗಿ ದಿನದಿಂದ ದಿನಕ್ಕೆ ಅವಘಡಗಳು ಹೆಚ್ಚುತ್ತಲೇ ಇವೆ. ಇದರಿಂದಾಗಿಯೇ ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡರ ಸ್ವಗ್ರಾಮದ ಬಳಿ ಉದ್ಯೋಗ ಖಾತ್ರಿ ಕೆಲಸ ಮುಗಿಸಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿ ಮೂವರು ಕಾರ್ಮಿಕರು ಮೃತಪಟ್ಟಿದ್ದರು. ಇದಲ್ಲದೆ ಜಿಲ್ಲೆಯ ಯದ್ಲಾಪುರನಲ್ಲಿ ಬುಡ್ಡೆ ಯಲ್ಲಪ್ಪ, ಗಾಣದಾಳ ಗ್ರಾಮದ ದಾವೀದಪ್ಪ ಬಿಸಿಲಿಗೆ ಬಳಸಿ ಕುಸಿದು ಬಿದ್ದು ಸಾವನ್ನಪ್ಪಿದ್ದರು. ಇಲ್ಲಿಯವರೆಗೆ ಐವರು ಕೂಲಿ ಕಾರ್ಮಿಕರು ಮೃತಪಟ್ಟಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಜಿಲ್ಲಾಡಳಿತವಾಗಲಿ ಎಚ್ಚೆತ್ತುಕೊಳ್ಳದಿರುವುದು ಬೇಜವಾಬ್ದಾರಿ ಪರಮಾವಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಗುಳೆ ಸಮಸ್ಯೆ ಪರಿಹರಿಸಲು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ಕೂಡಲೇ ಸಭೆ ಕರೆದು ಯೋಜನೆ ಅನುಷ್ಠಾನಕ್ಕೆ ಮುಂದಾಗಬೇಕು. ಜಿಲ್ಲಾದ್ಯಂತ ಜಾನುವಾರುಗಳಿಗೆ ಮೇವು ಹಾಗೂ ನೀರಿನ ಅಭಾವ ಎದುರಾಗಿದ್ದು, ಕೂಡಲೇ ಸೌಕರ್ಯ ಒದಗಿಸಬೇಕು. ಒಂದು ವೇಳೆ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದೆ ಆದಲ್ಲಿ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಟಿಯುಸಿಐ ಉಪಾಧ್ಯಕ್ಷ ಬಿ.ಎನ್.ಯರದಿಹಾಳ, ಕೆಆರ್‌ಎಸ್ ತಾಲೂಕು ಘಟಕದ ಅಧ್ಯಕ್ಷ ರಮೇಶ ಪಾಟೀಲ ಬೇರಿಗಿ, ಕಾರ್ಯದರ್ಶಿ ಬಸವರಾಜ ಬೆಳಗುರ್ಕಿ, ಆರ್‌ವೈಎಫ್ ಸಂಚಾಲಕರಾದ ಕಿರಣಕುಮಾರ, ಆರ್.ಎಚ್.ಕಲಮಂಗಿ, ಮುಖಂಡರಾದ ಬಸಪ್ಪ ಕಡಬೂರು, ಗೋಪಾಲರಾವ್, ಮಲ್ಲಿಕಾರ್ಜುನ ಹೂಗಾರ, ದ್ಯಾವಣ್ಣ ನಾಯಕ, ಮಹಾದೇವ ಅಮರಾಪುರ, ಮಲ್ಲಿಕಾರ್ಜುನ, ಹನುಮಂತ ಚಿಕ್ಕಬೇರಿಗಿ, ಗಂಗರಾಜ್, ಹುಸೇನಪ್ಪ ತಿಡಿಗೋಳ, ನಾಗರಾಜ ತುರ್ವಿಹಾಳ ಇದ್ದರು.