Advertisement

ಉಪ್ಪಿನಕಾಯಿಯ ಅತಿಯಾದ ಬಳಕೆ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ…

04:19 PM Sep 19, 2022 | ಕಾವ್ಯಶ್ರೀ |

ಎಷ್ಟೇ ದೊಡ್ಡ ಸಮಾರಂಭದ ಊಟ ಆಗಿರಲಿ ಎಲೆ ಅಥವಾ ತಟ್ಟೆಗೆ ಪ್ರಥಮವಾಗಿ ಉಪ್ಪಿನಕಾಯಿ ಬಡಿಸುವುದು ಸಾಮಾನ್ಯ. ಇದು ಭಾರತೀಯರ ಆಹಾರದಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಉಪ್ಪಿನಕಾಯಿ ಇಲ್ಲದ ಊಟವಿಲ್ಲ ಎನ್ನುವಷ್ಟು ಮನೆಮಾತಾಗಿದೆ. ಕೆಲವರಿಗಂತೂ ಊಟಕ್ಕೆ ಉಪ್ಪಿನಕಾಯಿ ಬೇಕೆ ಬೇಕು.

Advertisement

ಊಟಕ್ಕೆ ಉಪ್ಪಿನಕಾಯಿ ಎಂಬ ಮಾತು ಕೇಳಿದ್ದೇವೆ. ಒಂದು ವೇಳೆ ಅಡುಗೆ ರುಚಿಯಿಲ್ಲದಿದ್ದರೂ ಅದರೊಂದಿಗೆ ಉಪ್ಪಿನಕಾಯಿ ಇದ್ದರೆ ರುಚಿ ಹೆಚ್ಚಾಗುತ್ತದೆ ಎಂಬುದು ಹೆಚ್ಚಿನವರ ಅಭಿಪ್ರಾಯ. ಉಪ್ಪಿನಕಾಯಿ ಜ್ಞಾಪಿಸಿಕೊಂಡರೆ ಅಥವಾ ಉಪ್ಪಿನಕಾಯಿ ನೋಡುತ್ತಿದ್ದರೆ ಬಾಯಿಯಲ್ಲಿ ನೀರು ಬರುತ್ತದೆ. ಉಪ್ಪಿನಕಾಯಿ ರುಚಿ ಅಷ್ಟರ ಮಟ್ಟಿಗೆ ಇಷ್ಟವಾಗುತ್ತದೆ. ಹಾಗೆಂದುಕೊಂಡು ಉಪ್ಪಿನಕಾಯಿಯನ್ನು ಅತೀಯಾಗಿ ಸೇವಿಸಿದರೆ ಆರೋಗ್ಯ ಸಮಸ್ಯೆ ಕಾಡಬಹುದು.

ಪ್ರತಿದಿನ ಊಟದ ಜೊತೆ ಉಪ್ಪಿನಕಾಯಿ ಸೇವಿಸಿದರೆ ಆರೋಗ್ಯದಲ್ಲಿ ಒಂದಷ್ಟು ಸಮಸ್ಯೆ ಕಾಡಬಹುದು. ಅದರಲ್ಲೂ ಪುರುಷರ ಆರೋಗ್ಯಕ್ಕೆ ಅತಿಯಾದ ಉಪ್ಪಿನ ಕಾಯಿ ಸೇವನೆ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು.

ಕೆಲವರಿಗೆ ಬೆಳಗಿನ ತಿಂಡಿ, ಮಧ್ಯಾಹ್ನ, ರಾತ್ರಿ ಊಟದೊಂದಿಗೆ ಉಪ್ಪಿನಕಾಯಿ ಇಲ್ಲದಿದ್ದರೆ ಊಟವೇ ಸೇರುವುದಿಲ್ಲ. ಇನ್ನೂ ಕೆಲವರಿಗೆ ಊಟದ ಜೊತೆ ಮಾತ್ರವಲ್ಲ ಒಂದು ಪ್ಲೇಟ್‌ಗೆ ಉಪ್ಪಿನಕಾಯಿ ಹಾಕಿಕೊಂಡು ಆಗ್ಗಾಗ್ಗೆ ಚಪ್ಪರಿಸುವ ಅಭ್ಯಾಸವೂ ಇರುತ್ತದೆ. ಆದರೆ ಅತೀಯಾದ ಉಪ್ಪಿನಕಾಯಿ ಬಳಕೆಯಿಂದಾಗುವ ಅಪಾಯದ ಬಗ್ಗೆಯೂ ಸ್ವಲ್ಪ ತಿಳಿದುಕೊಳ್ಳಿ.

ಅತಿಯಾದ ಉಪ್ಪಿನಾಂಶ

Advertisement

ಎಲ್ಲರಿಗೂ ಗೊತ್ತಿರುವ ಹಾಗೆ ಉಪ್ಪಿನಕಾಯಿಯಲ್ಲಿ ಅತಿ ಹೆಚ್ಚು ಉಪ್ಪಿನ ಅಂಶವಿರುತ್ತದೆ. ಉಪ್ಪಿನಕಾಯಿ ತಯಾರು ಮಾಡುವಾಗ ಸಾಕಷ್ಟು ಪ್ರಮಾಣದಲ್ಲಿ ಉಪ್ಪು ಹಾಕದೇ ಇದ್ದರೆ ಅದು ಬಹಳ ಬೇಗನೆ ಕೆಟ್ಟು ಹೋಗುತ್ತದೆ. ಇದು ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಆಹಾರ ಸೇವನೆಯಲ್ಲಿ ಉಪ್ಪಿನಾಂಶ 5 ಗ್ರಾಂ ಅಥವಾ ಒಂದು ಟೀ ಚಮಚವಾಗಿದ್ದರೆ ಉತ್ತಮ ಎಂಬುದು ವಿಶ್ವ ಆರೋಗ್ಯ ಸಂಸ್ಥೆಯ ಸಲಹೆ.

ಆಸಿಡಿಟಿ ಸಮಸ್ಯೆ

ಖಾಲಿ ಹೊಟ್ಟೆಯಲ್ಲಿ ಊಟಕ್ಕಿಂತ ಮೊದಲೇ ರುಚಿಯಾಗಿದೆ ಎಂದು ಉಪ್ಪಿನಕಾಯಿ ತಿಂದರೆ ಗ್ಯಾಸ್ಟ್ರಿಕ್‌, ಆಸಿಡಿಟಿ ಸಮಸ್ಯೆ ಕಾಡುತ್ತದೆ.  ಇದರಲ್ಲಿನ ಉಪ್ಪು, ಎಣ್ಣೆ ಹಾಗೂ ಖಾರದ ಅಂಶ ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗುತ್ತದೆ.

ಅಲ್ಸರ್‌ ಸಮಸ್ಯೆ

ಉಪ್ಪಿನಕಾಯಿಯಲ್ಲಿ ಉಪ್ಪು, ಖಾರದ ಜೊತೆಗೆ ಇತರ ಪ್ರಿಸರ್ವೇಟಿವ್‌ಗಳನ್ನು ಬಳಸಲಾಗುತ್ತದೆ. ಇದು ಆರೋಗ್ಯಕ್ಕೆ ಹೆಚ್ಚು ಹಾನಿಕಾರಕ. ಇದರಿಂದಾಗಿ ಮುಂದಿನ ದಿನಗಳಲ್ಲಿ ಹೊಟ್ಟೆಯಲ್ಲಿ ಹುಣ್ಣಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಉಪ್ಪಿನಕಾಯಿ ಹೆಚ್ಚಾಗಿ ತಿನ್ನಬಾರದು.

ಕ್ಯಾನ್ಸರ್‌ ಅಪಾಯ ಹೆಚ್ಚು

ಉಪ್ಪಿನಕಾಯಿ ಸೇವನೆಯು ಅನ್ನನಾಳದ ಕ್ಯಾನ್ಸರ್ ಬರುವ ಸಾಧ್ಯತೆ ದ್ವಿಗುಣಗೊಳಿಸುತ್ತದೆ ಎನ್ನುತ್ತವೆ ಅಧ್ಯಯನಗಳು. ಹೀಗಾಗಿ ಆದಷ್ಟು ಉಪ್ಪಿನಕಾಯಿ ಸೇವನೆ ಕಡಿಮೆ ಇದ್ದರೆ ಒಳ್ಳೆಯದು. ಅದರಲ್ಲೂ ಮಾರುಕಟ್ಟಿಯಲ್ಲಿ ಸಿಗುವ ಕೃತಕ ಬಣ್ಣ ಸೇರಿಸಿದ ಉಪ್ಪಿನಕಾಯಿಯಿಂದ ಆದಷ್ಟು ದೂರವಿರಿ ಎನ್ನುತ್ತಾರೆ ತಜ್ಞರು.

ಬಿಪಿ ಇರುವವರಿಗೆ ಸಮಸ್ಯೆ

ಉಪ್ಪಿನಕಾಯಿ ಸಂರಕ್ಷಿಸಲು ಹೆಚ್ಚಿನ ಪ್ರಮಾಣದ ಉಪ್ಪು ಸೇರಿಸಲಾಗುತ್ತದೆ. ಬಿಪಿ ಇರುವವರು ಉಪ್ಪಿನಾಂಶ ಹೆಚ್ಚು ತಿನ್ನಬಾರದು. ಆದ್ದರಿಂದ ಉಪ್ಪಿನಕಾಯಿ ಮಿತವಾಗಿ ಬಳಸಬೇಕು. ಇಲ್ಲವಾದರೆ ರಕ್ತದೊತ್ತಡ ಹೆಚ್ಚಾದರೆ ಅದು ಪ್ರಾಣಕ್ಕೆ ಅಪಾಯ ತರಬಹುದು.

ಹೃದಯ ಸಂಬಂಧಿ ಸಮಸ್ಯೆ

ಉಪ್ಪಿನಕಾಯಿ ತಯಾರಿಸುವಾಗ ಸುವಾಸನೆಗಾಗಿ ಹಾಗೂ ಸಂರಕ್ಷಣೆಗಾಗಿ ಹೆಚ್ಚಿನ ಮಸಾಲೆ ಪದಾರ್ಥ, ಹೆಚ್ಚಿನ ಎಣ್ಣೆಯನ್ನು ಬಳಸುತ್ತಾರೆ. ಎಣ್ಣೆ ಸೇವನೆ ಹಾಗೂ ಮಸಾಲೆ ಪದಾರ್ಥಗಳಿಂದ ಪೈಲ್ಸ್‌ ಬರುವ ಸಾಧ್ಯತೆ ಹೆಚ್ಚು. ಕೊಲೆಸ್ಟ್ರಾಲ್‌ನಂತ ಸಮಸ್ಯೆ, ಹೃದಯ ಸಂಬಂಧಿ ಸಮಸ್ಯೆ ಬರುವ ಸಾಧ್ಯತೆ ಹೆಚ್ಚಗಿರುತ್ತದೆ.

ಸಾಧ್ಯವಾದಷ್ಟು ಮನೆಯಲ್ಲಿ ತಯಾರಿಸಿದ ಉಪ್ಪಿನಕಾಯಿಗಳನ್ನು ಮಾತ್ರ ತಿನ್ನಲು ಪ್ರಯತ್ನಿಸಿ. ಅದೂ ಅತಿಯಾಗಿ ಉಪಯೋಗಿಸಬೇಡಿ. ಅತಿಯಾದರೆ ಅಮೃತವೂ ವಿಷ ಎಂಬ ಮಾತಿದೆ. ಉಪ್ಪಿನಕಾಯಿಯನ್ನು ಅಪರೂಪಕ್ಕೆ ಬಾಯಿ ರುಚಿಗೆಂದು ಸೇವಿಸಿ ಒಳ್ಳೆಯದು. ಹಿಂದಿನ ಕಾಲದಿಂದಲೂ ನಮಗೆ ಊಟದ ಜೊತೆ ಉಪ್ಪಿನಕಾಯಿ ತಿನ್ನುವುದು ಒಂದು ಅಭ್ಯಾಸವಾಗಿರುವುದರಿಂದ ಆದಷ್ಟು ಮಿತ ಪ್ರಮಾಣದಲ್ಲಿ ಸೇವನೆ ಮಾಡುವುದು ಒಳ್ಳೆಯದು.

-ಕಾವ್ಯಶ್ರೀ

Advertisement

Udayavani is now on Telegram. Click here to join our channel and stay updated with the latest news.

Next