Advertisement

ಪ್ರತಿ ನೇಕಾರ ಕುಟುಂಬಕ್ಕೂ  ರೈತ ಮಾದರಿ ಸಾಲ ಕೊಡಿ

05:54 PM Feb 08, 2021 | Team Udayavani |

ಬಾಗಲಕೋಟೆ: ಒಬ್ಬ ಕಟ್ಟಡ ಕಾರ್ಮಿಕನಿಗೆ ಸಿಗದಷ್ಟು ಕೂಲಿ ನೇಕಾರರಿಗೆ ಸಿಗುತ್ತಿಲ್ಲ. ನೇಕಾರರು ಸಂಘಟನಾತ್ಮಕವಾಗಿ ಬಂದ ಅವಕಾಶ ಸದುಪಯೋಗ ಮಾಡಿಕೊಳ್ಳಬೇಕು. ರೈತರಿಗೆ ಪಿಕೆಪಿಎಸ್‌ನಲ್ಲಿ ದೊರೆತ ಸಾಲದಂತೆ ಪ್ರತಿ ನೇಕಾರರ ಕುಟುಂಬಕ್ಕೂ ಕನಿಷ್ಟ 25 ಸಾವಿರ ಸಾಲವನ್ನು ಬಿಡಿಸಿಸಿ ಬ್ಯಾಂಕ್‌ ನೀಡಬೇಕು ಎಂದು ತೇರದಾಳ ಶಾಸಕರೂ ಆಗಿರುವ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿದ್ದು ಸವದಿ ಒತ್ತಾಯಿಸಿದರು.

Advertisement

ನವನಗರದ ಕಾಳಿದಾಸ ಕಲ್ಯಾಣ ಮಂಟಪದಲ್ಲಿ ರವಿವಾರ ಬಾಗಲಕೋಟೆ ಜಿಲ್ಲಾ ನೇಕಾರ ಸಹಕಾರಿ ಸಂಘಗಳ ಮಹಾಮಂಡಳದಿಂದ ಹಮ್ಮಿಕೊಂಡಿದ್ದ ಡಿಸಿಸಿ ಬ್ಯಾಂಕ್‌ ಆಡಳಿತ ಮಂಡಳಿ ನಿರ್ದೇಶಕರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜನರ ಮೂಲ ಸೌಕರ್ಯ ಒದಗಿಸುವಲ್ಲಿ ಎರಡು ಜನಾಂಗದ ಕಾರ್ಯ ಶ್ಲಾಘನೀಯವಾಗಿದೆ. ರೈತ ಅನ್ನ ನೀಡಿ ಸಲುಹಿದರೆ, ನೇಕಾರ ಪ್ರತಿಯೊಬ್ಬರ ಮಾನ ಕಾಪಾಡುತ್ತಾನೆ. ರಾಜ್ಯದಲ್ಲಿಯೇ ಬಾಗಲಕೋಟೆ ಜಿಲ್ಲೆಯಲ್ಲಿ ನೇಕಾರರ ಸಂಖ್ಯೆ ಹೆಚ್ಚಾಗಿದೆ. ಆ ಜನಾಂಗದಲ್ಲಿ ಕೇವಲ ಬೆರಳಣಿಕೆಯಷ್ಟು ಜನ  ಸ್ಥಿತಿವಂತರಾಗಿದ್ದಾರೆ. ಉಳಿದವರೆಲ್ಲ ನೇಕಾರಿಕೆಯನ್ನೇ ನಡೆಸಿ ಬದುಕು ಸಾಗಿಸುತ್ತಿದ್ದಾರೆ ಎಂದರು.

ಮಹಾಮಾರಿ ಕೊರೊನಾದಿಂದಾಗಿ ಕೈಮಗ್ಗ ಉದ್ದಿಮೆ ಹಾಗೂ ನೇಕಾರರು ಸಂಕಷ್ಟದಲ್ಲಿದ್ದಾರೆ. ಕಚ್ಚಾ ಮಾಲಿನ ಬೆಲೆ ಏರಿಕೆಯಾಗಿ, ಪಕ್ಕಾ ಮಾಲಿನ ಬೆಲೆಗೆ ಬೇಡಿಕೆ ಇಲ್ಲದಿರುವದರಿಂದ ನೇಕಾರರ ಸಹಕಾರಿ ಸಂಘಗಳು ತೊಂದರೆಗೆ ಒಳಗಾಗಿವೆ. ಈ ವಿಷಯವನ್ನು ಸದನದಲ್ಲಿ ಚರ್ಚಿಸಿ ನೇಕಾರರ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರುವುದಾಗಿ ಹೇಳಿದರು.

ರಾಜ್ಯ ಪತ್ತಿನ ಸಂಘಗಳ ಮಹಾಮಂಡಳದ ನಿರ್ದೇಶಕ ರವೀಂದ್ರ ಕಲಬುರ್ಗಿ ಮಾತನಾಡಿ, ಜಿಲ್ಲೆಯಲ್ಲಿ ತಾಪಂ, ಜಿಪಂಗಳಲ್ಲಿ ಈ ಬಾರಿ ನೇಕಾರರ ಪ್ರತಿನಿಧಿಗಳಿಲ್ಲದೇ ಇರುವುದು ನೋವು ತಂದಿತ್ತು. ಆದರೆ ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಸ್ಥಾನವನ್ನು ನೇಕಾರರ ಸಮುದಾಯಕ್ಕೆ ಒದಗಿಸಿಕೊಟ್ಟ ಬಿಡಿಸಿಸಿ ಆಡಳಿತ ಮಂಡಳಿಗೆ ಧನ್ಯವಾದ ತಿಳಿಸಿದರು.

Advertisement

ನೇಕಾರರಿಗೆ ರೈತರಷ್ಟೆ ಪ್ರಾತಿನಿಧ್ಯ ಕೊಟ್ಟು ಶೂನ್ಯ ಬಡ್ಡಿದರದಲ್ಲಿ ಇಲ್ಲವೇ ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸಬೇಕು. ನೇಕಾರರ ಮಕ್ಕಳಿಗೆ ಉನ್ನತ ವ್ಯಾಸಂಗಕ್ಕಾಗಿ ಶಿಷ್ಯವೇತನ, ಆರೋಗ್ಯ ವಿಮೆ ಒದಗಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ :ಕಳ್ಳರಿಗೆ ಸಿಗುವ ಮರ್ಯಾದೆ ಸಂತರಿಗೂ ಸಿಗಲ್ಲ!

ರಾಜ್ಯದಲ್ಲಿ ನೇಕಾರರ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದು, ವಿದ್ಯುತ್‌ ಚಾಲಿತ ನೇಕಾರರಿಗೆ ಒಂದು ಸ್ಥಾನ, ಕೈಮಗ್ಗ ನೇಕಾರರಿಗೆ ಒಂದು ಸ್ಥಾನ ನೀಡಿ ನೇಕಾರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದರು.

ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಮಂಡಳಿಯವರನ್ನು ಸನ್ಮಾನಿಸಲಾಯಿತು. ಗುಳೇದಗುಡ್ಡ ಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠದ ಬಸವರಾಜ ಪಟ್ಟದಾರ್ಯ ಸ್ವಾಮಿಗಳು, ಹಂಪಿ ಹೇಮಕೂಟ ಗಾಯತ್ರಿ ಪೀಠದ ದಯಾನಂದಪುರಿ ಸ್ವಾಮಿಗಳು, ದೊಡ್ಡಬಳ್ಳಾಪುರ ಪುಷ್ಪಾಂಡಜ ಮಹರ್ಷಿ ಆಶ್ರಮದ ಜ್ಞಾನಾನಂದಗಿರಿ ಸ್ವಾಮೀಜಿ, ಹಳೇ ಹುಬ್ಬಳ್ಳಿಯ ಶಿವಶಂಕರ ಸ್ವಾಮಿಜಿ, ಹರಿಹರದ ಪ್ರಭುಲಿಂಗ ಸ್ವಾಮೀಜಿ ಹಾಗೂ ಬಾಗಲಕೋಟೆಯ ನೀರಕೇರಿ ಸಿದ್ದಾರೂಢ ಮಠದ ಘನಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಿಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ, ನಿರ್ದೇಶಕರಾದ ಎಚ್‌.ವೈ. ಮೇಟಿ, ರಾಮಣ್ಣ ತಳೇವಾಡ, ಶಿವನಗೌಡ ಅಗಸಿಮುಂದಿನ, ನಂದಕುಮಾರ ಪಾಟೀಲ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next